ಸಶಸ್ತ್ರ ಪಡೆ ವೃದ್ಧಾಶ್ರಮವಲ್ಲ: ಸುಪ್ರೀಂ ತರಾಟೆ

ನವದೆಹಲಿ: ದೈಹಿಕವಾಗಿ ಅಸಮರ್ಥವಾದ ವ್ಯಕ್ತಿಗೆ ರಕ್ಷಣಾ ಪಡೆಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ನೀಡಬಾರದು ಎಂದು ಸುಪ್ರೀಂಕೋರ್ಟ್ ಶುಕ್ರವಾರ ಐತಿಹಾಸಿಕ ತೀರ್ಪು ನೀಡಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಅರ್ಹತೆ ಪಡೆಯದಿದ್ದರೂ, ವಾಯಪಡೆಯಲ್ಲಿ ಕಾಯಂ ಹುದ್ದೆ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಮಹಿಳಾ ಐಎಎಫ್ ಅಧಿಕಾರಿಯೊಬ್ಬರ ಅರ್ಜಿಯ ವಿಚಾರಣೆ ನಡೆಸಿ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ.
"ರಕ್ಷಣಾ ಪಡೆಗಳು ಅನಾರೋಗ್ಯಪೀಡಿತರು, ಅಸ್ವಸ್ಥರು ಕೆಲಸ ಮಾಡಲು ಹಾಗೂ ಹುದ್ದೆಗಳನ್ನು ಹೊಂದಲು ವೃದ್ಧಾಶ್ರಮಗಳಲ್ಲ. ದೈಹಿಕ ಗುಣಮಟ್ಟದ ಮಾನದಂಡದಲ್ಲಿ ಕಾಯಂ ನೇಮಕಾತಿಗೆ ನೀವು ಅರ್ಹತೆ ಪಡೆದಿಲ್ಲ" ಎಂದು ಮುಖ್ಯನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಹಾಗೂ ಆರ್.ಬಾನುಮತಿ ಅವರನ್ನೊಳಗೊಂಡ ನ್ಯಾಯಪೀಠ ಸ್ವಾಡರ್ನ್ ಲೀಡರ್ ಶಿಲ್ಪಾರಾವ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
ರಾವ್ 2005ರಲ್ಲಿ ಐಎಎಫ್‌ಗೆ ನೇಮಕಗೊಂಡಿದ್ದರು. ಅಲ್ಪಾವಧಿ ಸೇವೆ ಸಮಿತಿ ಅಧಿಕಾರಿಯಾಗಿ ಆಡಳಿತ ವಿಭಾಗದಲ್ಲಿ ನಿಯುಕ್ತಿಗೊಂಡಿದ್ದರು. ಅವರು 2015ರಲ್ಲಿ ಕಾಯಂ ನೇಮಕಾತಿಗೆ ಸಲ್ಲಿಸಿದ್ದ ಅರ್ಜಿಯನ್ನು ಆಕೆ ಸಣ್ಣ ರೋಗವಾದ ಮಿಟ್ರಲ್ ವಾಲ್ವ್ ಪ್ರೊಲಾಪ್ಸ್‌ನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತಿರಸ್ಕರಿಸಿತ್ತು.
ಆಕೆಯ ಅಸ್ವಸ್ಥತೆಯ ನಡುವೆಯೂ ಆಕೆ ತಮ್ಮ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಈ ಕಾಯಿಲೆಗೆ ಯಾವ ಚಿಕಿತ್ಸೆ ಅಥವಾ ಜೀವನಶೈಲಿ ಬದಲಾವಣೆಯೂ ಬೇಕಾಗಿಲ್ಲ ಎಂದು ಹಿರಿಯ ವಕೀಲ ಮಹಾವೀರ್ ಸಿಂಗ್ ಹಾಗೂ ನಿಖಿಲ್ ಜೈನ್ ಅವರು ಶಿಲ್ಪಾ ಪರವಾಗಿ ವಾದ ಮಂಡಿಸಿದ್ದರು.
ಈಗಾಗಲೇ ಸೇವೆಯಲ್ಲಿದ್ದು, ಅನಾರೋಗ್ಯದ ನಡುವೆಯೂ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಉದ್ಯೋಗಿಗೂ, ಹೊಸದಾಗಿ ಸೇವೆಗೆ ಸೇರಬಯಸುವವರಿಗೂ ಒಂದೇ ವೈದ್ಯಕೀಯ ಮಾನದಂಡವನ್ನು ನಿಗದಿಪಡಿಸುವಂತಿಲ್ಲ ಎಂದು ಅವರು ವಾದಿಸಿದ್ದರು.
ಅನಾರೋಗ್ಯದ ನಡುವೆಯೂ ಎಲ್ಲ ಕ್ಷೇತ್ರ ಕಾರ್ಯಗಳಿಗೂ ರಾವ್ ಸಮರ್ಥರಿದ್ದಾರೆ ಎಂದು ವೈದ್ಯಕೀಯ ವರದಿ ದೃಢಪಡಿಸಿದೆ. ಸಮುದ್ರಮಟ್ಟಕ್ಕಿಂತ 2700 ಮೀಟರ್ ಎತ್ತರದ ಪ್ರದೇಶಗಳಲ್ಲಿ ಮಾತ್ರ ಆಕೆಗೆ ಸಮಸ್ಯೆ ಎದುರಾಗುತ್ತದೆ ಎಂದು ವರದಿ ಹೇಳಿದೆ ಎಂದು ರಾವ್ ಸಮರ್ಥನೆ ನೀಡಿದ್ದರು.
ಐಎಎಫ್‌ನ 100 ಸೇವಾ ಕ್ಷೇತ್ರಗಳಲ್ಲಿ ಕೇವಲ ಮೂರು ಮಾತ್ರ ಆ ಎತ್ತರದಲ್ಲಿದೆ. ಶೇಕಡ 90ರಷ್ಟು ಅಧಿಕಾರಿಗಳನ್ನು ಅಲ್ಲಿಗೆ ನಿಯೋಜಿಸುವುದಿಲ್ಲ. ತಾನು ಕ್ಷೇತ್ರ ಕರ್ತವ್ಯಾಧಿಕಾರಿಯಾಗಿರುವುದರಿಂದ, ಮೇಲೆ ಹೇಳಿದ ನಿರ್ಬಂಧಗಳು ಕೆಲಸಕ್ಕೆ ಯಾವುದೇ ತೊಂದರೆ ಮಾಡುವುದಿಲ್ಲ ಎಂದು ಶಿಲ್ಪಾ ಅರ್ಜಿಯಲ್ಲಿ ವಾದಿಸಿದ್ದರು.







