ಲಕ್ನೋ ವಿವಿಯಲ್ಲಿ ಮೋದಿ ವಿರುದ್ಧ ಘೋಷಣೆ: ದಲಿತ ವಿದ್ಯಾರ್ಥಿಗಳಿಗೆ ಕಿರುಕುಳ

ಲಕ್ನೋ,ಜ.23: ಶುಕ್ರವಾರ ಇಲ್ಲಿಯ ಬಾಬಾಸಾಹೇಬ್ ಅಂಬೇಡ್ಕರ್ ವಿವಿಯ ಘಟಿಕೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಘೋಷಣೆಗಳನ್ನು ಕೂಗಿರುವ ದಲಿತ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿರುವ ಕೃತ್ಯ ಬೆಳಕಿಗೆ ಬಂದಿದೆ.
ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಲಾಗಿದ್ದು, ಇಂದು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಶುಕ್ರವಾರದ ಘಟನೆಯ ಬಳಿಕ ವಿವಿ ಆಡಳಿತವು ತಾನು ಎರಡು ವರ್ಷಗಳ ಶುಲ್ಕವನ್ನು ಪಾವತಿಸಿದ್ದರೂ ತನ್ನನ್ನು ಹಾಸ್ಟೆಲ್‌ನಿಂದ ಹೊರದಬ್ಬಿದೆ ಎಂದು ಕರಣ್ ಎಂಬವರು ಆರೋಪಿಸಿದರು.
ಹೈದರಾಬಾದ್ ವಿವಿಯ ವಿದ್ಯಾರ್ಥಿ ರೋಹಿತ್ ವೇಮುಲಾಗೆ ಆದ ಗತಿ ಭವಿಷ್ಯದಲ್ಲಿ ಇನ್ಯಾವುದೇ ದಲಿತ ವಿದ್ಯಾರ್ಥಿಗಳಿಗೆ ಬರಬಾರದು ಎಂದು ತಾವು ಘೋಷಣೆಗಳನ್ನು ಕೂಗಿದ್ದಾಗಿ ಇಂದು ವಿದ್ಯಾರ್ಥಿಗಳು ಇಲ್ಲಿ ತಿಳಿಸಿದರು. ಪೊಲೀಸರಿಂದ ಬಂಧನಕ್ಕೊಳಗಾಗಿ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡಿರುವ ರಾಮ್ ಕರಣ್ ಮತ್ತು ಅಮರೇಂದ್ರ ಕುಮಾರ ಆರ್ಯ ಅವರು ದಲಿತರ ಮೇಲಿನ ದೌರ್ಜನ್ಯಗಳನ್ನು ವಿರೋಧಿಸಿ ತಾವು ಧ್ವನಿಯೆತ್ತಿದ್ದಾಗಿ ಹೇಳಿದರು.
ನಾವು ಅಂಬೇಡ್ಕರ್‌ರ ಅನುಯಾಯಿಗಳಾಗಿದ್ದೇವೆ ಮತ್ತು ಸಂವಿಧಾನ ಹಾಗೂ ಕಾನೂನಿನ ವಿದ್ಯಾರ್ಥಿಗಳಾಗಿದ್ದೇವೆ. ಹೈದರಾಬಾದಿನಲ್ಲಿ ದಲಿತ ವಿದ್ಯಾರ್ಥಿ ವೇಮುಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ವಿದ್ಯಾರ್ಥಿಗಳು ಈ ರೀತಿಯಲ್ಲಿ ಸಾಯಬಾರದು, ಹೀಗಾಗಿಯೇ ನಾವು ಘೋಷಣೆಗಳನ್ನು ಕೂಗಿದ್ದೆವು ಎಂದು ಕರಣ್ ಹೇಳಿದರೆ, ಈ ಧ್ವನಿ ಅಡಗದು..ವೇಮುಲಾಗಾದ ಗತಿ ಭವಿಷ್ಯದಲ್ಲಿ ಇನ್ಯಾವುದೇ ದಲಿತ ವಿದ್ಯಾರ್ಥಿಗೆ ಬರಕೂಡದು ಎನ್ನುವುದು ನಮ್ಮ ಉದ್ದೇಶ ಎಂದು ಆರ್ಯ ಹೇಳಿದರು. ಎಲ್ಲ ವಿವಿಗಳಲ್ಲಿಯೂ ದಲಿತ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆಪಾದಿಸಿದರು.







