ದಲಿತರ ವಿರುದ್ಧ ಅಸಹಿಷ್ಣುತೆ ಹೆಚ್ಚುತ್ತಿದೆ: ಡಾ.ಉದಯ ಬಾರ್ಕೂರು

ಸಂದರ್ಶನ: ಪುಷ್ಪರಾಜ್ ಬಿ.ಎನ್.ಹೈದರಾಬಾದ್ ವಿಶ್ವ ವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಉದಯ ಬಾರಕೂರು ವಿಶ್ವ ವಿದ್ಯಾನಿಲಯಗಳಲ್ಲಿ ದಲಿತ ವಿದ್ಯಾರ್ಥಿಗಳ ಇಂದಿನ ಸ್ಥಿತಿಗತಿಯ ಬಗ್ಗೆ ‘ವಾರ್ತಾಭಾರತಿ’ಗೆ ನೀಡಿದ ಸಂದರ್ಶನದಲ್ಲಿ ವಿಶ್ಲೇಷಣೆ ನಡೆಸಿದ್ದಾರೆ.
ವಾ.ಭಾ:-ವಿಶ್ವ ವಿದ್ಯಾನಿಲಯಗಳಲ್ಲಿ ದಲಿತ ವಿದ್ಯಾರ್ಥಿಗಳ ಸ್ಥಿತಿಗತಿ ಹೇಗಿದೆ?.
ಡಾ.ಉದಯ ಬಾರ್ಕೂರು: ಕೆಲವು ದಶಕಗಳಲ್ಲಿ ದಲಿತ ವಿದ್ಯಾರ್ಥಿಗಳು ಮುಖ್ಯವಾಗಿ ಒಬಿಸಿ ವಿದ್ಯಾರ್ಥಿಗಳು, ಅಲ್ಪಸಂಖ್ಯಾತ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ವಿಶ್ವ ವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಅಲ್ಲದೆ, ವಿಶ್ವ ವಿದ್ಯಾನಿಲಯದಲ್ಲಿ ಎಲ್ಲರನ್ನೂ ಮೀರಿಸುವ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಹಿಂದೆ ಈ ವರ್ಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮಾತ್ರವಲ್ಲ, ಶಿಕ್ಷಣದಿಂದಲೇ ವಂಚಿತರಾಗಿದ್ದರು. ಸರಕಾರ ಮತ್ತು ಸಂವಿಧಾನದತ್ತವಾದ ಅವಕಾಶಗಳು ಹಾಗೂ ಜನರಲ್ಲಿ ಮುಖ್ಯವಾಗಿ ಈ ವರ್ಗದ ವಿದ್ಯಾರ್ಥಿಗಳ ಹೆತ್ತವರಲ್ಲಿ ಮೂಡುತ್ತಿರುವ ಜಾಗೃತಿ ಈ ರೀತಿಯ ಬದಲಾವಣೆಗೆ ಒಂದು ಕಾರಣವಾಗಿದೆ. ಈ ರೀತಿ ದಲಿತರು ತಮ್ಮ ಹಕ್ಕುಗಳನ್ನು ಚಲಾಯಿಸುತ್ತಿರುವುದು ದಲಿತರ ಬಗೆಗಿನ ಅಸಹನೆಗೆ ಪ್ರಮುಖ ಕಾರಣವಾಗಿದೆ.
