ಅಪಹೃತ ಟ್ಯಾಕ್ಸಿ ಚಾಲಕನ ಶವ ಪತ್ತೆ
ದಿಲ್ಲಿಯಲ್ಲಿ ಕಟ್ಟೆಚ್ಚರ
ಹೊಸದಿಲ್ಲಿ, ಜ.22: ಪಠಾಣ್‌ಕೋಟ್‌ನಿಂದ ಮೂವರು ಅಜ್ಞಾತ ವ್ಯಕ್ತಿಗಳು ಅಪಹರಿಸಿದ್ದರೆನ್ನಲಾದ ಟ್ಯಾಕ್ಸಿಯೊಂದರ ಚಾಲಕ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಬಳಿಕ ದಿಲ್ಲಿ ಪೊಲೀಸರು ಶುಕ್ರವಾರ ಕಟ್ಟೆಚ್ಚರವನ್ನು ವಿಧಿಸಿದ್ದಾರೆ. ಈ ಘಟನೆಯು ದೇಶಾದ್ಯಂತ ಐಸಿಸ್ ಶಂಕಿತ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯ ನಡುವೆಯೇ ಭದ್ರತಾ ಕಳವಳವನ್ನುಂಟು ಮಾಡಿದೆ.
ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಪುಟದಲ್ಲಿ ಶಂಕಿತರ ಛಾಯಾ ಚಿತ್ರಗಳು ಹಾಗೂ ವಾಹನದ ವಿವರವನ್ನು ಬಿಡುಗಡೆಗೊಳಿಸಿದ್ದರು. ಜನವರಿ 20ರಂದು ಮೂವರು ಅಜ್ಞಾತ ವ್ಯಕ್ತಿಗಳು ಮಾರುತಿ ಆಲ್ಟೊವನ್ನು ಬಾಡಿಗೆಗೆ ಪಡೆದಿದ್ದರು. ವಿಜಯ್‌ಕುಮಾರ್ ಎಂದು ಗುರುತಿಸಲಾಗಿರುವ, ಆ ಕಾರಿನ ಚಾಲಕ ಬಳಿಕ ಕಂಗ್ರಾದ ಕಲ್ತಾ ಸೇತುವೆಯಲ್ಲಿ ಕೊಲೆಯಾಗಿ ಬಿದ್ದಿರುವುದು ಪತ್ತೆಯಾಯಿತೆಂದು ಪೊಲೀಸರು ಹೇಳಿದ್ದಾರೆ. ವಾಹನವೂ ನೋಂದಣಿಯಾಗಿದ್ದ ಹಿಮಾಚಲದ ಪೊಲೀಸರು, ಆಲ್ಟೊ ಯಾವುದೇ ಟ್ರಾವೆಲ್ ಏಜೆನ್ಸಿಯ ಹೆಸರಿನಲ್ಲಿ ನೋಂದಣಿಯಾಗಿಲ್ಲವೆಂದು ತಿಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಭಯೋತ್ಪಾದಕರು ಪಠಾಣ್‌ಕೋಟ್‌ನ ವಾಯು ಪಡೆಯ ನೆಲೆಯ ಮೇಲೆ ದಾಳಿ ನಡೆಸುವ ಮೊದಲು ಬಾಡಿಗೆಗೆ ಪಡೆದಿದ್ದ ಇನ್ನೊಂದು ವಾಹನದ ಚಾಲಕನ ಹತ್ಯೆ ನಡೆಸಿದ್ದುದು ಪೊಲೀಸರ ಗಾಬರಿಗೆ ಕಾರಣವಾಗಿದೆ.
ಯಾವುದೇ ಗಾಬರಿಗೊಳ್ಳುವ ಅಗತ್ಯವಿಲ್ಲ. ಆದಾಗ್ಯೂ, ಜನರಿಗೆ ಎಚ್ಚರಿಕೆಯಿಂದಿರುವಂತೆ ತಾವು ಮನವಿ ಮಾಡುತ್ತಿದ್ದೇವೆ. ಸುತ್ತಮುತ್ತ ಸಂಶಯಾಸ್ಪದ ಚಟುವಟಿಕೆ ಕಂಡು ಬಂದಲ್ಲಿ ನಾಗರಿಕರು ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಬೇಕೆಂದು ಪೊಲೀಸ್ ಉಪಾಯುಕ್ತ ರಾಜನ್‌ಭಗತ್ ವಿನಂತಿಸಿದ್ದಾರೆ.
ಶುಕ್ರವಾರ ಸಂಜೆ ಇಂಡಿಯಾ ಗೇಟ್‌ನ ಹುಲ್ಲು ಹಾಸಿನಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳು ಸಭೆಯೊಂದನ್ನು ನಡೆಸಿ, ಹೊಸದಿಲ್ಲಿಯ ಸುತ್ತಲಿನ ಪ್ರಮುಖ ಸ್ಥಾವರಗಳ ಭದ್ರತಾ ವಿವರವನ್ನು ಚರ್ಚಿಸಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.





