ಪ್ರಸಕ್ತ ಸಾಲಿನ ಸವಾಲು ಎದುರಿಸಲು ಸಿದ್ಧರಾಗಿ
ಕೃಷಿ ಇಲಾಖೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕರೆ
ಬೆಂಗಳೂರು: ರಾಜ್ಯದಲ್ಲಿ ಕಳೆದ ವರ್ಷ ತಲೆದೋರಿದ ಬರಗಾಲದಿಂದಾಗಿ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ. ಆದುದರಿಂದ, ಪ್ರಸಕ್ತ ಸಾಲಿನಲ್ಲಿ ನಮ್ಮ ಎದುರು ಬೃಹತ್ ಸವಾಲಿದ್ದು, ಅದನ್ನು ಎದುರಿಸಲು ಅಧಿಕಾರಿಗಳು ಸಿದ್ಧರಾಗ ಬೇಕು ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ಕರೆ ನೀಡಿದ್ದಾರೆ.
ಶುಕ್ರವಾರ ನಗರದ ನೃಪತುಂಗ ರಸ್ತೆಯಲ್ಲಿರುವ ಕೃಷಿ ಇಲಾಖೆಯ ಸಂಭ್ರಮ ಸಭಾಂಗಣದಲ್ಲಿ ರಾಜ್ಯ ಕೃಷಿ ಪದವೀಧರ ಅಧಿಕಾರಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಅಗ್ರಿ ಡೈರಿ 2016’ನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ರೈತರಿಗೆ ನೆರವು ನೀಡುವಂತಹ ಮಹತ್ವದ ಜವಾಬ್ದಾರಿ ಕೃಷಿ ಇಲಾಖೆ ಮೇಲಿದೆ. ಆದುದರಿಂದ, ರೈತರ ಸಮಸ್ಯೆಗಳನ್ನು ಸಹಾನುಭೂತಿಯಿಂದ ಆಲಿಸಿ, ಅವರಿಗೆ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಕೃಷಿ ಭಾಗ್ಯ ಹಾಗೂ ಮಣ್ಣಿನ ಆರೋಗ್ಯದ ತಪಾಸಣೆ ಅಭಿಯಾನವು ರೈತರ ಕೃಷಿ ಭೂಮಿಯಲ್ಲಿ ನಡೆಯುವಂತದ್ದು, ಈ ಕಾರ್ಯಕ್ರಮಗಳ ಯಶಸ್ಸಿಗೆ ರೈತರ ಬೇಡಿಕೆಗಳಿಗೆ ಸ್ಪಂದನೆ ಅಗತ್ಯ. ಆದುದರಿಂದ, ಅಧಿಕಾರಿಗಳು ವೈಯಕ್ತಿಕ ಜವಾಬ್ದಾರಿ ತೆಗೆದುಕೊಂಡು ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಕೃಷ್ಣಭೈರೇಗೌಡ ಹೇಳಿದರು.
ಮುಂಗಾರು ಹಾಗೂ ಹಿಂಗಾರು ವಿಫಲವಾದ ಹಿನ್ನೆಲೆಯಲ್ಲಿ ಕಳೆದ ವರ್ಷ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ. ನೂತನ ವರ್ಷವು ನಮ್ಮ ಪಾಲಿಗೆ ನಿರಾಶಾ ದಾಯಕವಾಗಿರದೆ, ಶುಭಕರವಾಗಿರಲಿ ಎಂದು ಹಾರೈಸುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಆಯುಕ್ತ ಪಾಂಡುರಂಗನಾಯಕ್, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಶಿವಾನಂದಮೂರ್ತಿ, ನಿರ್ದೇಶಕ ಸಿ.ಎನ್.ಸ್ವಾಮಿ, ಕೃಷಿ ಇಲಾಖೆ ನಿರ್ದೇಶಕ ಬಿ.ವೈ.ಶ್ರೀನಿವಾಸ್, ನಬಾರ್ಡ್ ಮುಖ್ಯ ಮಹಾ ಪ್ರಬಂಧಕ ಎಂ.ಐ.ಗಾಣಗಿ, ರಾಜ್ಯ ಕೃಷಿ ಪದವೀಧರ ಅಧಿಕಾರಗಳ ಸಂಘದ ಅಧ್ಯಕ್ಷ ಡಾ.ವಿ.ಕೆ.ಕಮತರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







