ಮೋದಿಯ ಮುಂದಿರುವ ಸಂಪುಟ ವಿಸ್ತರಣೆ
ಇನ್ನೇನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯಾಗಿ ಬಿಡುತ್ತದೆ. ಅದರ ಬೆನ್ನಿಗೇ ನರೇಂದ್ರ ಮೋದಿ ಸಂಪುಟ ವಿಸ್ತರಣೆಯ ಸವಾಲನ್ನು ಎದುರಿಸಬೇಕಾಗಿದೆ. ಶೀಘ್ರವೇ ಸಂಪುಟ ವಿಸ್ತರಣೆ ಮಾಡಲಿರುವ ಸೂಚನೆಯನ್ನು ಪಕ್ಷ ಮುಖಂಡರು ನೀಡಿದ್ದಾರೆ.ಮೋದಿ ಎದುರಿಸಬೇಕಾಗಿರುವ ಅತೀ ದೊಡ್ಡ ಸವಾಲು ಇದು.ಯಾಕೆಂದರೆ ಈಗಾಗಲೇ ‘ಬಿಜೆಪಿಯೊಳಗೆ ಪ್ರತಿಭಾವಂತರ ಕೊರತೆಯಿದೆ’ ಎನ್ನುವುದನ್ನು ಬಿಜೆಪಿಯೊಳಗಿನ ಜನರೇ ಹೇಳಿಕೊಂಡಿದ್ದಾರೆ. ಅಂದರೆ ಪ್ರತಿಭಾವಂತರೆಲ್ಲ ಆರೆಸ್ಸೆಸ್‌ನೊಳಗೇ ಇದ್ದಾರೆ, ಅವರನ್ನು ನಿಮ್ಮ ಸಂಪುಟಕ್ಕೆ ತೆಗೆದುಕೊಳ್ಳಿ ಎನ್ನುವ ಸೂಚನೆ ಇದಾಗಿದೆ. ಅಮಿತ್ ಶಾರನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ಪುನರಾಯ್ಕೆ ಮಾಡುವುದು ಬಹುತೇಕ ಖಚಿತವಾಗಿದ್ದರೂ, ಅದಕ್ಕಾಗಿ ಮೋದಿಯೂ ದೊಡ್ಡ ಬೆಲೆ ತೆರಬೇಕಾಗಿದೆ. ಅಂದರೆ ಆರೆಸ್ಸೆಸ್ ಮತ್ತು ಮೋದಿ ನಡುವೆ ಕೊಡುಕೊಳ್ಳುವಿಕೆಗಳು ನಡೆಯಲಿವೆ.ಅಂದರೆ ಆರೆಸ್ಸೆಸ್‌ನವರು ನೀಡುವ ಸರಪಳಿಗಳನ್ನು ಮೋದಿಯವರು ತನ್ನ ಕೈ ಕಾಲುಗಳಿಗೆ ತಾನೇ ತೊಟ್ಟುಕೊಳ್ಳಬೇಕು. ಆರೆಸ್ಸೆಸ್ ಸೂಚಿಸಿದ ವ್ಯಕ್ತಿಗಳಿಗೆ ಸಂಪುಟದಲ್ಲಿ ಸ್ಥಾನವನ್ನು ನೀಡುವುದು ನರೇಂದ್ರ ಮೋದಿಗೆ ಅನಿವಾರ್ಯವಾಗಿದೆ.
ಮೋದಿಯ ಹಿಂದಿನ ವರ್ಚಸ್ಸು ಈಗ ಬಹಳಷ್ಟು ಕುಂದಿದೆ. ಆಡಳಿತದ ಬಗ್ಗೆ ಪಕ್ಷದೊಳಗೇ ಅಪಸ್ವರ ಕೇಳಿ ಬರುತ್ತಿದೆ. ಆಳುವ ಬಿಜೆಪಿ, 2017ರಲ್ಲಿ ಅತೀ ಹೆಚ್ಚು ಜನಸಂಖ್ಯೆಯಿರುವ ಉತ್ತರ ಪ್ರದೇಶದಲ್ಲಿ ನಿರ್ಣಾಯಕ ಚುನಾವಣೆಯನ್ನು ಎದುರಿಸಲಿದೆ. ಬಹುಶಃ ಅದು, 2019ರ ಮಹಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಈ ಚುನಾವಣೆಯನ್ನು ಗೆಲ್ಲಲೇಬೇಕು. ಬಿಹಾರದ ಸೋಲು ಉತ್ತರ ಪ್ರದೇಶದಲ್ಲಿ ಪುನರಾವರ್ತನೆಯಾದರೆ ಅದು ಮೋದಿ ಸರಕಾರಕ್ಕೆ ಭಾರೀ ಹಿನ್ನಡೆಯಾಗಬಹುದು. ಆದುದರಿಂದ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು, ಅಸಮಾಧಾನಗಳನ್ನು