ಖಾಸಗಿ ವಲಯದಲ್ಲಿಯೂ ಮೀಸಲಾತಿ ಜಾರಿಯಾಗಬಾರದೇಕೆ?
.ಕೆಲದಿನಗಳ ಹಿಂದೆ ನನ್ನ ದೂರದ ಸಂಬಂಧಿಯೊಬ್ಬ ‘‘ಸಾರ್, ಏನು ಓದಿದರೂ ಏನು ಪ್ರಯೋಜನ ಸಾರ್? ಎಲ್ಲೂ ಕೆಲಸ ಸಿಗುತ್ತಿಲ್ಲ. ಎಲ್ಲಾ ಕಡೆ ಹೋದರೂ ಜಾತಿ ಕೇಳ್ತಾರೆ. ಕೆಲವು ಕಡೆ ಕೇಳೋಕ್ಕಿಂತ ಮೊದಲೇನೆ ಫೇಸ್‌ಬುಕ್, ವ್ಯಾಟ್ಸಪ್ ಮೂಲಕ ಜಾತಿ ತಿಳ್ಕೋತಾರೆ. ಸರಕಾರದ ಕೆಲಸ ಅಂದ್ರೆ, ನೇಮಕಾತಿನೇ ಇಲ್ಲ. ಏನ್ ಮಾಡೋದು ಸಾರ್’’ ಎಂದ. ಪದವಿಯಲ್ಲಿ ಉತ್ತಮ ಪರ್ಸೆಂಟೇಜ್ ಪಡೆದಿದ್ದ ಆ ಸಂಬಂಧಿಯ ಮಾತು ಕಲ್ಪನೆಯಲ್ಲ, ಸದ್ಯದ ವಾಸ್ತವವೆಂದು ಅರೆಕ್ಷಣದಲ್ಲೆ ಅರ್ಥವಾಗಿಹೋಗಿತ್ತು.
ಹೌದು, ಉದ್ಯೋಗವೆಂಬುದು ಇಂದು ಶೋಷಿತ ಸಮುದಾಯಗಳಿಗೆ ಜಾತಿಯ ತಡೆಯ ಮೂಲಕ ಮರೀಚಿಕೆಯಾಗುತ್ತಿದೆ. ಯಾವ ಅವಕಾಶಗಳ ಸಮಾನತೆಗೆ ಸಂವಿಧಾನ ನಿರ್ಮಾತೃಗಳು ಅನುಚ್ಛೇದ 15(4)ಮತ್ತು ಅನುಚ್ಛೇದ 16(4)ರಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಿದರೋ ಅದು ಇಂದು ಕೆಲಸಕ್ಕೆ ಬಾರದ ಸರಕಾಗುತ್ತಿದೆ. ಯಾಕೆಂದರೆ ಸರಕಾರದ ಈ ಮೀಸಲಾತಿ ಅನ್ವಯವಾಗುವ ಸರಕಾರಿ ಕ್ಷೇತ್ರದ ಉದ್ಯೋಗ ಬೆಳವಣಿಗೆ ದರ 1992ರ ಉದಾರೀಕರಣ, ಖಾಸಗೀಕರಣ, ಜಾಗತೀಕರಣ ಸಂದಭರ್ದಲ್ಲಿ +1.53ರಷ್ಟಿದ್ದರೆ 2010ಕ್ಕೆ ಅದು -0.65ಕ್ಕೆ ಕುಸಿದಿದೆ! ಅದು ಋಣಾತ್ಮಕ ಬೆಳವಣಿಗೆ. ಅರ್ಥಾತ್ ಸರಕಾರಿ ಉದ್ಯೋಗಗಳ ಕಡಿತ! ಇನ್ನು ಅದೇ ಉದಾರೀಕರಣ, ಖಾಸಗೀಕರಣ, ಜಾಗತೀಕರಣ ಪರಿಣಾಮ 1992ರಲ್ಲಿ +0.4ರಷ್ಟಿದ್ದ ಖಾಸಗಿ ಉದ್ಯೋಗ ಕ್ಷೇತ್ರ ಬೆಳವಣಿಗೆ ದರ 2010ರ ಹೊತ್ತಿಗೆ +1.75ಕ್ಕೆ ಜಿಗಿದಿದೆ! ಅಂದರೆ ಉದ್ಯೋಗ ಸೃಷ್ಟಿಗೇನು ಕೊರತೆ ಇಲ್ಲ. ಆದರೆ ಸೃಷ್ಟಿಯಾಗುತ್ತಿರುವ ಈ ಖಾಸಗಿ ಉದ್ಯೋಗಗಳೆಲ್ಲ ಯಾರ ಪಾಲಾಗುತ್ತಿವೆ ಎಂಬುದೇ ಸದ್ಯ ಇಲ್ಲಿ ಅರ್ಥಮಾಡಿಕೊಳ್ಳಬೇಕಾಗಿರುವ ವಾಸ್ತವ. ಒಟ್ಟಾರೆ ಕುಸಿಯುತ್ತಿರುವ ಸರಕಾರಿ ಹುದ್ದೆಗಳಿಂದ ನಷ್ಟಕ್ಕೊಳಗಾಗುತ್ತಿರುವವರು ಅರ್ಥಾತ್ ಉದ್ಯೋಗಾವಕಾಶ ಪಡೆಯದೆ ನಿರುದ್ಯೋಗಿಗಳಾಗುತ್ತಿರುವವರು ಶೇ.27ರಷ್ಟು ಮೀಸಲು ಪಡೆಯುತ್ತಿರುವ ಒಬಿಸಿಗಳು-ಅಲ್ಪಸಂಖ್ಯಾತರು, ಶೇ.15ರಷ್ಟು ಮೀಸಲು ಪಡೆಯುತ್ತಿರುವ ಎಸ್ಸಿಗಳು ಮತ್ತು ಶೇ.7.5ರಷ್ಟು ಮೀಸಲು ಪಡೆಯುತ್ತಿರುವ ಎಸ್ಟಿಗಳು. ಇದು ಸಂವಿಧಾನ ವಿರೋಧಿ ವಾತಾವರಣವಲ್ಲವೇ? ಯಾವ ಸಮಾನತೆಯನ್ನು ಸಂವಿಧಾನ ಪ್ರತಿಪಾದಿಸುತ್ತದೆಯೋ ಅದಕ್ಕೆ ವಿರುದ್ಧವಲ್ಲವೇ? ಉದಾಹರಣೆಗೆ ಸಮಾಜದ ಹಿಂದುಳಿದ ವರ್ಗಗಳಿಗೆ ‘ಅವಕಾಶಗಳಲ್ಲಿ ಸಮಾನತೆ ಅನ್ವಯ’ ಪ್ರಾತಿನಿಧ್ಯ ನೀಡಲು ಸಂವಿಧಾನ ಮೀಸಲಾತಿ ನೀಡಬೇಕು ಎಂದಿತು. ಆದರೆ ಈಗ ಅವಕಾಶಗಳೇ ಇಲ್ಲವೆಂದರೆ ಮೀಸಲಾತಿ ನೀಡುವುದಾದರೂ ಎಲ್ಲಿ? ಅಂದರೆ ಸರಕಾರಿ ಉದ್ಯೋಗ ಕ್ಷೇತ್ರ ಎಂಬ ಖಾಲಿ ಕೊಡದಿಂದ ಒಬಿಸಿ ಮತ್ತು ಅಲ್ಪಸಂಖ್ಯಾತರಿಗೆ ಶೇ. 27, ಎಸ್ಸಿಗಳಿಗೆ ಶೇ. 15, ಎಸ್ಟಿಗಳಿಗೆ ಶೇ. 