ಕೇರಳ ಸಚಿವನ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಾಲಯದ ಆದೇಶ
ತೃಶ್ಶೂರು,ಜ.23: ಬಾರ್ ಲಂಚ ಹಗರಣದಲ್ಲಿ ಅಬಕಾರಿ ಸಚಿವ ಕೆ.ಬಾಬು ವಿರುದ್ಧ ಪ್ರಕರಣವನ್ನು ದಾಖಲಿಸುವಂತೆ ಇಲ್ಲಿಯ ಜಾಗೃತ ನ್ಯಾಯಾಲಯವು ಶನಿವಾರ ಜಾಗೃತ ಮತ್ತು ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ಆದೇಶಿಸಿದ ಹಿನ್ನೆಲೆಯಲ್ಲಿ ಸಚಿವರು ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದು,ಇದರೊಂದಿಗೆ ಕೇರಳದಲ್ಲಿಯ ಕಾಂಗ್ರೆಸ್ ನೇತೃತ್ವದ ಯುಡಿಎ ಸರಕಾರಕ್ಕೆ ಹಿನ್ನಡೆಯುಂಟಾಗಿದೆ.
ಪ್ರಕರಣದಲ್ಲಿ ಮೊದಲ ವರದಿಯನ್ನು ಫೆ.22ರೊಳಗೆ ಸಲ್ಲಿಸುವಂತೆಯೂ ನ್ಯಾಯಾಲಯವು ಆದೇಶಿಸಿತು.
ಆದೇಶವನ್ನು ಹೊರಡಿಸಿದ ನ್ಯಾ.ಎಸ್.ಎಸ್.ವಾಸನ್ ಅವರು ನ್ಯಾಯಾಲಯವು ಈ ಹಿಂದೆ ಆದೇಶಿಸಿದ್ದಂತೆ ತ್ವರಿತ ಪ್ರಮಾಣೀಕರಣ ವರದಿ ಸಲ್ಲಿಕೆಯಲ್ಲಿ ವಿಳಂಬಕ್ಕಾಗಿ ಜಾಗೃತ ಘಟಕವನ್ನು ಟೀಕಿಸಿದರು.
ಬಾರ್‌ಗಳ ಪರವಾನಿಗೆಗಳ ನವೀಕರಣಕ್ಕಾಗಿ ಸಚಿವ ಬಾಬು ಅವರಿಗೆ 10 ಕೋ.ರೂ ಲಂಚ ನೀಡಿರುವುದಾಗಿ ಆರೋಪವನ್ನು ಹೊರಿಸಿರುವ ಬಾರ್ ಮಾಲಕರ ಸಂಘದ ಕಾರ್ಯಾಧ್ಯಕ್ಷ ಬಿಜು ರಮೇಶ ವಿರುದ್ಧವೂ ಪ್ರಕರಣವನ್ನು ದಾಖಲಿಸುವಂತೆ ನ್ಯಾಯಾಲಯವು ಆದೇಶಿಸಿತು.
ಇದೊಂದು ‘ಅಸಹಜ ತೀರ್ಪು’ ಎಂದು ಬಣ್ಣಿಸಿದ ಬಾಬು, ತಾನು ಅಮಾಯಕ ಎನ್ನುವುದನ್ನು ಸಾಬೀತುಗೊಳಿಸಲು ಕಾನೂನು ಹೋರಾಟವನ್ನು ಮುಂದುವರಿಸುವುದಾಗಿ ಸುದ್ದಿಗಾರರಿಗೆ ತಿಳಿಸಿದರು.
ಭಾರೀ ನಷ್ಟಕ್ಕೆ ಗುರಿಯಾಗಿರುವ ಬಾರ್ ಮಾಲಿಕರ ಪಿತೂರಿಗೆ ತಾನು ಬಲಿಪಶುವಾಗಿದ್ದೇನೆ,ಅವರಿಗೆ ಸಿಪಿಎಂ ಬೆಂಬಲವೂ ಇದೆ ಎಂದ ಬಾಬು, ಡಿ.15 ರಂದು ಸಂಜೆ ಸಿಪಿಎಂ ಶಾಸಕರೋರ್ವರ ನಿವಾಸದಲ್ಲಿ ಪಕ್ಷದ ನಾಯಕ ಕೊಡಿಯೇರಿ ಬಾಲಕೃಷ್ಣನ್ ಅವರ ಉಪಸ್ಥಿತಿಯಲ್ಲಿ ಕೆಲವು ಬಾರ್ ಮಾಲಕರು ಸಭೆ ಸೇರಿದ್ದರು. 730 ಬಾರ್‌ಗಳು ಮುಚ್ಚಲ್ಪಟ್ಟ ಹಿನ್ನೆಲೆಯಲ್ಲಿ ತನ್ನ ವಿರುದ್ಧ ಒಳಸಂಚೊಂದನ್ನು ರೂಪಿಸಲಾಗಿತ್ತು ಎಂದು ಆರೋಪಿಸಿದರು.
ಬಾಬು ಬಾರ್ ಲಂಚ ಹಗರಣದಲ್ಲಿ ಜಾಗೃತ ಘಟಕದಿಂದ ಪ್ರಕಕರಣ ದಾಖಲಿಸಲ್ಪಟ್ಟ ಎರಡನೇ ಸಚಿವರಾಗಿದ್ದಾರೆ. ಕಳೆದ ವರ್ಷದ ನವಂಬರ್‌ನಲ್ಲಿ ಹೈಕೋರ್ಟ್‌ನಿಂದ ಟೀಕೆಗೊಳಗಾದ ನಂತರ ಆಗಿನ ವಿತ್ತ ಸಚಿವ ಕೆ.ಎಂ.ಮಣಿ ಹುದ್ದೆಯನ್ನು ತೊರೆದಿದ್ದರು.