ವಾ.ಭಾ:-ಸಂವಿಧಾನದತ್ತವಾದ ಅವಕಾಶವನ್ನು ದಲಿತ ವಿದ್ಯಾರ್ಥಿಗಳು ಬಳಸಿಕೊಂಡ ಕಾರಣ ಈ ರೀತಿಯ ಬದಲಾವಣೆ ಆಗಿದೆ ಎನ್ನುತ್ತೀರಾ?ದಯ ಬಾರ್ಕೂರ್:-ಸರಕಾರದ ಸೌಲಭ್ಯಗಳು, ಸಂವಿಧಾನದತ್ತ ಅವಕಾಶಗಳು ಪ್ರಸಕ್ತ ವಿಶ್ವ ವಿದ್ಯಾನಿಲಯದಲ್ಲಿ ಉನ್ನತ ವ್ಯಾಸಂಗ ಮಾಡುವ, ಸಂಶೋಧನೆ ಮಾಡುವ ವಿದ್ಯಾರ್ಥಿಗಳಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿವೆ. ಇದರಿಂದಾಗಿ ಬದಲಾವಣೆಗೂ ಕಾರಣವಾಗಿದೆ.ಸ್ವಾತಂತ್ರ ನಂತರ ಶಿಕ್ಷಣದ ಹಕ್ಕು ಈ ರೀತಿಯ ಬದಲಾವಣೆಗೆ ಪ್ರಮುಖ ಕಾರಣವಾಗಿದೆ. ಪರಿಣಾಮವಾಗಿ ಹಿಂದುಳಿದ ವರ್ಗದ ಒಳಗೆ ಒಂದು ರೀತಿಯ ವೌನ ಕ್ರಾಂತಿ ನಡೆದಿದೆ. ಒಬಿಸಿ ವರ್ಗದವರು ವಿಶ್ವ ವಿದ್ಯಾನಿಲಯದಲ್ಲಿ ಪ್ರಥಮ ರ್ಯಾಂಕ್ ಪಡೆಯುತ್ತಿದ್ದಾರೆ. ಇನ್ನೊಂದು ಕಾರಣ ಶಿಕ್ಷಣದಿಂದ ವಂಚಿತರಾದ ದಲಿತ, ಹಿಂದುಳಿದ ವರ್ಗದವರು ಮುಖ್ಯವಾಗಿ ಮಧ್ಯಮ ವರ್ಗದವರು ತಾವು ಪಟ್ಟ ಕಷ್ಟ,ತಮ್ಮ ಮಕ್ಕಳು ಪಡಬಾರದು.ಅದಕ್ಕಾಗಿ ಅವರಿಗೆ ಉತ್ತಮ ಶಿಕ್ಷಣ ದೊರೆಯುವಂತಾಗಬೇಕು ಎನ್ನುವ ಮನೋಭಾವವನ್ನು ಹೊಂದಿರುವುದು ಮುಖ್ಯ ಕಾರಣ. ಈ ರೀತಿಯ ಸಾಮಾಜಿಕ ಪ್ರಜ್ಞೆ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯದವರ ನಡುವೆ ಬೆಳೆದು ಬಂದಿರುವ ಕಾರಣ ಈ ವರ್ಗದ ಮಕ್ಕಳು ಇಂದು ವಿಶ್ವ ವಿದ್ಯಾನಿಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಕಾರಣವಾಗಿದೆ. ನನ್ನ ಉದಾಹರಣೆಯನ್ನು ತೆಗೆದು ಕೊಂಡು ಈ ಅಂಶವನ್ನು ಗಮನಿಸಬಹುದು. ನನ್ನ ತಂದೆ ರೈತನಾದರೂ ನನಗೆ ಸ್ನಾತಕೋತ್ತರ ಶಿಕ್ಷಣ ನೀಡುವವರೆಗೂ ಹಂಬಲಿಸಿದ್ದರು. ನಾನು ಆಕ್ಸ್‌ಫರ್ಡ್ ವಿಶ್ವ ವಿದ್ಯಾನಿಲಯದವರೆಗೂ ಸಾಗಲೂ ಪರೋಕ್ಷವಾಗಿ ಅವರು ಕಾರಣರಾಗುತ್ತಾರೆ. ನನ್ನ ಮಗಳಿಗೆ ನನ್ನ ಶೈಕ್ಷಣಿಕ ಸಾಧನೆ ಪ್ರೇರಣೆಯಾಗಿದೆ.ಆಕೆ ತನ್ನ ಪ್ರತಿಭೆಯಿಂದ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾಳೆ. ಈ ರೀತಿ ಮನೋಭಾವ ಒಬಿಸಿ, ಅಲ್ಪಸಂಖ್ಯಾತರ ನಡುವೆ ಮೂಡಿದ ಕಾರಣ ವಿಶ್ವ ವಿದ್ಯಾನಿಲಯದಲ್ಲಿ ಅವರ ಸಂಖ್ಯೆ ಹೆಚ್ಚಾಗಿದೆ.
