ಐದನೆ ಏಕದಿನ: ಪಾಂಡೆ ಶತಕ ; ಭಾರತಕ್ಕೆ ಜಯ

ಸಿಡ್ನಿ, ಜ.23: ಇಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಐದನೆ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಶನಿವಾರ ಆಸ್ಟ್ರೇಲಿಯ ವಿರುದ್ಧ ಆರು ವಿಕೆಟ್‌ಗಳ ರೋಚಕ ಜಯ ಗಳಿಸಿದೆ.
ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 331 ರನ್‌ಗಳ ಕಠಿಣ ಸವಾಲನ್ನು ಪಡೆದ ಭಾರತ ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ ನಾಲ್ಕು ವಿಕೆಟ್ ನಷ್ಟದಲ್ಲಿ ಗೆಲುವಿಗೆ ಅಗತ್ಯದ ರನ್ ಸೇರಿಸಿ ವೈಟ್‌ವಾಷ್‌ನಿಂದ ಪಾರಾಯಿತು.ಆಸ್ಟ್ರೇಲಿಯಕ್ಕೆ ಕ್ಲೀನ್ ಸ್ವೀಪ್ ನಿರಾಕರಿಸಿತು.
ಭಾರತದ ಗೆಲುವಿನಲ್ಲಿ ಮನೀಷ್ ಪಾಂಡೆ ದೊಡ್ಡ ಕೊಡುಗೆ ನೀಡಿದರು. ಕರ್ನಾಟಕ ದ ಆಟಗಾರ ಪಾಂಡೆ ಚೊಚ್ಚಲ ಶತಕದೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸಿದರು.
129 ನಿಮಿಷಗಳ ಬ್ಯಾಟಿಂಗ್‌ನಲ್ಲಿ 81 ಎಸೆತಗಳನ್ನು ಎದುರಿಸಿ 8 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಲ್ಲಿ 104 ರನ್ ಗಳಿಸಿದರು. ನಾಲ್ಕನೆ ವಿಕೆಟ್‌ಗೆ ಧೋನಿ ಮತ್ತು ಪಾಂಡೆ 94 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ಸಮೀಪಕ್ಕೆ ತಲುಪಿಸಿದ್ದರು. ಕೊನೆಯ ಓವರ್‌ನಲ್ಲಿ ತಂಡದ ಗೆಲುವಿಗೆ 13 ರನ್‌ಗಳ ಆವಶ್ಯಕತೆ ಇತ್ತು.
ಮಿಚೆಲ್ ಮಾರ್ಷ್ ಮೊದಲ ಎಸೆತ ವೈಡ್ ಆಗಿತ್ತು . ಬಳಿಕ ಧೋನಿ ಸಿಕ್ಸರ್ ಸಿಡಿಸಿದರು. 2 ಎಸೆತದಲ್ಲಿ ಧೋನಿ ಅಪಾಯಕಾರಿ ಹೊಡೆತಕ್ಕೆ ಯತ್ನಿಸಿ ಔಟಾದರು. 49.3ನೆ ಎಸೆತದಲ್ಲಿ ಚೆಂಡನ್ನು ಬೌಂಡರಿಗಟ್ಟಿದ ಪಾಂಡೆ ಶತಕ ಪೂರ್ಣಗೊಳಿಸಿದರು. 49.4ನೆ ಎಸೆತದಲ್ಲಿ ಎರಡು ರನ್ ಗಳಿಸುವ ಮೂಲಕ ಪಾಂಡೆ ತಂಡವನ್ನು ಗೆಲುವಿನ ದಡ ಸೇರಿಸಿದರು.
104 ರನ್ ಗಳಿಸಿದ ಪಾಂಡೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಆರಂಭಿಕ ದಾಂಡಿಗರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮ ಮೊದಲ ವಿಕೆಟ್‌ಗೆ 18.2 ಓವರ್‌ಗಳಲ್ಲಿ 123 ರನ್ ಗಳಿಸುವ ಮೂಲಕ ತಂಡಕ್ಕೆ ಭದ್ರವಾದ ಅಡಿಪಾಯ ಹಾಕಿಕೊಟ್ಟರು.