7.5 ಕೊಡುವುದೆಂದರೆ ಏನು? ಏನೂ ಇಲ್ಲ, ಶುದ್ಧ ಮೋಸ. ಹಾಗಿದ್ದರೆ ಕೊಡಬೇಕಿರುವುದು ಎಲ್ಲಿಂದ? ಎಲ್ಲಿ ತುಂಬಿದೆಯೋ ಅಥವಾ ತುಂಬಲ್ಪಡುತ್ತಿದೆಯೋ ಅಲ್ಲಿಂದ. ಅಂದರೆ ಖಾಸಗಿ ಉದ್ಯೋಗ ಕ್ಷೇತ್ರದಿಂದ. ನಮ್ಮ ಸಂವಿಧಾನವೇನು ಸರಕಾರಿ ಉದ್ಯೋಗದಲ್ಲಿ ಮಾತ್ರವೇ ಮೀಸಲಾತಿ ನೀಡಿ ಎಂದು ಶಾಸಕಾಂಗಕ್ಕೆ ಆದೇಶಿಸುವುದಿಲ್ಲ. ಅದರ ಸೂಚನೆ ಎಂದರೆ ‘‘ಹಿಂದುಳಿದ ವರ್ಗಗಳ ಏಳಿಗೆಗೆ ರಾಜ್ಯ (ಆಡಳಿತ ವ್ಯವಸ್ಥೆ) ಯಾವುದೇ ಕಾನೂನು ಮಾಡಿದರೂ ಅದನ್ನು ಈ ಸಂವಿಧಾನದಲ್ಲಿರುವ ಯಾವುದೂ ತಡೆಯುವಂತಿಲ್ಲ’’ ಎಂದು. ಅಂದರೆ ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡುತ್ತಿರುವ ಅನುಚ್ಛೇದ 15(4) ಮತ್ತು ಅನುಚ್ಛೇದ 16(4) ಬಳಸಿಯೇ ಶಾಸಕಾಂಗ ಖಾಸಗಿ ರಂಗದಲ್ಲಿಯೂ ಮೀಸಲಾತಿ ಜಾರಿಗೊಳಿಸಬಹುದು. ಆದರೆ ಅದಕ್ಕೆ ಬದ್ಧತೆ, ದೃಢನಿಶ್ಚಯ ಬೇಕಷ್ಟೆ. ಅಂದರೆ ಸಂವಿಧಾನದ ಅನುಸಾರ ಅವಕಾಶವಂಚಿತ ವರ್ಗಗಳಿಗೆ ಖಾಸಗಿ ವಲಯದಲ್ಲಿಯೂ ಮೀಸಲಾತಿ ನೀಡಬೇಕು ಎಂಬ ಬದ್ಧತೆ, ದೃಢ ಆಲೋಚನೆ, ನ್ಯಾಯಪರತೆ ಸಂಬಂಧಪಟ್ಟ ಸರಕಾರಗಳಿಗೆ, ಅದು ಕೇಂದ್ರವೂ ಇರಬಹುದು ರಾಜ್ಯವೂ ಇರಬಹುದು ಇರಬೇಕು. ಅಂದಹಾಗೆ ಇದನ್ನು ಸುಪ್ರೀಂ ಕೋರ್ಟ್ ಯಥಾಪ್ರಕಾರ ರದ್ದುಪಡಿಸಬಹುದು. ಆದರೆ ಅರ್ಧಕ್ಕಿಂತ ಹೆಚ್ಚು ರಾಜ್ಯಗಳು ಅನುಮೋದಿಸಿ, ಸಂಸತ್ತು ಮೂರನೆ ಎರಡರಷ್ಟು ಬಹುಮತದೊಂದಿಗೆ ಅಂಗೀಕರಿಸಿ ಮತ್ತು ಸದರಿ ಕಾಯ್ದೆಯನ್ನು ಷೆಡ್ಯೂಲ್ 9ರಲ್ಲಿ ಸೇರಿಸಿದರೆ ಸುಪ್ರೀಂ ಕೋರ್ಟ್ ಕೂಡ ಏನೂ ಮಾಡಲು ಸಾಧ್ಯವಿಲ್ಲ. ಹೀಗಿರುವಾಗ ಖಾಸಗಿರಂಗದಲ್ಲಿ ಮೀಸಲಾತಿ ಜಾರಿಗೊಳಿಸುವುದು ಅದ್ಹೇಗೆ ಅಸಾಧ್ಯ?
