ಗುರುವಾಯನಕೆರೆ : ಭಜನಾ ಮಂದಿರಕ್ಕೆಂದು ಮಂಜೂರು ಮಾಡಿದ್ದ ಜಮೀನಿನ ದುರುಪಯೋಗ - ಆರೋಪ
ಬೆಳ್ತಂಗಡಿ: ಗುರುವಾಯನಕೆರೆಯ ಪಾಂಡುರಂಗ ಭಜನಾ ಮಂದಿರಕ್ಕೆಂದು ಸರಕಾರದಿಂದ ನಾಗರಿಕ ಸೇವಾಸಮಿತಿ ಗುರುವಾಯನಕೆರೆ ಇವರಿಗೆ ಮಂಜೂರು ಮಾಡಿದ್ದ ಜಮೀನನ್ನು ನಾಗರಿಕ ಸೇವಾ ಟ್ರಸ್ಟ್ ಗುರುವಾಯನಕೆರೆ ಅಧ್ಯಕ್ಷ ಕೆ ಸೋಮನಾಧ ನಾಯಕ್ ಹಾಗೂ ಇತರೆ ಟ್ರಸ್ಟಿಗಳು ತಮ್ಮ ಸ್ವಂತ ಉಪಯೋಗಕ್ಕೆ ಬಳಸಿಕೊಂಡು ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಗುರುವಾಯನಕೆರೆ ಪಾಂಡುರಂಗ ಭಜನಾ ಮಂದಿರದ ಪ್ರಕಾಶ್ ಕಾಮತ್ ನೀಡಿರುವ ದೂರಿನಂತೆ ಬೆಳ್ತಂಗಡಿ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಸಮಿತಿಯವರು ಒತ್ತಾಯಿಸಿದ್ದಾರೆ.
ಬೆಳ್ತಂಗಡಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದರು. ನಾಗರಿಕ ಸೇವಾ ಸಮಿತಿಗೆ ಭಜನಾ ಮಂದಿರಕ್ಕೆಂದು ಸರಕಾರದಿಂದ 24 ಸೆನ್ಸ್ ಜಾಗ 1986-87 ರಲ್ಲಿ ಮಂಜೂರಾಗಿತ್ತು ಈ ಜಾಗವನ್ನು ನಾಗರಿಕ ಸೇವಾ ಟ್ರಸ್ಟ್‌ನ ಟ್ರಸ್ಟಿಗಳಾದ ಕೆ ಸೋಮನಾಧ ನಾಯಕ್, ರಂಜನ್ ರಾವ್ ವಿಧ್ಯಾ ನಾಯಕ್ ಹಾಗೂ ದಯಾನಂದ ಹಾಗೂ ಇತರೆ ಟ್ರಸ್ಟಿಗಳು ಸೇರಿಕೊಂಡು ತಮ್ಮ ಸ್ವಂತ ಉದ್ದೇಶಕ್ಕಾಗಿ ಉಪಯೋಗಿಸಿ ಅಲ್ಲಿ ಕಟ್ಟಡಗಳನ್ನು ನಿರ್ಮಿಸಿಕೊಂಡು ಲಾಭದಾಯಕ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ ಇದು ಸರಕಾರ ಜಮೀನು ಮಂಜೂರು ಮಾಡುವಾಗ ವಿಧಿಸಿರುವ ಶರತ್ತುಗಳಿಗೆ ವಿರುದ್ದವಾಗಿದ್ದು ಅಕ್ರಮವೆಸಗಿದ್ದಾರೆ ಎಂದು ಆರೋಪಿಸಿದರು. ಅದೇ ರೀತಿ ಕಟ್ಟಡ ನಿರ್ಮಾಣಕ್ಕಾಗಿ ಲಕ್ಷಾಂತರ ಹಣ ಸಂಗ್ರಹ ಮಾಡಿರುವುದಾಗಿಯೂ ಆರೋಪಿಸಿದರು. ಈ ಬಗ್ಗೆ ಬೆಳ್ತಂಗಡಿ ಪೋಲೀಸರಿಗೆ ನೀಡಿರುವ ದೂರಿನಂತೆ ಪೋಲೀಸರು ಜ 20 ರಂದು ಕೆ ಸೋಮನಾಧನಾಯಕ್ ಹಾಗೂ ಇತರರ ವಿರುದ್ದ ಸಾರ್ವಜನಿಕರಿಗೆ ವಂಚಿಸಿರುವ ಬಗ್ಗೆ ಹಾಗೂ ನಂಬಿಕೆ ದ್ರೋಹ ಎಸಗಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಂದು ತಿಳಿಸಿದ ಅವರು ಸದ್ರಿ ಭಜನಾ ಮಂದಿರಕ್ಕೆ ಮಂಜೂರಾಗಿರುವ ಜಮೀನನ್ನು ವಶಪಡಿಸಿ ನಮ್ಮ ಸಮಿತಿಗೆ ನಿಡಬೇಕು ಎಂದು ಒತ್ತಾಯಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಸಮಿತಿಯ ಸದಸ್ಯರುಗಳಾದ ಶಶಿಧರ ನಾಯಕ್, ಗಣೇಶ್ ಪ್ರಭು, ಪ್ರಕಾಶ್ ಕಾಮತ್, ಗೋಪಿನಾಧ್ ನಾಯಕ್, ವೈ.