ಕುಂಬೋಲ್ ತಂಙಳ್ ಸಮಾಜಕ್ಕೆ ನೀಡುವ ಸಾಂತ್ವನ ಮಾದರಿದಾಯಕ: ಗೃಹ ಸಚಿವ

ಕಾಸರಗೋಡು: ಕುಂಬೋಲ್ ತಂಙಳ್ ಹಾಗೂ ಕುಟುಂಬ ಜಾತಿ-ಮತ ಬೇಧ ಮರೆತು ಜನತೆಗೆ ನೀಡುವ ಸಾಂತ್ವನ, ಭರವಸೆ ಬೆಲೆಕಟ್ಟಲಾರದ ಸಮಾಜ ಸೇವೆಯಾಗಿದೆ. ಉತ್ತರ ಕೇರಳದ ಮತ ಸೌಹಾರ್ದ ಹಾಗೂ ಸಾಮುದಾಯಿಕ ಮೈತ್ರಿಗೆ ಅವರು ನೀಡುವ ಸೇವೆ ಶ್ಲಾಘನೀಯ ಎಂದು ಗೃಹ ಸಚಿವ ರಮೇಶ್ ಚೆನ್ನಿತ್ತಲ ಹೇಳಿದರು.
ಕುಂಬಳೆ ಕುಂಬೋಲ್ ತಂಙಳ್ ಉರೂಸ್‌ನಂಗವಾಗಿ ಕುಂಬೋಲ್ ಸಯ್ಯಿದ್ ಹಸಲ್ ಪೂಕ್ಕೋಯ ತಂಙಳ್‌ರವರ ಮಖಾಂನ್ನು ಸಂದರ್ಶಿಸಿದ ಬಳಿಕ ತಂಙಳ್ ಕುಟುಂಬ ನೀಡಿದ ಸ್ವಾಗತ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.
ಕುಂಬೋಲ್ ತಂಙಳ್‌ರವರ ಚಟುವಟಿಕೆಗಳು ಆಧ್ಯಾತ್ಮಿಕ ಚೈತನ್ಯ ತುಂಬುತ್ತವೆ. ಪ್ರೀತಿ ಹಾಗೂ ತ್ಯಾಗಕ್ಕೂ ಮಿಗಿಲಾದ ಪವಿತ್ರ ಸಂದೇಶಗಳನ್ನು ಇವರು ವಿಶ್ವದಾದ್ಯಂತ ತಲುಪಿಸುತ್ತಿರುವುದಾಗಿ ಸಚಿವರು ಹೇಳಿದರು.
ಪಾಪಂಕೋಯ ನಗರಕ್ಕೆ ತಲುಪಿದ ಸಚಿವರನ್ನು ಕೆ. ಎಸ್. ಕುಞಿಕ್ಕೋಯ ತಂಙಳ್, ಕೆ. ಎಸ್. ಸಯ್ಯಿದ್ ಅಲಿ ತಂಙಳ್ ಅವರ ನೇತೃತ್ವದಲ್ಲಿ ಸ್ವಾಗತಿಸಲಾಯಿತು. ಸಚಿವರೊಂದಿಗೆ ಡಿಸಿಸಿ ಅಧ್ಯಕ್ಷ ನ್ಯಾಐವಾದಿ ಸಿ. ಕೆ. ಶ್ರೀಧರನ್. ಮುಖಂಡರಾದ ಕೆ. ಪಿ. ಕುಞಿಕಣ್ಣನ್, ಕೆ. ನೀಲಕಂಠನ್, ಪಿ. ಎ. ಅಶ್ರಫಲಿ, ಹಕೀಂ ಕುನ್ನಿಲ್, ಪಿ. ಕೆ. ಫೈಝಲ್, ನಾಸರ್ ಮೊಗ್ರಾಲ್ ಉಪಸ್ಥಿತರಿದ್ದರು.





