ಮಂಗಳೂರು : ರೋಹಿತ್ ವೆಮುಲ ಸಾವು ಪ್ರಕರಣ ಮಂಗಳೂರು ವಿವಿಯಲ್ಲಿ ಪ್ರತಿಭಟನೆ

ಕೊಣಾಜೆ: ಹೈದರಾಬಾದ್ ಕೇಂದ್ರಿಯ ವಿಶ್ವವಿದ್ಯಾನಿಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲ ರವರ ಸಾವಿನ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಶೋಧನಾ ವಿದ್ಯಾರ್ಥಿಗಳು , ಅಧ್ಯಾಪಕ ಮತ್ತು ಅಧ್ಯಾಪಕೇತರ ನೌಕರರು ಮತ್ತು ಪ್ರಗತಿಪರ ಸಂಘಟನೆಗಳು ಶನಿವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಂಗಳೂರು ವಿವಿ ಸಹಾಯಕ ಪ್ರಾಧ್ಯಾಪಕ ಉಮೇಶ್ಚಂದ್ರ ಅವರು, ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೆಮುಲ ರವರ ಸಾವಿಗೆ ಹೈದರಾಬಾದ್ ವಿವಿ ಕುಲಪತಿ ಅಪ್ಪಾರಾವ್ ಮತ್ತು ಕೇಂದ್ರ ಸಚಿವೆ ಸ್ಮತಿ ಇರಾನಿ ನೇರ ಕಾರಣರಾಗಿದ್ದು ತಮ್ಮ ಸ್ಥಾನ ಅಲಂಕರಿಸಲು ಅಯೋಗ್ಯರೆಂದು ಆರೋಪಿಸಿದರು.
ಹೈದರಾಬಾದ್ ಕೇಂದ್ರಿಯ ವಿವಿ ಕುಲಪತಿ ಮತ್ತು ಮನುವಾದಿ ರಾಜಕಾರಣಿಗಳು ನೀಡಿದ ಮಾನಸಿಕ ಕಿರುಕುಳದಿಂದ ರೋಹಿತ್ ವೇಮುಲ ಇಹಲೋಕ ತ್ಯಜಿಸಿದ್ದಾನೆ. ದೌರ್ಜನ್ಯಗಳು ನಡೆಯುತ್ತಿರುವುದು ಹೈದರಾಬಾದ್ ವಿವಿಯಲ್ಲಿ ಮಾತ್ರವಲ್ಲ, ಸಾಧಾರಣ ಎಲ್ಲಾ ವಿವಿಗಳಲ್ಲೂ ಸದಾ ನಡೆಯುತ್ತಿವೆ. ಆದರೆ ವಿದ್ಯಾರ್ಥಿಗಳು ಮತ್ತು ನೌಕರರು ಆತ್ಮಹತ್ಯೆಗಳ ಕಡೆ ಮುಖ ಮಾಡುವುದು ಸಲ್ಲ. ರೋಹಿತ್ ಮನಸ್ಸು ಮಾಡಿದರೆ ಕುಲಪತಿ ಅಪ್ಪಾರಾವ್‌ನನ್ನೇ ಹಗ್ಗ ಬಿಗಿದು ಸಾಯಿಸುವ ವ್ಯಕ್ತಿತ್ವವನ್ನು ಹೊಂದಿದ್ದರೂ ಅಹಿಂಸೆಯನ್ನೇ ಪ್ರತಿಪಾದಿಸಿ ಅಮರನಾಗಿದ್ದಾರೆ. ಇಲಾಖೆಯ ಕ್ರಮದಿಂದ ಸಾವನಪ್ಪಿದ ರೋಹಿತ್ ವೇಮುಲಾರವರ ಸಾವಿಗೆ ಕಾರಣರಾದವರ ವಿರುಧ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.