.¸ವಾ.ಭಾ:- ಹೈದರಾಬಾದ್ ವಿಶ್ವ ವಿದ್ಯಾನಿಲಯದ ಸಂಶೋಧನೆ ನಡೆಸುತ್ತಿದ್ದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮ ಹತ್ಯೆ ಪ್ರಕರಣ ಬಗ್ಗೆ ನಿಮ್ಮ ಅಭಿಪ್ರಾಯವೇನು?.ಾರ್ಕೂರ್:-ನಾನು ಓರ್ವ ದಲಿತ ವಿದ್ಯಾರ್ಥಿಯಾಗಿ ಹಲವು ಬಗೆಯ ಸವಾಲುಗಳನ್ನು ಎದುರಿಸಿದ್ದೇನೆ. ಜೊತೆಗೆ ಅವೆಲ್ಲವನ್ನೂ ಮೀರಿ ಪ್ರಸಕ್ತ ಮಂಗಳೂರು ವಿಶ್ವ ವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥನಾಗಿ ಹಲವು ವಿದ್ಯಾರ್ಥಿಗಳು ಪಿಎಚ್‌ಡಿ ಮಾಡಲು ಮಾರ್ಗದರ್ಶನ ನೀಡಿದ್ದೇನೆ. ನಾನೊಬ್ಬ ಶಿಕ್ಷಕನಾಗಬೇಕೆಂಬ ಕನಸಿತ್ತು. ಅದನ್ನು ಸಾಧಿಸಿದ ತೃಪ್ತಿ ನನಗಿದೆ. ರೋಹಿತ್ ವೇಮುಲಾ ಪ್ರತಿಭಾವಂತ ಎನ್ನುವುದು ಆತ ಬರೆದ ಡೆತ್‌ನೋಟ್ ಹೇಳುತ್ತದೆ. ಆತ ಆತ್ಮಹತ್ಯೆಯ ದಾರಿ ಹಿಡಿದಿರುವುದು ನನ್ನಂತವರಿಗೆ ತುಂಬಾ ನೋವನ್ನುಂಟು ಮಾಡಿದೆ. ಆತ ಆತ್ಮಹತ್ಯೆಯನ್ನು ಅಸ್ತ್ರ ಮಾಡಿಕೊಳ್ಳಬಾರದಿತ್ತು. ಬದಲಾಗಿ ವಿಶ್ವ ವಿದ್ಯಾನಿಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ತನ್ನ ಅರ್ಹತೆಯಿಂದ ಆಗಿರುವುದು ದೊಡ್ಡ ಸಾಧನೆ, ಈ ದಾರಿಯಲ್ಲಿ ಯಾವ ಸಮಸ್ಯೆ ಬಂದರೂ ಅದನ್ನು ಎದುರಿಸಬೇಕಾಗಿತ್ತು. ಆಗ ಆತ ತನ್ನ ಸ್ನೇಹಿತರಿಗೆ, ತಂದೆ ತಾಯಿಯರಿಗೆ ಮಾದರಿಯಾಗುತ್ತಿದ್ದ. ಆತನ ತೀರ್ಮಾನದಿಂದಾಗಿ ಆತನ ಮೇಲೆ ನಿರೀಕ್ಷೆ ಇಟ್ಟಿದ್ದ ಎಲ್ಲರಿಗೂ ನಿರಾಶೆಯಾಗಿದೆ.