ಮತ್ತೊಂದು ಪ್ರಶ್ನೆ ಈ ಸಂದರ್ಭದಲ್ಲಿ ಹುಟ್ಟಿಕೊಳ್ಳುತ್ತದೆ. ಅದೆಂದರೆ ಮಸೂದೆ ಜಾರಿಗೊಳಿಸಿದರೂ ಖಾಸಗಿ ಕಂಪೆನಿಗಳು ಈ ಮೀಸಲಾತಿ ಜಾರಿಗೊಳಿಸುತ್ತವೆಂಬುದಕ್ಕೆ ಏನು ಗ್ಯಾರಂಟಿ? ಎಂಬುದು. ಉತ್ತರ, ಖಂಡಿತ ಇಲ್ಲ. ಈ ಬಗ್ಗೆ ಹಿಂದಿನ ಯುಪಿಎ ಸರಕಾರ ಖಾಸಗಿ ಕಂಪೆನಿಗಳಿಗೆ 2004ರಲ್ಲಿ ಎಸ್ಸಿ-ಎಸ್ಟಿಗಳಿಗೆ ಖಾಸಗಿ ವಲಯದಲ್ಲಿ ಮೀಸಲಾತಿ ನೀಡಬೇಕು ಎಂದು ಕೇಳಿಕೊಂಡಾಗ ಅಂದಿನ ಭಾರತೀಯ ಕೈಗಾರಿಕೆಗಳ ಒಕ್ಕೂಟ(ಸಿಐಐ)ದ ಅಧ್ಯಕ್ಷ ವೈ.ಸಿ.ದೇವೇಶ್ವರ್ ಎಂಬವರು ಹೇಳಿದ್ದೇನು ಗೊತ್ತೇ? ‘‘ಕೈಗಾರಿಕಾ ವಲಯದ ಯಾರೂ ಕೂಡ ಉದ್ಯೋಗ ಮೀಸಲಾತಿಗೆ ಒಪ್ಪುವುದಿಲ್ಲ’’ ಎಂದು. ಈ ಸಂದರ್ಭದಲ್ಲಿ ಅಂದಿನ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಎಸ್ಸಿ-ಎಸ್ಟಿಗಳಿಗೆ ಖಾಸಗಿ ವಲಯದಲ್ಲಿ ಮೀಸಲಾತಿ ನೀಡುವ ಸಂಬಂಧ ಸಾಧ್ಯತೆ ಗಳನ್ನು ಪರಿಶೀಲಿಸುವಂತೆ ಸುಮಾರು 218 ಕಂಪೆನಿಗಳಿಗೆ ಪತ್ರ ಬರೆಯಿತು. ಉತ್ತರ ಬಂದಿದ್ದು ಎಷ್ಟು ಕಂಪೆನಿಗಳಿಂದ ಗೊತ್ತೇ? ಕೇವಲ 21 ಕಂಪೆನಿಗಳಿಂದ! ಇನ್ನುಳಿದ 197 ಕಂಪೆನಿಗಳು ಈ ಬಗ್ಗೆ ಕ್ಯಾರೇ ಎನ್ನಲಿಲ್ಲ.
ಈ ಸಂದರ್ಭದಲ್ಲಿ ಖಾಸಗಿ ಕಂಪೆನಿಗಳು ಯಾಕೆ ಸರಕಾರಿ ಮಾದರಿಯಲ್ಲಿ ಮೀಸಲಾತಿ ನೀಡಬೇಕು ಎಂಬ ಮತ್ತೊಂದು ಪ್ರಶ್ನೆಯೂ ಮೂಡುತ್ತದೆ. ಹಾಗೆ ಉತ್ತರ ಸತ್ಯವೂ ಇದೆ. ಅದೆಂದರೆ ಖಾಸಗಿ ಕಂಪೆನಿಗಳು ಬಹುಪಾಲು ಭೂಮಿ ಪಡೆಯುವುದು