ಗುರುದಾಸ್‌ಪುರ ಎಸ್‌ಪಿ ಸಲ್ವಿಂದರ್ ಸಿಂಗ್‌ಗೆ ಕ್ಲೀನ್ ಚಿಟ್

ಪಠಾಣ್‌ಕೋಟ್ , ಜ.23 : ಪಠಾಣ್‌ಕೋಟ್ ವಾಯುನೆಲೆಯ ಮೇಲೆ ಉಗ್ರರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳಿಂದ ವಿಚಾರಣೆಗೊಳಗಾಗಿದ್ದ ಗುರುದಾಸ್‌ಪುರ ಎಸ್‌ಪಿ ಸಲ್ವಿಂದರ್ ಸಿಂಗ್ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಸಲ್ವಿಂದರ‍್ ಸಿಂಗ್ ಅವರನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಕಳೆದ ಎರಡು ವಾರಗಳ ಅವಧಿಯಲ್ಲಿ ವಿವಿಧ ಪರೀಕ್ಷೆಗೊಳಪಡಿಸಿ ವಿಚಾರಣೆ ನಡೆಸಿದ್ದರು. ಆದರೆ ಅವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.
ಗುರುವಾರ ಸಲ್ವಿಂದರ‍್ ಸಿಂಗ್, ಸ್ನೇಹಿತ ರಾಜೇಶ್ ಶರ್ಮ ಮತ್ತು ಬಾಣಸಿಗನನ್ನು ಮನೆ ಸೇರಿದಂತೆ ಪಂಜಾಬ್, ಅಮೃತಸರದ ಆರು ಸ್ಥಳಗಳಿಗೆ ಎನ್‌ಎಐ ಅಧಿಕಾರಿಗಳು ದಾಳಿ ನಡೆಸಿ ತನಿಖೆ ನಡೆಸಿದ್ದರು.
ಪಠಾಣ್‌ಕೋಟ್ ವಾಯು ನೆಲೆ ಮೇಲಿನ ಉಗ್ರರ ದಾಳಿಗೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಡೆಸಿದ ವಿಚಾರಣೆ ವೇಳೆ ಎಸ್ಪಿ ಸಲ್ವಿಂದರ್ ಸಿಂಗ್ ಭಿನ್ನ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಮಂಗಳವಾರ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು.





