30ರಂದು ಪ್ರೌಢಶಾಲಾ ಸಹ ಶಿಕ್ಷಕರಿಂದ ಉಪವಾಸ ಸತ್ಯಾಗ್ರಹ
ಉಡುಪಿ, ಜ.22: ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ನೇತೃತ್ವದಲ್ಲಿ ಹುತಾತ್ಮರ ದಿನವಾದ ಜ.30ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘದ ಉಡುಪಿ ಜಿಲ್ಲಾ ಶಾಖೆಯ ಅಧ್ಯಕ್ಷ ಕೆ.ಕಿರಣ್ ಹೆಗ್ಡೆ ತಿಳಿಸಿದ್ದಾರೆ.
ಕಳೆದ ವರ್ಷದ ಜನವರಿ ಹಾಗೂ ಆಗಸ್ಟ್ ತಿಂಗಳಲ್ಲಿ ಸಹ ಶಿಕ್ಷಕರ ಪ್ರಮುಖ ಬೇಡಿಕೆ, ಸಮಸ್ಯೆಗಳನ್ನು ಪರಿಹರಿಸುವ ಭರವಸೆಯನ್ನು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ನೀಡಿದ್ದರೂ, ಅವುಗಳು ಇದುವರೆಗೂ ಈಡೇರಿಲ್ಲ ಎಂದು ಅವರು ಅಸಮಾಧಾನ ವಕ್ತಪಡಿಸಿದ್ದಾರೆ.
ಸರಕಾರದ ಯಾವುದೇ ಬೆದರಿಕೆಗೂ ಬಗ್ಗದೆ 2016ರ ಸಾಲಿನ ಎಸೆಸೆಲ್ಸಿ ವೌಲ್ಯಮಾಪನ ಕಾರ್ಯವನ್ನು ಸಂಪೂರ್ಣವಾಗಿ ರಾಜ್ಯವ್ಯಾಪಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದವರು ಎಚ್ಚರಿಸಿದರು.
ಕಾರ್ಯದರ್ಶಿ ಪ್ರಭಾಕರ ಶೆಟ್ಟಿ, ಕೋಶಾಧಿಕಾರಿ ಕಮಲಾಕರ, ಚೆನ್ನಯ್ಯ ಯು., ಸತೀಶ್ ಐತಾಳ್, ನಾರಾಯಣ ಮುಂತಾದವರು ಉಪಸ್ಥಿತರಿದ್ದರು.





