ಮಕ್ಕಾದಲ್ಲಿ ಪೋಲಾಗುವ ಆಹಾರದಿಂದ ಲಕ್ಷಾಂತರ ಹಸಿದ ಮಕ್ಕಳಿಗೆ ಊಟ
ಮಕ್ಕಾ, ಜ. 23: ಮಕ್ಕಾದಲ್ಲಿ ಪೋಲಾಗುತ್ತಿರುವ ಆಹಾರದಿಂದ 18 ಅಭಿವೃದ್ಧಿಶೀಲ ದೇಶಗಳ 17% ಹಸಿದ ಮಕ್ಕಳ ಹೊಟ್ಟೆ ತುಂಬಿಸಬಹುದಾಗಿದೆ ಎಂದು ಮಕ್ಕಾದ ದತ್ತಿ ಆಹಾರ ಕಾರ್ಯಕ್ರಮವೊಂದರ ಮಹಾನಿರ್ದೇಶಕ ಅಹ್ಮದ್ ಅಲ್-ಮಟ್ರಾಫಿ ಹೇಳಿದ್ದಾರೆ.
ಆಫ್ರಿಕ, ಏಶ್ಯ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಸುಮಾರು 48 ಲಕ್ಷ ಹಸಿದ ಮಕ್ಕಳಿದ್ದಾರೆ.
ಸಾಮಾನ್ಯ ಮದುವೆಯೊಂದರಲ್ಲಿ ಪೋಲಾಗುವ ಆಹಾರ ಕನಿಷ್ಠ 250 ಮಂದಿಯ ಹೊಟ್ಟೆ ತುಂಬಿಸಲು ಸಾಕಾಗುತ್ತದೆ ಎಂದು ಅಲ್-ಮಟ್ರಾಫಿ ಹೇಳುತ್ತಾರೆ.
ವರ್ಷದ ಮಧ್ಯಭಾಗದ ರಜಾ ದಿನಗಳಲ್ಲಿ, ಮದುವೆಗಳು ಮತ್ತು ಇತರ ಸಾಮಾಜಿಕ ಸಮಾರಂಭಗಳಿಂದ ಸಂಗ್ರಹಿಸಲಾದ ಆಹಾರದಿಂದ 24,000 ಮಂದಿಯ ಹಸಿವು ತಣಿಸಲಾಗಿದೆ ಎಂದು ಅವರು ಹೇಳಿದರು.
ಮಕ್ಕಾದಲ್ಲಿರುವ 120 ಸಭಾಗೃಹಗಳು ಮತ್ತು ರಿಸಾರ್ಟ್‌ಗಳ ಪೈಕಿ ರಜಾ ದಿನಗಳಲ್ಲಿ 60ನ್ನು ಸಂಪರ್ಕಿಸಲಾಗುತ್ತದೆ ಎಂದು ಅಲ್-ಮಟ್ರಾಫಿ ತಿಳಿಸಿದರು. ಹೆಚ್ಚುವರಿ ಆಹಾರದ ಲಭ್ಯತೆಯ ಬಗ್ಗೆ ಮಕ್ಕಾದ 30 ಶೇ. ಜನರು ಯಾರಿಗೂ ಮಾಹಿತಿ ನೀಡುವುದಿಲ್ಲ ಎಂದರು.
ಅಲ್-ಮಟ್ರಾಫಿಯ ಸಂಸ್ಥೆಯು ಆಹಾರವನ್ನು ಪೋಲು ಮಾಡದಂತೆ ಹಾಗೂ ಅದನ್ನು ಅಗತ್ಯವಿರುವವರಿಗೆ ನೀಡುವಂತೆ ಜನರಲ್ಲಿ ತಿಳುವಳಿಕೆ ಮೂಡಿಸಲು ಯತ್ನಿಸುತ್ತಿದೆ ಎಂದು ಅವರು ನುಡಿದರು.
ಈ ನಡುವೆ, ತಮ್ಮ ಉತ್ತಮ ಬದುಕಿಗಾಗಿ ಜನರಲ್ಲಿ ಕೃತಜ್ಞತಾ ಭಾವವಿದ್ದರೆ ಅವರಲ್ಲಿ ಹೆಚ್ಚಿನ ಜವಾಬ್ದಾರಿ ಇರುತ್ತದೆ ಎಂದು ತನ್ನ ಶುಕ್ರವಾರದ ಪ್ರವಚನದಲ್ಲಿ ಮಕ್ಕಾದ ಮಸ್ಜಿದುಲ್ ಹರಾಂನ ಇಮಾಮ್ ಹಾಗೂ ಖತೀಬ್ ಶೇಖ್ ಸಲೇಹ್ ಬಿನ್ ಹುಮೈದ್ ಹೇಳಿದ್ದಾರೆ.
‘‘ಅವರು ಹೀಗೆ ಮಾಡದಿದ್ದರೆ ಹಾಗೂ ಕೃತಘ್ನರಾದರೆ, ಅಲ್ಲಾಹನು ಈ ಅವರ ಬದುಕಿನ ಉತ್ತಮ ಅಂಶಗಳನ್ನು ಕಸಿದುಕೊಳ್ಳಬಹುದು’’ ಎಂದರು. ತಮಗೆ ಸಿಕ್ಕಿರುವ ಆಶೀರ್ವಾದವನ್ನು ಕಾಪಾಡಿಕೊಂಡು ಬರುವುದು ಒಂದು ರೀತಿಯ ಪೂಜೆಯಾಗಿದೆ ಎಂದು ಅವರು ಹೇಳಿದ್ದಾರೆ.