ತಣಿಸುವುದಕ್ಕಾಗಿಯಾದರೂ ಸಂಪುಟ ವಿಸ್ತರಣೆ ಮಾಡಲೇಬೇಕಾಗಿದೆ. ಇದೇ ಸಂದರ್ಭದಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಬಜೆಟ್ ಬಳಿಕ ರಕ್ಷಣಾ ಸಚಿವರಾಗುವ ಕುರಿತಂತೆ ಮಾಹಿತಿಗಳು ಹೊರ ಬೀಳುತ್ತಿವೆ.63ರ ಹರೆಯದ ಜೇಟ್ಲಿ, ಮಹತ್ತ್ವದ ತೆರಿಗೆ ಸುಧಾರಣೆಯನ್ನು ಮುಂದೆ ಸಾಗಿಸಲು ವಿಫಲರಾಗಿದ್ದಾರೆ.ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸಿ ಕಾರ್ಮಿಕ ಬಲವನ್ನು ವಿಸ್ತರಿಸಲು ಸೋತಿದ್ದಾರೆ.ವೇಗವಾಗಿ ಬೆಳೆಯುತ್ತಿರುವ ಭಾರತದ ಆರ್ಥಿಕತೆಯ ಅವರ ಮೇಲ್ವಿಚಾರಣೆ ವಿಫಲವಾಗಿದೆಯೆಂಬ ಟೀಕೆಗಳು ಕೂಡ ಕೇಳಿ ಬಂದಿವೆ. ಒಂದು ವೇಳೆ ಜೇಟ್ಲಿ ಅಲ್ಲಿಂದ ಹೊರ ಬಿದ್ದಲ್ಲಿ, ವಿದ್ಯುತ್ ಮತ್ತು ಇಂಧನ ಸಚಿವ ಗೋಯಲ್ ವಿತ್ತ ಖಾತೆಯನ್ನು ವಹಿಸಿಕೊಳ್ಳುವ ಸಾಧ್ಯತೆಗಳಿವೆ.ಹಾಗೆಯೇ ಕೆಲವು ಅನುಪಯುಕ್ತರ ಕೈಯಿಂದ ಖಾತೆ ಕಿತ್ತುಕೊಳ್ಳುವ ಸಾಧ್ಯತೆಗಳಿವೆ. ಗೋಯಲ್ ವಿತ್ತ ಖಾತೆಯನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲರೇ, ಮುಖ್ಯವಾಗಿ ಅವರು ಮೋದಿಯ ಕಾರ್ಪೊರೇಟ್ ಮಿತ್ರರಿಗೆ ಅನುಕೂಲವಾಗುವಂತೆ ಆರ್ಥಿಕ ಸುಧಾರಣೆಗಳಿಗೆ ಸ್ಪಂದಿಸಬಲ್ಲರೇ ಎನ್ನುವುದನ್ನೂ ಕಾದು ನೋಡಬೇಕಾಗಿದೆ. ಗೋಯಲ್ ಉತ್ತಮ ಸಂವಹನಕಾರನಾಗಿದ್ದು, ಮೋದಿಯವರ ಜೊತೆ ಹಲವು ಬಾರಿ ವಿದೇಶಗಳಿಗೆ ತೆರಳಿದ್ದಾರೆ. ಆದಾಗ್ಯೂ, ಅವರು ರಾಜಕೀಯ ಹಾಗೂ ಚುನಾವಣಾ ಅನುಭವದಲ್ಲಿ ಹಿಂದುಳಿದಿದ್ದಾರೆ. ಮಾಜಿ ಹೂಡಿಕೆ ಬ್ಯಾಂಕರ್ ಆಗಿರುವ ಗೋಯಲ್, ಸರಕಾರಿ ಸ್ವಾಮ್ಯದ ಕೋಲ್ ಇಂಡಿಯಾವನ್ನು ಸುಧಾರಿಸಿದರು. ಭಾರೀ ವಿದ್ಯುತ್ ಅಭಾವವನ್ನು ನಿವಾರಿಸಿದರು ಹಾಗೂ ನವೀಕರಿಸಬಹುದಾದ ಇಂಧನ ಮೂಲಗಳನ್ನು ಬೆಂಬಲಿಸಿದರು.ಈ ಹಿನ್ನೆಲೆಯಲ್ಲಿ ವಿತ್ತಖಾತೆಯಲ್ಲೂ ಅದೇ ರೀತಿ ಕೆಲಸ ಮಾಡಬಹುದು ಎಂದು ಊಹಿಸುವುದು ಕಷ್ಟ.ಯಾಕೆಂದರೆ, ವಿತ್ತ ಖಾತೆ ಏಳುಬೀಳುಗಳ ನಡುವೆ ನಿಂತಿದೆ.ಅದು ಸಚಿವರ ಕೈ ಮೀರಿದೆ.ಅದನ್ನು ಮತ್ತೆ ನಿಯಂತ್ರಣದಲ್ಲಿಟ್ಟುಕೊಳ್ಳುವ ಶಾಸ್ತ್ರಜ್ಞರಂತೂ ಇವರು ಅಲ್ಲ.
ಮುಖ್ಯವಾಗಿ ವಿತ್ತ ಸಚಿವ ಖಾತೆಯಂತಹ ಮಹತ್ವದ ಹೊಣೆಗಾರಿಕೆ ಜೇಟ್ಲಿಯ ಕೈಯಲ್ಲಿರುವುದು ಮೋದಿಯ ತಳಮಳಕ್ಕೆ ಕಾರಣವಾಗಿದೆ. ಅವರ ನಡುವೆ ಹೊಂದಾಣಿಕೆಯ ಕೊರತೆಯೂ ಎದ್ದು ಕಾಣುತ್ತಿದೆ. ಎಲ್ಲ ಅಧಿಕಾರವನ್ನು ಪ್ರಧಾನಿ ಕಚೇರಿಯಲ್ಲೇ ಇರಿಸಿಕೊಂಡಿರುವ ಮೋದಿಗೆ, ತನ್ನ ಮೂಗಿನ ನೇರಕ್ಕಿರುವ ಸಚಿವರು ಬೇಕಾಗಿದ್ದಾರೆಯೇ ಹೊರತು, ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರುವವರಲ್ಲ.ಬಹುಶಃ ಈ ನಿಟ್ಟಿನಲ್ಲೇ ವಿತ್ತ ಖಾತೆ ಅದಲು ಬದಲಾಗುವ ಸಾಧ್ಯತೆಗಳಿವೆ.ಒಟ್ಟಿನಲ್ಲಿ ಶಾ ಎನ್ನುವ ತನ್ನ ಆಪ್ತನನ್ನು ಉಳಿಸಿಕೊಳ್ಳುವುದಕ್ಕಾಗಿ, ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಕೆಲವು ಖಾತೆಗಳನ್ನು ಮೋದಿ ಆರೆಸ್ಸೆಸ್ ನಾಯಕರಿಗೆ ಕಪ್ಪವಾಗಿ ಒಪ್ಪಿಸುವುದು ಖಂಡಿತ.ಇದು ಮುಂದಿನ ದಿನಗಳಲ್ಲಿ ಆಡಳಿತದ ಮೇಲೆ ಮತ್ತು ಪಕ್ಷದ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎನ್ನುವುದನ್ನು ಕಾದು ನೋಡಬೇಕು.
ಉತ್ತರ ಪ್ರದೇಶದಲ್ಲಿ ರಾಮಜನ್ಮ ಭೂಮಿಯನ್ನೇ ಕೇಂದ್ರವಾಗಿಟ್ಟುಕೊಂಡು ಬಿಜೆಪಿ ಚುನಾವಣೆಗೆ ಹೊರಟ ಸೂಚನೆಗಳು ಕಾಣುತ್ತಿವೆ. ಅಭಿವೃದ್ಧಿಯ ಮಂತ್ರ ತನ್ನ ಶಕ್ತಿಯನ್ನು ಕಳೆದುಕೊಂಡಿದೆ. ಆದುದರಿಂದ ಮತ್ತೆ ಭಾವನಾತ್ಮಕವಾಗಿ ಜನರನ್ನು ಪ್ರಚೋದಿಸುವ ಹಳೆಯ ತಂತ್ರಕ್ಕೆ ಮೊರೆ ಹೋಗಿದೆ. ಆರೆಸ್ಸೆಸ್ ಈ ಚುನಾವಣೆಯ ನೇತೃತ್ವವಹಿಸುವ ಸಾಧ್ಯತೆಗಳೂ ಇವೆ.ಒಂದು ವೇಳೆ, ಉತ್ತರ ಪ್ರದೇಶ ಬಿಜೆಪಿಯ ಕೈವಶವಾದರೆ, ದೇಶದಲ್ಲಿ ಮತ್ತೆ ರಾಮಜನ್ಮಭೂಮಿ ಜಪ ಆರಂಭವಾಗುವುದರಲ್ಲಿ ಸಂಶಯವಿಲ್ಲ. ಒಟ್ಟಿನಲ್ಲಿ ಸಂಪುಟ ವಿಸ್ತರಣೆಯ ಬಳಿಕ, ಸರಕಾರದ ಮೇಲೆ ಹಿಡಿತ ಸಾಧಿಸಲು ಆರೆಸ್ಸೆಸ್ ಮತ್ತು ಮೋದಿ ಬಳಗದ ನಡುವೆ ಜಟಾಪಟಿ ನಡೆಯುವುದಂತೂ ಸತ್ಯ.