ಪಿ.ಶೆಣೈ, ಮಂಜುನಾಧ ನಾಯಕ್, ಭಜರಂಗ ದಳದ ಮುಖಂಡರುಗಳಾದ ಭಾಸ್ಕರ ಧರ್ಮಸ್ಥಳ, ದಿನೇಶ್ ಮುಗುಳಿ, ವಿಶ್ವಹಿಂದೂ ಪರಿಷತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ ತಾರಾನಾಧ, ಮತ್ತಿತರರು ಉಪಸ್ಥಿತರಿದ್ದರು. ಇದೇ ವಿಚಾರದ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ರಂಜನ್ ರಾವ್ ಯರ್ಡೂರು ಹಾಗೂ ಕಾರ್ಯದರ್ಶಿ ಕೆ ಸೋಮನಾಧ ನಾಯಕ್ ಅವರು ನಾವು ಯಾವುದೇ ಸುಳ್ಳು ದಾಖಲೆ ಸೃಷ್ಟಿಸಿಲ್ಲ ಫೋರ್ಜರಿ ಮಾಡಲಿಲ್ಲ ಅದರ ಅಗತ್ಯವೂ ನಮಗಿಲ್ಲ. ಯಾವುದಾರೂ ರೀತಿಯಲ್ಲಿ ಶರತ್ತುಗಳು ಉಲ್ಲಂಘನೆಯಾಗಿದ್ದರೆ ಶರ್ತ 7 ರ ಪ್ರಕಾರ ಸರಕಾರ ಜಾಗವನ್ನು ಹಿಂದಕ್ಕೆ ಪಡೆಯಬಹುದಾಗಿದೆ ಅದಕ್ಕೆ ನಮ್ಮ ಯಾವುದೇ ವಿರೋಧವಿಲ್ಲ ಎಂದು ತಿಳಿಸಿದ್ದಾರೆ. ಈ ಜಾಗ ನಾಗರಿಕ ಸೇವಾ ಸಮಿತಿಗೆ ಪಾಂಡುರಂಗ ಬಜನಾ ಮಂದಿರಕ್ಕೆಂದು ಮಂಜೂರಾಗಿದ್ದು ಇಲ್ಲಿ ಪಾಂಡುರಂಗ ಮಂದಿರ ಕಟ್ಟಿದ್ದೇವೆ ಅದು ಈಗಲೂ ಹಾಗೆಯೆ ಇದೆ. ಉಳಿಕೆ ಜಾಗದಲ್ಲಿ ಸಣ್ಣ ಸಭಾಭವನವನ್ನೂ ನಿರ್ಮಿಸಿದ್ದೇವೆ ಎರಡು ವರ್ಷ ಇಲ್ಲಿ ಐಟಿಐ ತರಗತಿಗಳನ್ನೂ ನಡೆಸಿದ್ದೆವು ಈಗ ಅದನ್ನು ನಿಲ್ಲಿಸಿದ್ದೇವೆ. ಇದೀಗ ಆರೋಪ ಮಾಡುತ್ತಿರುವವರು ಗುರುವಾಯನಕೆರೆ ಬಸ್ ನಿಲ್ದಾಣದಲ್ಲಿ ಪೊರಂಬೋಕು ಜಾಗದಲ್ಲಿ ಪಾಂಡುರಂಗ ಮಂದಿರ ಕಟ್ಟಿ ಅದರಲ್ಲಿ ಭಜನೆ ಕಾರ್ಯಕ್ರಮ ನಡೆಸುತ್ತಿದ್ದು ಅದರ ಸಮಿತಿಯವರಾಗಿದ್ದಾರೆ. ಇವರಿಗೂ ನಾಗರಿಕ ಸೇವಾ ಸಮಿತಿಯ ಪಾಂಡುರಂಗ ಮಂದಿರಕ್ಕೂ ಯಾವುದೇ ಸಂಭಂಧವಿರುವುದಿಲ್ಲ. ಸದ್ರಿ ಜಾಗದ ಆರ್.ಟಿ.ಸಿಯನ್ನು ಕೈ ಬರಹದಲ್ಲಿ ತಿದ್ದಿರುವುದಾಗಿ ದೂರು ನೀಡಿರುವುದಾಗಿ ತಿಳಿದು ಬಂದಿದ್ದು ಇದನ್ನು ಯಾರು ಮಾಡಿದ್ದಾರೆ ಎಂಬ ಬಗ್ಗೆ ತನಿಖೆಯಾಗಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.







