ನ್ಯಾಯಾಲಯಕ್ಕೆ ಹಾಜರಾಗಲು ಅರುಂಧತಿ ರಾಯ್‌ಗೆ ಸು.ಕೋರ್ಟ್ ಸೂಚನೆ
ಹೊಸದಿಲ್ಲಿ,ಜ.22: ಮಾವೋವಾದಿಗಳ ಬೆಂಬಲಿಗನೆಂಬ ಆರೋಪವನ್ನು ಹೊತ್ತಿರುವ ದಿಲ್ಲಿ ವಿವಿಯ ಪ್ರೊಫೆಸರ್ ಜಿ.ಸಾಯಿಬಾಬಾ ಅವರಿಗೆ ಜಾಮೀನು ನೀಡದ್ದಕ್ಕಾಗಿ ನ್ಯಾಯಾಂಗವನ್ನು ಟೀಕಿಸಿ ಬರೆದಿದ್ದ ಲೇಖನಕ್ಕೆ ಸಂಬಂಧಿಸಿದಂತೆ ಸಾಹಿತಿ ಅರುಂಧತಿ ರಾಯ್ ಅವರಿಗೆ ನ್ಯಾಯಾಲಯದಲ್ಲಿ ಹಾಜರಾಗುವುದರಿಂದ ವಿನಾಯಿತಿ ನೀಡಲು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ನಿರಾಕರಿಸಿತು.
ಮುಂದಿನ ವಾರ ತನ್ನೆದುರು ಹಾಜರಾಗುವಂತೆ ಬಾಂಬೆ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಯ್ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯವು, ನ್ಯಾಯಾಲಯವನ್ನು ಎದುರಿಸಲು ನಿಮಗೇಕೆ ಭೀತಿ? ಅದರಲ್ಲಿ ವಿಶ್ವಾಸವನ್ನಿಡಿ ಎಂದು ಹೇಳಿತು.
ತನ್ನ ಮಧ್ಯಾಂತರ ಜಾಮೀನನ್ನು ರದ್ದುಗೊಳಿಸಿರುವುದರ ವಿರುದ್ಧ ಸಾಯಿಬಾಬಾ ಸಲ್ಲಿಸಿರುವ ಮೇಲ್ಮನವಿ ಕುರಿತು ಮಹಾರಾಷ್ಟ್ರ ಸರಕಾರಕ್ಕೆ ನ್ಯಾಯಾಲಯವು ನೋಟಿಸನ್ನು ಹೊರಡಿಸಿತು.
ಸಾಯಿಬಾಬಾರನ್ನು ಕಳೆದ ವರ್ಷ ಬಂಧಿಸಲಾಗಿದ್ದು, ಅವರ ಜಾಮೀನನ್ನು ಡಿ.31ರವರೆಗೆ ವಿಸ್ತರಿಸಲಾಗಿತ್ತು. ಔಟ್‌ಲುಕ್ ಪತ್ರಿಕೆಯ 2015,ಮೇ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಲೇಖನದಲ್ಲಿ ಅವರ ಬಂಧನ ಕುರಿತಂತೆ ರಾಯ್ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.