ಎಲ್ಲಿಂದ? ಸರಕಾರದಿಂದ! ಸರಕಾರ, ಉದಾಹರಣೆಗೆ ಕರ್ನಾಟಕ ಸರಕಾರ ಕೆಐಎಡಿಬಿ ಎಂಬ ಸಂಸ್ಥೆ ತೆರೆದಿದೆ. ಅದರ ಅರ್ಥ ಏನು ಗೊತ್ತೆ? ‘ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ’. ಈ ಮಂಡಳಿಯ ಅಡಿಯಲ್ಲಿ ರಾಜ್ಯ ಸರಕಾರ ಕೈಗಾರಿಕಾ ಪ್ರದೇಶಗಳನ್ನು ಅರ್ಥಾತ್ ಭೂಮಿಯನ್ನು ಕೈಗಾರಿಕೆಗಳ ಅಗತ್ಯಕ್ಕೆ ತಕ್ಕಂತೆ ಅಭಿವೃದ್ಧಿಪಡಿಸುತ್ತದೆ ಮತ್ತು ಅದನ್ನು ಅಗ್ಗದ ದರದಲ್ಲಿ ಕಂಪೆನಿಗಳಿಗೆ ನೀಡುತ್ತದೆ. ಅಂದರೆ ಭೂಮಿ ಸರಕಾರದ್ದು ಎಂದಾಯಿತು. ಇನ್ನು ಕೈಗಾರಿಕೆಗಳಿಗೆ ಅಗತ್ಯವಾದ ನೀರು ಅದೇನು ಕಂಪೆನಿಗಳಿಗೋಸ್ಕರ ಆಕಾಶದಿಂದ ಪ್ರತ್ಯೇಕವಾಗಿ ಉದುರುತ್ತದೆಯೇ? ಖಂಡಿತ ಇಲ್ಲ. ಸರಕಾರ ಜನರಿಗೆ, ದನ-ಕರುಗಳಿಗೆ ಕುಡಿಯಲು ನೀರಿಲ್ಲದಿದ್ದರೂ ಪರವಾಗಿಲ್ಲ ಕೈಗಾರಿಕೆಗಳಿಗೆ ದಂಡಿ ನೀರು ಒದಗಿಸುತ್ತದೆ. ಇನ್ನು ವಿದ್ಯುತ್? ರೈತರು ವಿದ್ಯುತ್ತಿಲ್ಲದೆ ಸಾಯುತ್ತಿದ್ದರೂ ಯಾವುದೇ ಕೈಗಾರಿಕೆ ಮಾಲಕನೂ ವಿದ್ಯುತ್ ಇಲ್ಲ ಎಂದು ಸತ್ತಿಲ್ಲ! ಅಂದರೆ ವಿದ್ಯುತ್ ಯಾವ ಪರಿ ಸರಕಾರ ಪೂರೈಕೆ ಮಾಡುತ್ತದೆ ಎಂಬುದು ತಿಳಿಯುತ್ತದೆ. ಇದಲ್ಲದೆ ಖಾಸಗಿ ಕಂಪೆನಿಗಳಿಗೆ, ಕೈಗಾರಿಕೆಗಳಿಗೆ ಅಚ್ಚುಕಟ್ಟಾದ ರಸ್ತೆಗಳು, ಸಾರಿಗೆ ವ್ಯವಸ್ಥೆ, ಮಾರುಕಟ್ಟೆ ವ್ಯವಸ್ಥೆ, ಸಬ್ಸಿಡಿ, ಕಡಿಮೆ ಬಡ್ಡಿದರದ ಸಾಲ, ತೆರಿಗೆಯಲ್ಲಿ ರಿಯಾಯಿತಿ, ಇನ್ನು ಅವರನ್ನು ಹೊತ್ತು ಮೆರೆಸಲು ವರ್ಷಕ್ಕೊಮ್ಮೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ. ಅಬ್ಬಬ್ಬಾ! ಸರಕಾರ ಖಾಸಗಿ ಕಂಪೆನಿಗಳಿಗೆ ಏನೆಲ್ಲಾ ನೀಡುತ್ತದೆ ಎಂಬುದನ್ನು ಊಹಿಸಿಕೊಂಡರೆ ಎಂಥವರಿಗಾದರೂ ಹೌದಾ! ಎನಿಸುವುದರಲ್ಲಿ ಸಂಶಯವಿಲ್ಲ. ಅಂದಹಾಗೆ ಹೀಗೆಲ್ಲ ಅವು ಸರಕಾರದಿಂದ ಭರಪೂರ ನೆರವು ಪಡೆದರೂ ಅವುಗಳನ್ನು ಖಾಸಗಿ ಕಂಪೆನಿಗಳು ಎನ್ನಲಾಗುತ್ತದೆ! ಇರಲಿ, ಸಂತೋಷ. ಪ್ರಶ್ನೆಯೇನೆಂದರೆ ಸರಕಾರಗಳಿಂದ ಈ ಪರಿ ನೆರವು ಪಡೆಯುವ ಕಂಪೆನಿಗಳು ಅದೇ ಸರಕಾರ ರೂಪಿಸುವ ಉದ್ಯೋಗ ಮೀಸಲಾತಿಯನ್ನು ಏಕೆ ಅನುಷ್ಠಾನಗೊಳಿಸಬಾರದು ಎಂಬುದು? ಈ ನಿಟ್ಟಿನಲ್ಲಿ ಹೆಸರು ‘ಖಾಸಗಿ’ಯಾದರೂ ಮೂಲಸೌಕರ್ಯವೆಲ್ಲ ಸರಕಾರದ್ದು. ಹೀಗಿರುವಾಗ ಅಂತಹದ್ದೆ ಮೂಲಭೂತ ಸರಕಾರದ ಉದ್ಯೋಗ ನೀತಿಯನ್ನು ಖಾಸಗಿ ಕಂಪೆನಿಗಳು ಅನುಸರಿಸಬಾರದೇಕೆ ಮತ್ತು ಈ ಬಗ್ಗೆ ಸರಕಾರಿ ಮೀಸಲಾತಿ ಪಡೆಯುವ ವರ್ಗಗಳು ಸರಕಾರ ಮತ್ತು ಅಂತಹ ಖಾಸಗಿ ಕಂಪೆನಿಗಳನ್ನು ಒತ್ತಾಯಿಸಬಾರದೇಕೆ? ಎಂಬುದು.
ಖಂಡಿತ, ಖಾಸಗಿ ವಲಯದಲ್ಲಿನ ಮೀಸಲಾತಿ ಅಕ್ಷರಶಃ ಪ್ರಾಯೋಗಿಕ ಹಾಗೂ ಅನುಷ್ಠಾನ ಸಾಧ್ಯವಾದದ್ದು. ಜಾರಿಗೊಳಿಸಲು ಸಾಧ್ಯವಿಲ್ಲವೆಂದರೆ ಅಂತಹ ಕಂಪೆನಿಗಳಿಂದ ಮೂಲಭೂತ ಸೌಕರ್ಯ ಕಿತ್ತುಕೊಳ್ಳುವ, ಅದರ ಲೈಸೆನ್ಸ್ ರದ್ದುಗೊಳಿಸುವ, ಅದನ್ನು ನಿಷೇಧಿಸುವ ಮತ್ತು ಅದನ್ನು ಕಪ್ಪು ಪಟ್ಟಿಗೆ ಸೇರಿಸುವ ಅವಕಾಶ ಸರಕಾರಕ್ಕೆ ಇದ್ದೇ ಇದೆ. ಈ ನಿಟ್ಟಿನಲ್ಲಿ ಸರಕಾರ ಮಾಡಬೇಕಾದ್ದೆಂದರೆ ಕೂಡಲೇ ಖಾಸಗಿ ವಲಯದಲ್ಲಿಯೂ ಮೀಸಲಾತಿ ಜಾರಿಗೊಳಿಸುವುದು. ಈ ಸಂಬಂಧ ಮಸೂದೆಯೊಂದನ್ನು ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸುವುದು ಮತ್ತು ಕೇಂದ್ರವನ್ನು ಕೂಡ ಅದು ಖಾಸಗಿ ವಲಯದಲ್ಲಿಯೂ ಮೀಸಲಾತಿ ತರುವ ಸಂಬಂಧ ಶೀಘ್ರದಲ್ಲೇ ಒಂದು ಮಸೂದೆ ತಯಾರಿಸಿ ಅಂಗೀಕರಿಸುವಂತೆ ಕೇಳುವುದು. ಇದು ಸುಲಭದ ಕೆಲಸವಲ್ಲ. ಈ ಸಂಬಂಧ ಪ್ರಬಲವಾದ ಜನಾಭಿಪ್ರಾಯ ಮೂಡಿಸಬೇಕಾಗುತ್ತದೆ, ವಿಶೇಷವಾಗಿ ಮೀಸಲಾತಿ ಪಡೆಯುವ ವರ್ಗಗಳು ಹಂತಹಂತವಾಗಿ ಪ್ರಬಲ ಹೋರಾಟ ರೂಪಿಸಬೇಕಾಗುತ್ತದೆ. ಒಂದು ಮಾಹಿತಿ. ಬರುವ ಫೆಬ್ರವರಿ 3, 4 ಮತ್ತು 5ರಂದು ರಾಜ್ಯ ಸರಕಾರ ಬೆಂಗಳೂರಿನಲ್ಲಿ ‘ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ(ಜಿಮ್)’ ಹಮ್ಮಿಕೊಂಡಿದೆ. ಈ ಸಂಬಂಧ ರಾಜ್ಯ ಸರಕಾರ ಸರ್ವ ತಯಾರಿಯನ್ನು ಶರವೇಗದಿಂದ ನಡೆಸುತ್ತಿದೆ. ಮಾನ್ಯ ಮುಖ್ಯಮಂತ್ರಿಗಳು ಈ ಸಮಾವೇಶದ ಮೂಲಕ 4ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದ್ದಾರೆ. ಪ್ರಶ್ನೆಯೇನೆಂದರೆ ಹಾಗೆ ಸೃಷ್ಟಿಯಾಗುವ 4ಲಕ್ಷ ಉದ್ಯೋಗಗಳಲ್ಲಿ ಒಬಿಸಿ/ಎಸ್ಸಿ/ಎಸ್ಟಿ/ಅಲ್ಪಸಂಖ್ಯಾತ ಸಮುದಾಯಗಳಿಗೆ ಸಿಗುವ ಪಾಲು? ಈ ನಿಟ್ಟಿನಲ್ಲಿ ಖಾಸಗಿ ವಲಯದಲ್ಲೂ ಮೀಸಲಾತಿ ಜಾರಿಗೊಳಿಸಲು ಇದು ಪ್ರಶಸ್ತ ಸಮಯವಲ್ಲವೇ? ಈ ಹಿನ್ನೆಲೆಯಲ್ಲಿ ಖಾಸಗಿ ವಲಯದಲ್ಲಿಯೂ ಮೀಸಲಾತಿ ಜಾರಿಯಾಗಲಿ, ಸಂವಿಧಾನದ ಸಮಾನತೆಯ ಅನುಶಾಸನ ಎಲ್ಲೆಡೆಯೂ ಜಾರಿಗೆ ಬರಲಿ ಎಂಬುದೇ ಸದ್ಯದ ಕಳಕಳಿ.