ಶಿಖರ್ ಧವನ್ 78 ರನ್ ಗಳಿಸಿ ಹೇಸ್ಟಿಂಗ್ಸ್ ಎಸೆತದಲ್ಲಿ ಶಾನ್ ಮಾರ್ಷ್‌ಗೆ ಕ್ಯಾಚ್ ನೀಡಿದರು. ಧವನ್ ಕಳೆದ ಪಂದ್ಯದಲ್ಲಿ ಶತಕ ದಾಖಲಿಸಿದ್ದರು. ಈ ಪಂದ್ಯದಲ್ಲೂ ಶತಕ ದಾಖಲಿಸುವ ಯೋಚನೆಯಲ್ಲಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. 69 ನಿಮಿಷಗಳ ಬ್ಯಾಟಿಂಗ್‌ನಲ್ಲಿ 56 ಎಸೆತಗಳನ್ನು ಎದುರಿಸಿದರು. 7 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 78 ರನ್ ಗಳಿಸಿದರು.
ಧವನ್ ಔಟಾದ ಬಳಿಕ ಕೊಹ್ಲಿ ಕ್ರೀಸ್‌ಗೆ ಆಗಮಿಸಿದರೂ ಅವರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. 8 ರನ್ ಗಳಿಸಿ ಹೇಸ್ಟಿಂಗ್ಸ್‌ಗೆ ವಿಕೆಟ್ ಒಪ್ಪಿಸಿದರು.
ಮೂರನೆ ವಿಕೆಟ್‌ಗೆ ರೋಹಿತ್ ಶರ್ಮಗೆ ಪಾಂಡೆ ಜೊತೆಯಾದರು. ಇವರು 97 ರನ್‌ಗಳ ಕಾಣಿಕೆ ನೀಡಿ ತಂಡದ ಗೆಲುವಿನ ಆಸೆ ಚಿಗುರಿಸಿದರು. ಆದರೆ ರೋಹಿತ್ ಒಂದು ರನ್‌ನಿಂದ ಶತಕ ವಂಚಿತಗೊಂಡರು. ಅವರು 142 ನಿಮಿಷಗಳ ಬ್ಯಾಟಿಂಗ್‌ನಲ್ಲಿ 108 ಎಸೆತಗಳನ್ನು ಎದುರಿಸಿದರು, 9 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಲ್ಲಿ 99 ರನ್ ಗಳಿಸಿ ನಿರ್ಗಮಿಸಿದರು. ರೋಹಿತ್ ನಿರ್ಗಮನದ ಬಳಿಕ ಧೋನಿ ಕ್ರೀಸ್‌ಗೆ ಆಗಮಿಸಿ ತಂಡವನ್ನು ಆಧರಿಸಿದರು. ಸರಣಿಯುದ್ದಕ್ಕೂ ಕಳಪೆೆ ಪ್ರದರ್ಶನ ನೀಡಿ ಟೀಕೆಗೊಳಗಾಗಿದ್ದ ಧೋನಿ 64 ನಿಮಿಷಗಳ ಬ್ಯಾಟಿಂಗ್‌ನಲ್ಲಿ 42 ಎಸೆತಗಳನ್ನು ಎದುರಿಸಿ ಉಪಯುಕ್ತ 34 ರನ್ ಸೇರಿಸಿದರು. ಆದರೆ ಅವರಿಗೆ ಗೆಲುವಿನ ರನ್ ಗಳಿಸಲು ಸಾಧ್ಯವಾಗಲಿಲ್ಲ.
ಆಸ್ಟ್ರೇಲಿಯ 330/7: ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ ತಂಡ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 330 ರನ್ ಗಳಿಸಿತ್ತು.
ಆಸ್ಟ್ರೇಲಿಯದ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಶತಕಗಳ ಕೊಡುಗೆ ನೀಡುವ ಮೂಲಕ ತಂಡದ ಸ್ಕೋರ್‌ನ್ನು 300ರ ಗಡಿ ದಾಟಿಸಲು ನೆರವಾಗಿದ್ದರು.
ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ 122ರನ್(171ನಿ, 113ಎ, 9ಬೌ,3ಸಿ) ಮತ್ತು ಮಿಚೆಲ್ ಮಾರ್ಷ್ ಔಟಾಗದೆ 102 ರನ್(126ನಿ, 84ಎ, 9ಬೌ,2ಸಿ) ಗಳಿಸಿದರು.
ಭಾರತದ ಇಶಾಂತ್ ಶರ್ಮ(2-60), ಬುಮ್ರಾ(2-40), ಉಮೇಶ್ ಯಾದವ್(1-82), ರಿಶಿ ಧವನ್(1-74) ಇವರ ದಾಳಿಗೆ ಸಿಲುಕಿದ ಆಸ್ಟ್ರೇಲಿಯ 14.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 78 ರನ್ ಗಳಿಸಿದಾಗ ತಂಡದ ಸ್ಕೋರ್ 330ಕ್ಕೆ ತಲುಪುತ್ತದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಆ್ಯರೊನ್ ಫಿಂಚ್ (6), ಸ್ಟೀವ್ ಸ್ಮಿತ್ (28), ಜಾರ್ಜ್ ಬೈಲಿ (6), ಶೇನ್ ಮಾರ್ಷ್ (7) ಇವರು ತಂಡದ ಖಾತೆಗೆ ದೊಡ್ಡ ಕೊಡುಗೆ ನೀಡಿದ್ದರೂ, ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಮತ್ತೊಮ್ಮೆ ಭಾರತಕ್ಕೆ ಬೆಟ್ಟದಂತಹ ಸವಾಲು ವಿಧಿಸಿದರು.
ಸ್ಕೋರ್ ಪಟ್ಟಿ
ಆಸ್ಟ್ರೇಲಿಯ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 330
ಆ್ಯರೊನ್ ಫಿಂಚ್ ಎಲ್‌ಬಿಡಬ್ಲು ಬಿ ಶರ್ಮ 06
ಡೇವಿಡ್ ವಾರ್ನರ್ ಸಿ ಜಡೆಜ ಬಿ ಇಶಾಂತ್ ಶರ್ಮ 122
ಸ್ಟೀವನ್ ಸ್ಮಿತ್ ಸಿ ರೋಹಿತ್ ಶರ್ಮ ಬಿ ಬುಮ್ರಾ 28
ಜಾರ್ಜ್ ಬೈಲಿ ಸಿ ಇಶಾಂತ್ ಬಿ ರಿಶಿ ಧವನ್ 06
ಶಾನ್ ಮಾರ್ಷ್ ರನೌಟ್(ಯಾದವ್/ಗುರುಕೀರತ್)07
ಮಿಚೆಲ್ ಮಾರ್ಷ್ ಔಟಾಗದೆ 102
ಮ್ಯಾಥ್ಯೂ ವೇಡ್ ಸಿ ಧೋನಿ ಬಿ ಯಾದವ್ 36
ಫಾಕ್ನರ್ ಸಿ ಧೋನಿ ಬಿ ಬುಮ್ರಾ 01
ಹೇಸ್ಟಿಂಗ್ಸ್ ಔಟಾಗದೆ02
ಇತರೆ20
ವಿಕೆಟ್ ಪತನ: 1-6,2-64, 3-78, 4-117, 5-235, 6-320, 7-323
ಬೌಲಿಂಗ್ ವಿವರ
ಇಶಾಂತ್ ಶರ್ಮ 10-0-60-2
