ದಲಿತ ವಿದ್ಯಾರ್ಥಿಯ ಆತ್ಮಹತ್ಯೆ ಮೋದಿಯದು ಮೊಸಳೆ ಕಣ್ಣೀರು: ಎಎಪಿ
ಹೊಸದಿಲ್ಲಿ, ಜ.23: ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲಾರ ಆತ್ಮಹತ್ಯೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ‘ವಿಳಂಬಿತ’ ಪ್ರತಿಕ್ರಿಯೆಯನ್ನು ಪ್ರಶ್ನಿಸಿದ ಆಮ್ ಆದ್ಮಿ ಪಕ್ಷ (ಎಎಪಿ), ದಲಿತ ವಿದ್ಯಾರ್ಥಿಯ ಆತ್ಮಹತ್ಯೆ ಕೇಂದ್ರ ಸರಕಾರದ ಮೇಲೆ ರಾಜಕೀಯವಾಗಿ ಪರಿಣಾಮ ಬೀರುವುದರಿಂದ ಅವರು ‘ಮೊಸಳೆ ಕಣ್ಣೀರು’ ಸುರಿಸಿದ್ದಾರೆ ಹಾಗೂ ಹಾನಿ ಸರಿಪಡಿಸಲು ಪ್ರಯತ್ನಿಸಿದ್ದಾರೆಂದು ಶನಿವಾರ ಆರೋಪಿಸಿದೆ.
ವಿದ್ಯಾರ್ಥಿಯ ಸಾವಿನ ಬಗ್ಗೆ ಪ್ರಧಾನಿ ಮೊಸಳೆ ಕಣ್ಣೀರು ಸುರಿಸಿದ್ದಾರೆ. ಘಟನೆ ನಡೆದು 5 ದಿನ ಕಳೆದಿದ್ದರೂ ಅವರು ಒಂದು ಶಬ್ದವನ್ನೂ ಮಾತನಾಡಿರಲಿಲ್ಲ. ಈ ಸಂಪೂರ್ಣ ವಿವಾದದಲ್ಲಿ ಅವರ ಸಚಿವರಾದ ಬಂಡಾರು ದತ್ತಾತ್ರೇಯ ಹಾಗೂ ಸ್ಮತಿ ಇರಾನಿಯವರನ್ನು ಆತನ ಆತ್ಮಹತ್ಯೆಗೆ ಕಾರಣವೆಂದು ಬಿಂಬಿಸಲಾಗುತ್ತಿದೆಯೆಂದು ಎಎಪಿ ನಾಯಕ ಆಶುತೋಷ್ ಹೇಳಿದ್ದಾರೆ.
ರೋಹಿತ್‌ರ ಸಾವಿಗೆ ಬಿಜೆಪಿ ಭಾಗಶಃ ಕಾರಣವಾಗಿದೆಯೆಂದು ಆರೋಪಿಸಿದ ಅವರು, ಬಿಜೆಪಿಯ ವಿದ್ಯಾರ್ಥಿ ಘಟಕವಾದ ಎಬಿವಿಪಿ, ದಲಿತ ವಿದ್ಯಾರ್ಥಿಯ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿತ್ತು ಹಾಗೂ ಹೈದರಾಬಾದ್ ವಿವಿಯ ಉಪಕುಲಪತಿಗೆ ಕೇಂದ್ರ ಸಚಿವರು ಸತತ ಒತ್ತಡ ಹಾಕುತ್ತಿದ್ದರು. ಹುಡುಗನನ್ನು ಆತ್ಮಹತ್ಯೆಗೆ ದೂಡಲಾಯಿತು. ಎಲ್ಲವೂ ನಡೆದ ಮೇಲೆ, ಪ್ರಧಾನಿಗೆ ಕಣ್ಣೀರು ಸುರಿಸಲು ಈಗ ಸಮಯ ಸಿಕ್ಕಿತು. ಕಳೆದ 5 ದಿನಗಳಿಂದ ಅವರೇನು ನಿದ್ದೆ ಮಾಡುತ್ತಿದ್ದರೇ? ಎಂದು ಪ್ರಶ್ನಿಸಿದ್ದಾರೆ.
ಅವರದೇ ಸಚಿವರಿಗೆ ಸಂಬಂಧಿಸಿದ ಇಂತಹದೇ ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸಲು ಮೋದಿ ದೀರ್ಘ ಸಮಯ ತೆಗೆದುಕೊಳ್ಳುತ್ತಾರೆ. ಇದು ದಲಿತರು ಹಾಗೂ ಅಲ್ಪಸಂಖ್ಯಾತರ ಕುರಿತು ಕೇಂದ್ರ ಸರಕಾರದ ಮಾನಸಿಕತೆಯನ್ನು ಸೂಚಿಸುತ್ತಿದೆ. ದಲಿತರು ಅಥವಾ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಪರಿಸ್ಥಿತಿಯಾಗಿರುವಾಗೆಲ್ಲ, ಪ್ರಧಾನಿ ಪ್ರತಿಕ್ರಿಯಿಸಲು ದೀರ್ಘ ಸಮಯ ತೆಗೆದುಕೊಳ್ಳುತ್ತಾರೆ. ಅಖ್ಲಾಕ್‌ರ ಹತ್ಯೆಯ ವೇಳೆ ಅವರಿಗೆ ವೌನ ಮುರಿಯಲು 10 ದಿನಗಳೇ ಬೇಕಾದವು. ರೋಹಿತ್‌ರ ವಿಚಾರದಲ್ಲಿ 5 ದಿನಗಳು ಬೇಕಾದವು. ಈ ಪರಿಸ್ಥಿತಿ ಅವರಿಗೆ ರಾಜಕೀಯವಾಗಿ ಹಾನಿ ಮಾಡುವುದೆಂದು ಪ್ರಧಾನಿಗೆ ಅರ್ಥವಾಗಿದೆ. ಹಾಗಾಗಿ ಈಗ ಹಾಅನಿ ಸರಿಪಡಿಸುವ ಪ್ರಯತ್ನ ನಡೆಸುತ್ತಿದ್ದಾರೆಂದು ಆತೋಷ್ ಟೀಕಿಸಿದ್ದಾರೆ.
.