.¸ವಾ.ಭಾ:-ವಿಶ್ವ ವಿದ್ಯಾನಿಲಯದಲ್ಲಿ ರೋಹಿತ್ ವೇಮುಲಾ ಎದುರಿಸಿದ ಸಮಸ್ಯೆಗಳ ಹಿನ್ನೆಲೆಯಲ್ಲಿ ದಲಿತರ ಮೇಲೆ ವಿಶ್ವ ವಿದ್ಯಾನಿಲಯದ ಒಳಗೆ ಇರುವ ಪರಿಸ್ಥಿತಿಯ ಬಗ್ಗೆ ಏನು ಹೇಳುತ್ತೀರಿ?.ಾರ್ಕೂರ್:-ರೋಹಿತ್ ವೇಮುಲಾ ಆತ್ಮಹತ್ಯೆಗೆ ಕಾರಣವಾದ ವ್ಯವಸ್ಥೆಯ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕಾಗಿದೆ. ಆತನ ನಿಜವಾದ ಸಮಸ್ಯೆಯ ಬಗ್ಗೆ ಆತನೊಂದಿಗೆ ಚರ್ಚಿಸದೆ ಇರುವುದು ಒಂದು ಕಾರಣ. ಮನುಷ್ಯನಾದವನು ತಪ್ಪು ಮಾಡುವುದೇ ಇಲ್ಲ ಎನ್ನಲು ಸಾಧ್ಯವಿಲ್ಲ. ಆದರೆ ಆ ತಪ್ಪು ಏನು?. ಅದಕ್ಕೆ ಶಿಕ್ಷೆ ನೀಡುವುದು ಮಾತ್ರವೇ ಅಂತಿಮ ಅಸ್ತ್ರವೇ ಎನ್ನುವ ಬಗ್ಗೆ ವಿಶ್ವ ವಿದ್ಯಾನಿಲಯ ಯೋಚಿಸಲಿಲ್ಲವೇ ಎನ್ನುವ ಬಗ್ಗೆ ಅನುಮಾನ ಕಾಡುತ್ತದೆ. ವೇಮುಲಾ ಎದುರಿಸಿದಂತಹ ಸಮಸ್ಯೆ ದಲಿತ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಒಂದು ಉದಾಹರಣೆ ಮಾತ್ರ. ನಾನು ವಿದ್ಯಾರ್ಥಿಯಾಗಿದ್ದಾಗ ಅವಮಾನವನ್ನು ಎದುರಿಸಿದ್ದೇನೆ. ವೇಮುಲಾನ ಬಡತನದ ಸ್ಥಿತಿ, ಅಲ್ಲಿ ಆತನನ್ನು ಕಾಡುತ್ತಿದ್ದ ಏಕಾಂಗಿತನ, ಅದರಿಂದ ಆತ ಹೊರಬರಲು ಸಾಧ್ಯವಾಗದೆ ಇರುವ ಸ್ಥಿತಿ ಏನು ಎನ್ನುವುದು ನಮ್ಮೆಲ್ಲರನ್ನು ಕಾಡುವ ಪ್ರಶ್ನೆಯಾಗಿದೆ. ಸಮಸ್ಯೆಗಳಿಗೆ ಸ್ಪಂದಿಸುವ ಸ್ನೇಹಿತರ ಜೊತೆ ಆತ ಸಮಸ್ಯೆಗಳನ್ನು ಹಂಚಿಕೊಳ್ಳಬಹುದಿತ್ತು. ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಿವೆ. ಅಲ್ಲೂ ಚರ್ಚೆ ಮಾಡಬಹುದಿತ್ತು. ಆತನ ಸಮಸ್ಯೆಯನ್ನು ಯಾರಲ್ಲೂ ಚರ್ಚಿಸಿಕೊಳ್ಳಲಾಗದೆ ಆತ ಏಕೆ ಏಕಾಂಗಿಯಾದ ಎನ್ನುವುದು ನಮ್ಮನ್ನು ಕಾಡುತ್ತಿದೆ. ಆತನ ಮುಂದೆ ಸಾಕಷ್ಟು ದಾರಿಗಳಿತ್ತು. ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರಗಳಿಗೆ ಮುಕ್ತವಾಗಿ ಚರ್ಚಿಸುವ ಸಮಾಲೋಚನೆ ನಡೆಸುವ ಮಾರ್ಗಗಳನ್ನು ನಡೆಸಬಹುದಿತ್ತು. ವೈಯಕ್ತಿಕವಾಗಿ ಸಮಸ್ಯೆ ಪರಿಹಾರಕ್ಕೆ ಕೌನ್ಸೆಲಿಂಗ್ ಮೂಲಕ ಪರಿಹಾರ ಕಂಡುಕೊಳ್ಳಬಹುದಿತ್ತು.
ವಾ.ಭಾ:-ದೇಶದಲ್ಲಿ ಅಸಹಿಷ್ಣುತೆಯು ಇತ್ತೀಚಿನ ದಿನಗಳಲ್ಲಿ ಚರ್ಚೆಯ ವಿಷಯವಾಗಿದೆ. ದಲಿತರ ಬಗೆಗಿನ ಅಸಹನೆಯೂ ಇದರ ಮುಂದುವರಿದ ಭಾಗವಾಗಿದೆಯೇ?