ಉಮೇಶ್ ಯಾದವ್08-0-82-1
ಬುಮ್ರಾ10-0-40-2
ರಿಶಿ ಧವನ್10-0-74-1
ರವೀಂದ್ರ ಜಡೇಜ 10-0-46-0
ಗುರುಕೀರತ್ ಸಿಂಗ್02-0-17-0
ಭಾರತ 49.4 ಓವರ್‌ಗಳಲ್ಲಿ 331/4
ರೋಹಿತ್ ಶರ್ಮ ಸಿ ವೇಡ್ ಬಿ ಹೇಸ್ಟಿಂಗ್ಸ್99
ಶಿಖರ್ ಧವನ್ ಸಿ ಶಾನ್ ಮಾರ್ಷ್ ಬಿ ಹೇಸ್ಟಿಂಗ್ಸ್78
ವಿರಾಟ್ ಕೊಹ್ಲಿ ಸಿ ವೇಡ್ ಬಿ ಹೇಸ್ಟಿಂಗ್ಸ್08
ಮನೀಷ್ ಪಾಂಡೆ ಔಟಾಗದೆ104
ಎಂಎಸ್ ಧೋನಿ ಸಿ ವಾರ್ನರ್ ಬಿ ಮಿಚೆಲ್ ಮಾರ್ಷ್ 34
ಗುರುಕೀರತ್ ಸಿಂಗ್ ಔಟಾಗದೆ00
ಇತರೆ08
ವಿಕೆಟ್ ಪತನ: 1-123, 2-134, 3-231, 4-325
ಬೌಲಿಂಗ್ ವಿವರ
ಹೇಸ್ಟಿಂಗ್ಸ್10-1-61-3
ಬೊಲೆಂಡ್10-0-58-0
ಮಿಚೆಲ್ ಮಾರ್ಷ್9.4-0-77-1
ಫಾಕ್ನರ್10-0-54-0
ಲಿನ್08-0-58-0
ಸ್ಟೀವನ್ ಸ್ಮಿತ್02-0-20-0
ಪಂದ್ಯಶ್ರೇಷ್ಠ: ಮನೀಷ್ ಪಾಂಡೆ
ಸರಣಿ ಶ್ರೇಷ್ಠ: ರೋಹಿತ್ ಶರ್ಮ
,,,,,,,,,,,,
ನಂಬರ್ ಗೇಮ್
ಐದು ಪಂದ್ಯಗಳಲ್ಲಿ 11 ಶತಕ, 3,159 ರನ್
1: ಪಾಂಡೆ ಚೊಚ್ಚಲ ಶತಕ ದಾಖಲಿಸಿದ್ದಾರೆ. ಇದು ಅವರ ನಾಲ್ಕನೆ ಏಕದಿನ ಪಂದ್ಯ
19: ಆಸ್ಟ್ರೇಲಿಯಕ್ಕೆ ತವರಿನಲ್ಲಿ ಸತತ 18 ಪಂದ್ಯಗಳಲ್ಲಿ ಜಯ ಗಳಿಸಿದೆ. 19ನೆ ಗೆಲುವು ಸಾಧ್ಯವಾಗಲಿಲ್ಲ.
3159: ಐದು ಪಂದ್ಯಗಳಲ್ಲಿ ಒಟ್ಟು 3,159 ರನ್ ದಾಖಲಾಗಿದೆ.
11: ಒಟ್ಟು ಶತಕ ದಾಖಲಾಗಿದೆ.
8: ಒಟ್ಟು ಎಂಟು ಇನಿಂಗ್ಸ್‌ಗಳಲ್ಲಿ 300ಕ್ಕೂ ಅಧಿಕ ರನ್ ದಾಖಲಾಗಿದೆ.
80:ಮನೀಷ್ ಪಾಂಡೆ 80 ಎಸೆತಗಳಲ್ಲಿ ಶತಕ ದಾಖಲಿಸಿದರು.
2: ರೋಹಿತ್ ಶರ್ಮ ಎರಡನೆ ಬಾರಿ ಸರಣಿಯಲ್ಲಿ 400ಕ್ಕೂ ಅಧಿಕ ರನ್ ದಾಖಲಿಸಿದರು. ಅವರು 441ರನ್ ಈ ಸರಣಿಯಲ್ಲಿ ಗಳಿಸಿದರು.
315: ಸ್ಟೀವ್ ಸ್ಮಿತ್ 315 ರನ್ ದಾಖಲಿಸಿದ್ದಾರೆ.







