ಕಾಸರಗೋಡು : ಕಯ್ಯಾರ್ ಡೋನ್ ಬಾಸ್ಕೋ ಶಾಲೆಯ ೮೦ ನೇ ವಾರ್ಷಿಕೋತ್ಸವ

ಕಾಸರಗೋಡು : ಕಯ್ಯಾರ್ ಡೋನ್ ಬಾಸ್ಕೋ ಶಾಲೆಯ ೮೦ ನೇ ವಾರ್ಷಿಕೋತ್ಸವ ಶುಕ್ರವಾರ ನಡೆಯಿತು. ಈ ಸಂದರ್ಭದಲ್ಲಿ ಶಾಲೆಯ ನೂತನ ಕಂಪ್ಯೂಟರ್ ಲ್ಯಾಬ್ ಕಟ್ಟಡವನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ . ಎಲೋಶೀಯಸ್ ಪಾವ್ಲ್ ಡಿ ಸೋಜ ರವರು ಉದ್ಘಾಟಿಸಿ, ಆಶೀರ್ವಚನ ನೀಡಿದರು.
ನಂತರ ಧರ್ಮಾಧ್ಯಕ್ಷ ವಂ . ಎಲೋಶೀಯಸ್ ಪಾವ್ಲ್ ಡಿ ಸೋಜ ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು , ಜೀವನದಲ್ಲಿ ಯಶಸ್ವಿ, ಪ್ರಗತಿ , ಜೀವನ ಮೌಲ್ಯ ರೂಪಿಸುವಲ್ಲಿ ಪ್ರಸ್ತುತ ಶಾಲೆ ಸಾಕಷ್ಟು ಕೊಡುಗೆಯನ್ನು ನೀಡಿದೆ. ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ. ಮಕ್ಕಳ ಬಗ್ಗೆ ಪೋಷಕರು ಹೆಚ್ಚು ಗಮನ ನೀಡಬೇಕಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ಕೆಥೋಲಿಕ್ ಶಿಕ್ಷಣ ಮಂಡಳಿ ಕಾರ್ಯದರ್ಶಿ ವಂ. ಜೆರಾಲ್ಡ್ ಡಿ ಸೋಜ , ಮಂಜೇಶ್ವರ ಉಪ ಜಿಲ್ಲಾ ಶಿಕ್ಷಣಾಧಿಕಾರಿ ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಜೆ . ಶೆಟ್ಟಿ , ಸದಸ್ಯೆ ರಾಜೀವಿ ರೈ, ಮಂಜೇಶ್ವರ ಬ್ಲಾಕ್ ಯೋಜನಾಧಿಕಾರಿ ವಿಜಯಕುಮಾರ್ ಪಿ. ,ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷ ಗಿರೀಶ್ ಕಯ್ಯಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೋರ್ಜ್ ಡಿ ಅಲ್ಮೇಡಾ , ಶಾಲಾ ಮುಖ್ಯೋಪಾಧ್ಯಾಯ ಲೂವಿಸ್ ಮೊಂತೇರೊ, ಎಂ. ಪಿ . ಟಿ . ಎ ಅಧ್ಯಕ್ಷೆ ಶ್ರೀದೇವಿ , ಶಾಲಾ ನಾಯಕಿ ಕೆ . ಎಸ್ ಸ್ವರ್ಣ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕಲಿಕೆ , ಅಟೋಟ ಸ್ಪರ್ದೆಯಲ್ಲಿ ಉತ್ತಮ ಸಾಧನೆ ಮಾಡಿದ ಶಾಲಾ ವಿದ್ಯಾರ್ಥಿಗಳನ್ನು ಅತಿಥಿಗಳು ಗೌರವಿಸಿದರು. ನೂತನ ಕಟ್ಟಡ ನಿರ್ಮಾಣಕ್ಕೆ ನೆರವಾದವರನ್ನು ಗೌರವಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯ ಲೂವಿಸ್ ಮೊಂತೇರೊ ವರದಿ ವಾಚಿಸಿದರು . ಶಾಲಾ ಸಂಚಾಲಕ ಹಾಗೂ ಕಯ್ಯಾರ್ ಕ್ರಿಸ್ತ ರಾಜ ದೇವಾಲಯದ ಧರ್ಮಗುರು ವಂ. ವಿಕ್ಟರ್ ಡಿ ಸೋಜ ರವರು ಸ್ವಾಗತಿಸಿ , ಶಿಕ್ಷಕಿ ಮಾಗ್ದಲೆನ್ ಕ್ರಾಸ್ತ ವಂದಿಸಿದರು.
ಶಿಕ್ಷಕಿ ಶಾಲಿನಿ ಡಿ ಸೋಜ , ನಿರ್ಮಲಾ ಕಾರ್ಯಕ್ರಮ ನಿರೂಪಿಸಿದರು.
ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.