ಉದಯ.ಬಾ:-ಅಸಹಿಷ್ಣುತೆ ಎನ್ನುವುದಕ್ಕಿಂತಲೂ ಅದನ್ನು ಅಸಹನೆ ಮತ್ಸರದ ಭಾವನೆ ಎನ್ನಬಹುದು. ಅನಾದಿಕಾಲದಿಂದಲೂ ಈ ರೀತಿಯ ಭಾವನೆ ಬೆಳೆದು ಬಂದಿದೆ. ಆರ್ಯರು ಭಾರತಕ್ಕೆ ಬಂದ ಆರಂಭದ ದಿನದಿಂದಲೇ ಈ ರೀತಿಯ ಮತ್ಸರ, ದ್ವೇಷದ ಭಾವನೆ ಬೆಳೆದು ಬಂದಿರುವುದಕ್ಕೆ ಉದಾಹರಣೆಗಳಿವೆ. ಆ ಕಾಲದಲ್ಲಿ ಆರ್ಯನ್ನರು ಸಿಂಧು ಪ್ರಾಂತ್ಯದ ಸಪ್ತ ಸಿಂಧುಗಳ (ಆರ್ಯರನ್ನು ಹೊರತಾದ ಜನರ) ವಿರುದ್ಧ ಹೂಡಿದ ಯುದ್ಧ ‘ದಶರಜ್ಞ ಯುದ್ಧ’ ಇದಕ್ಕೊಂದು ಉದಾಹರಣೆ. ವರ್ಣಾಶ್ರಮದ ವಿರುದ್ಧ ಬೌದ್ಧ, ಜೈನ ಧರ್ಮ ಈ ರೀತಿಯ ಅಸಹನೆಯ ಪರಿಣಾಮವಾಗಿ ಉಗಮವಾಗಿದೆ. ದಲಿತರ ಶೂದ್ರರ ಏಳಿಗೆಯನ್ನು ಸಹಿಸದ, ಸಂವಿಧಾನದತ್ತವಾದ ಸವಲತ್ತುಗಳನ್ನು ಬಳಸಿಕೊಳ್ಳುತ್ತಿರುವುದನ್ನು ಸಹಿಸದ ಒಂದು ವರ್ಗ ಈ ರೀತಿಯ ಅಸಹನೆಯನ್ನು ಬೆಳೆಸಿಕೊಂಡಿದೆ. ಇದು ವಿಶ್ವ ವಿದ್ಯಾನಿಲಯಗಳನ್ನು ವ್ಯಾಪಿಸಿಕೊಂಡಿದೆ. ಇದರಿಂದ ಕೆಲವು ಕಡೆಗಳಲ್ಲಿ ದಲಿತರು ನೋವನ್ನು ಅನುಭವಿಸಿದ ಘಟನೆಗಳು ನಡೆದಿದೆ. ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ಕಂಡು ಬರುತ್ತಿದ್ದ ಈ ವಾತಾವರಣ ನಿಧಾನವಾಗಿ ಬದಲಾಗುತ್ತಿದೆ. ಕಾರಣ ಪ್ರಸಕ್ತ ದಲಿತ ವರ್ಗದವರು ತಮ್ಮ ಪ್ರತಿಭೆಯಿಂದ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಾನ ಪಡೆದಿದ್ದಾರೆ. ಈ ರೀತಿಯ ಬದಲಾಗುತ್ತಿರುವ ವಾತಾವರಣ ದಲಿತರ ದೃಷ್ಟಿಯಿಂದ ಆಶಾದಾಯಕವಾಗಿದೆ.
ಅಸಹಿಷ್ಣುತೆ ಎನ್ನುವುದಕ್ಕಿಂತಲೂ ಅದನ್ನು ಅಸಹನೆ ಮತ್ಸರದ ಭಾವನೆ ಎನ್ನಬಹುದು. ಅನಾದಿಕಾಲದಿಂದಲೂ ಈ ರೀತಿಯ ಭಾವನೆ ಬೆಳೆದು ಬಂದಿದೆ. ಆರ್ಯರು ಭಾರತಕ್ಕೆ ಬಂದ ಆರಂಭದ ದಿನದಿಂದಲೇ ಈ ರೀತಿಯ ಮತ್ಸರ, ದ್ವೇಷದ ಭಾವನೆ ಬೆಳೆದು ಬಂದಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ.
