‘ಸರ್ಚ್ ಬಾರ್’ ಹೊಂದಲು ಆ್ಯಪಲ್‌ಗೆ ಗೂಗಲ್‌ನಿಂದ 100 ಕೋಟಿ ಡಾಲರ್
ವಾಶಿಂಗ್ಟನ್, ಜ. 23: ಐಫೋನ್‌ಗಳಲ್ಲಿ ತನ್ನ ‘ಸರ್ಚ್ ಬಾರ್’ನ್ನು ಸೇರಿಸುವುದಕ್ಕಾಗಿ ಗೂಗಲ್ ಆ್ಯಪಲ್ ಕಂಪೆನಿಗೆ 2014ರಲ್ಲಿ 100 ಕೋಟಿ ಡಾಲರ್ ಮೊತ್ತವನ್ನು ಪಾವತಿಸಿದೆ.
ಗೂಗಲ್ ವಿರುದ್ಧ ಒರೇಕಲ್ ಕಾರ್ಪ್ ಹೂಡಿದ ಕಾಪಿರೈಟ್ ದಾವೆಗೆ ಸಂಬಂಧಿಸಿದ ನ್ಯಾಯಾಲಯ ಕಲಾಪಗಳ ದಾಖಲೆಗಳಿಂದ ಇದು ಬಹಿರಂಗವಾಗಿದೆ.
ಶೋಧ ಎಂಜಿನ್ ದೈತ್ಯ (ಗೂಗಲ್)ನೊಂದಿಗೆ ಆ್ಯಪಲ್ ಒಪ್ಪಂದವೊಂದನ್ನು ಹೊಂದಿದೆ. ಇದರ ಪ್ರಕಾರ, ಆ್ಯಪಲ್ ಉಪಕರಣದಿಂದ ಗೂಗಲ್ ಸಂಪಾದಿಸುವ ಆದಾಯದ ಒಂದು ಭಾಗವನ್ನು ಐಫೋನ್ ತಯಾರಕ ಕಂಪೆನಿ (ಆ್ಯಪಲ್)ಗೆ ಕೊಡಬೇಕು.
ಐಫೋನ್‌ನಲ್ಲಿ ಉಪಸ್ಥಿತಿ ಹೊಂದಲು ಗೂಗಲ್ ಆ್ಯಪಲ್‌ಗೆ ಎಷ್ಟು ಹಣ ನೀಡುತ್ತದೆ ಎಂಬ ಬಗ್ಗೆ ಹಲವು ವರ್ಷಗಳಿಂದ ತರಹೇವಾರಿ ಊಹಾಪೋಹಗಳಿದ್ದವು. ಆದರೆ, ಎರಡೂ ಕಂಪೆನಿಗಳು ಈ ವಿಷಯದಲ್ಲಿ ಸಾರ್ವಜನಿಕವಾಗಿ ತುಟಿಪಿಟಿಕ್ ಎಂದಿರಲಿಲ್ಲ. ಆ್ಯಂಡ್ರಾಯಿಡ್‌ನ್ನು ಅಭಿವೃದ್ಧಿಪಡಿಸುವಲ್ಲಿ ಗೂಗಲ್ ತನ್ನ ಜಾವಾ ಸಾಫ್ಟ್‌ವೇರ್ ಬಳಸಿಕೊಂಡಿದೆ ಹಾಗೂ ಅದಕ್ಕಾಗಿ ಅದು ತನಗೆ ಹಣ ಪಾವತಿಸಿಲ್ಲ ಎಂದು ಆರೋಪಿಸಿ ಒರೇಕಲ್ 2010ರಿಂದ ಗೂಗಲ್ ವಿರುದ್ಧ ಕಾನೂನು ಸಮರದಲ್ಲಿ ತೊಡಗಿದೆ.





