‘ಜನರ, ಪೊಲೀಸರ ನಡುವಿನ ಅಂತರ ಕಡಿಮೆಯಾಗಲಿ’
ಸಂಚಾರ ಪೊಲೀಸ್ ದಿನಾಚರಣೆ
ಬೆಂಗಳೂರು: ಜನರ ಮತ್ತು ಸಂಚಾರಿ ಪೋಲಿಸರ ಮಧ್ಯೆಯಿರುವ ಅಂತರವನ್ನು ಕಡಿಮೆಗೊಳಿಸಲು ವಿವಿಧ ರೀತಿಯ ಸಾಮರಸ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎಂದು ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಂ.ಎ. ಸಲೀಂ ತಿಳಿಸಿದರು.
ನಗರದ ಸಂಚಾರಿ ಪೊಲೀಸ್ ಉದ್ಯಾನವನದಲ್ಲಿ ಸಿಎಂಸಿಎ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ 11ನೆ ವರ್ಷದ ಸಂಚಾರ ಪೊಲೀಸ್ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನತೆಯ ಸೇವೆ ಮಾಡುವುದೇ ಪೊಲೀಸರ ಕರ್ತವ್ಯವಾಗಿದೆ. ಹೀಗಾಗಿ ಜನತೆ ಪೊಲೀಸರ ಕುರಿತು ನಕಾರಾತ್ಮಕ ಭಾವನೆಯನ್ನು ಹೊಂದಕೂಡದು ಎಂದು ಅವರು ತಿಳಿಸಿದರು.
ಮಕ್ಕಳಿಗೆ ಟ್ರಾಫಿಕ್ ನಿಯಮಗಳನ್ನು ಪಾಲಿಸುವ ಕುರಿತು ಮತ್ತು ಸಾರ್ವಜನಿಕರು ವಾಹನಗಳನ್ನು ಚಲಾಯಿಸುವಾಗ ಪಾಲಿಸಬೇಕಾದ ನಿಯಮಗಳ ಕುರಿತು ಅರಿವು ಮೂಡಿಸುತ್ತಿರುವುದು ಉತ್ತಮ ಕೆಲಸ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಸಿ.ಎಂ.ಸಿ.ಎ ಟ್ರಸ್ಟಿ ವೃಂದಾ ಭಾಸ್ಕರ್ ಸೇರಿದಂತೆ ಹಲವು ಶಾಲೆಯ ವಿದ್ಯಾರ್ಥಿಗಳು ಮತ್ತು ಸಂಚಾರಿ ಪೊಲೀಸರು ಭಾಗವಹಿಸಿದ್ದರು.
Next Story





