ರಾಜಸ್ಥಾನ: ಬ್ಯಾಂಕ್ ಅಧಿಕಾರಿಗಳ ಕಿರುಕುಳ ರೈತನ ಸಾವು
ಅಜ್ಮೀರ್, ಜ.23: ಸಾಲ ವಸೂಲಿಗಾಗಿ ಸಹಕಾರಿ ಬ್ಯಾಂಕೊಂದರ ಅಧಿಕಾರಿಗಳು ಕಾಟ ಕೊಟ್ಟ ಕಾರಣ ಅಜ್ಮೀರ್‌ನ ರೈತನೊಬ್ಬ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ರೈತನ ಕುಟುಂಬ ಆರೋಪಿಸಿದೆ.
ಕೇಕರಿ ಭೂಮಿ ವಿಕಾಸ ಬ್ಯಾಂಕ್‌ನ ಅಧಿಕಾರಿಗಳು ಜಿಲ್ಲೆಯ ಸರ್ವಾರ್ ಬ್ಲಾಕ್‌ನ ಅರ್ನಿಯಾ ಗ್ರಾಮದ ತನ್ನ ಮನೆಯ ಹೊರಗಡೆಗೆ ಮಂಗಳವಾರ ಸಾಲ ವಸೂಲಾತಿ ನೋಟಿಸನ್ನು ಅಂಟಿಸಿದ ಬಳಿಕ ಧನ್ನಾಲಾಲ್ ಬೈರ್ವಾ ಎಂಬ ಈ ರೈತ ಮಾನಸಿಕ ಒತ್ತಡಕ್ಕೆ ಒಳಗಾದನು. ಆತ ತನ್ನ ಸಾಲದ ಕಂತನ್ನು ವಾಯ್ದೆಗೆ ಸರಿಯಾಗಿ ಪಾವತಿಸುತ್ತ ಬಂದಿದ್ದನು. ಆದರೆ, ಹವಾಮಾನ ವೈಪರೀತ್ಯದಿಂದ ಬೆಳೆ ಹಾನಿಗೊಂಡ ಕಾರಣ ಈ ಬಾರಿ ಆತ ಕಂತು ಕಟ್ಟಿರಲಿಲ್ಲ. ಬ್ಯಾಂಕಿನ ನೋಟಿಸ್ ಧನ್ನಾಲಾಲ್‌ನ ಆತ್ಮ ಗೌರವಕ್ಕೆ ಧಕ್ಕೆ ತಂದಿತು ಎಂದು ಮೃತನ ತಂದೆ ನಂದ ಬೈರ್ವಾ ತಿಳಿಸಿದ್ದಾರೆ.
ತನ್ನ ಮಗ ಒಟ್ಟು ರೂ.1,62,000 ಸಾಲದಲ್ಲಿ ರೂ. 65 ಸಾವಿರ ಮರುಪಾವತಿಸಿದ್ದ. ಆದರೆ, ಬ್ಯಾಂಕ್ ಚಕ್ರ ಬಡ್ಡಿಯನ್ನು ಸೇರಿಸಿ ರೂ.2,47,972 ಬಾಕಿಯಿದೆ ಎಂದಿತ್ತು. ಶೀಘ್ರವೇ ಸಾಲದ ಕಂತನ್ನು ಪಾವತಿಸುವ ಭರವಸೆಯನ್ನು ಧನ್ನಾಲಾಲ್ ನೀಡಿದ್ದರೂ ಬ್ಯಾಂಕ್‌ನ ಅಧಿಕಾರಿಗಳು ಆತನಿಗೆ ಸತತ ಕಿರುಕುಳ ನೀಡುತ್ತಿದ್ದರು. ಬ್ಯಾಂಕಿನ ಸತತ ಕಿರುಕುಳ ಹಾಗೂ ಸಾರ್ವಜನಿಕ ಅವಮಾನ ತನ್ನ ಮಗ ಜೀವ ತೆಗೆದುಕೊಳ್ಳುವಂತೆ ಮಾಡಿದವೆಂದು ನಂದ ಆರೋಪಿಸಿದ್ದಾರೆ.
ಧನ್ನಾಲಾಲ್‌ನ ಕುಟುಂಬಿಕರು ಬ್ಯಾಂಕ್‌ನ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.