ವೇಮುಲಾನ ಬಡತನದ ಸ್ಥಿತಿ, ಅಲ್ಲಿ ಆತನನ್ನು ಕಾಡುತ್ತಿದ್ದ ಏಕಾಂಗಿತನ, ಅದರಿಂದ ಆತ ಹೊರಬರಲು ಸಾಧ್ಯವಾಗದೆ ಇರುವ ಸ್ಥಿತಿ ಏನು ಎನ್ನುವುದು ನಮ್ಮೆಲ್ಲರನ್ನು ಕಾಡುವ ಪ್ರಶ್ನೆಯಾಗಿದೆ. ಸಮಸ್ಯೆಗಳಿಗೆ ಸ್ಪಂದಿಸುವ ಸ್ನೇಹಿತರ ಜೊತೆ ಆತ ಸಮಸ್ಯೆಗಳನ್ನು ಹಂಚಿಕೊಳ್ಳಬಹುದಿತ್ತು. ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಿವೆ. ಅಲ್ಲೂ ಚರ್ಚೆ ಮಾಡಬಹುದಿತ್ತು. ಆತನ ಸಮಸ್ಯೆಯನ್ನು ಯಾರಲ್ಲೂ ಚರ್ಚಿಸಿಕೊಳ್ಳಲಾಗದೆ ಆತ ಏಕೆ ಏಕಾಂಗಿಯಾದ ಎನ್ನುವುದು ನಮ್ಮನ್ನು ಕಾಡುತ್ತಿದೆ. ಆತನ ಮುಂದೆ ಸಾಕಷ್ಟು ದಾರಿಗಳಿತ್ತು. ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರಗಳಿಗೆ ಮುಕ್ತವಾಗಿ ಚರ್ಚಿಸುವ ಸಮಾಲೋಚನೆ ನಡೆಸುವ ಮಾರ್ಗಗಳನ್ನು ನಡೆಸಬಹುದಿತ್ತು. ವೈಯಕ್ತಿಕವಾಗಿ ಸಮಸ್ಯೆ ಪರಿಹಾರಕ್ಕೆ ಕೌನ್ಸೆಲಿಂಗ್ ಮೂಲಕ ಪರಿಹಾರ ಕಂಡುಕೊಳ್ಳಬಹುದಿತ್ತು.
ರೋಹಿತ್ ವೇಮುಲಾ ಪ್ರತಿಭಾವಂತ ಎನ್ನುವುದು ಆತ ಬರೆದ ಡೆತ್‌ನೋಟ್ ಹೇಳುತ್ತದೆ. ಆತ ಆತ್ಮಹತ್ಯೆಯ ದಾರಿ ಹಿಡಿದಿರುವುದು ನನ್ನಂತವರಿಗೆ ತುಂಬಾ ನೋವನ್ನುಂಟು ಮಾಡಿದೆ. ಆತ ಆತ್ಮಹತ್ಯೆಯನ್ನು ಅಸ್ತ್ರ ಮಾಡಿಕೊಳ್ಳಬಾರದಿತ್ತು. ಬದಲಾಗಿ ವಿಶ್ವ ವಿದ್ಯಾನಿಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ತನ್ನ ಅರ್ಹತೆಯಿಂದ ಆಗಿರುವುದು ದೊಡ್ಡ ಸಾಧನೆ, ಈ ದಾರಿಯಲ್ಲಿ ಯಾವ ಸಮಸ್ಯೆ ಬಂದರೂ ಅದನ್ನು ಎದುರಿಸಬೇಕಾಗಿತ್ತು. ಆಗ ಆತ ತನ್ನ ಸ್ನೇಹಿತರಿಗೆ, ತಂದೆ ತಾಯಿಯರಿಗೆ ಮಾದರಿಯಾಗುತ್ತಿದ್ದ. ಆತನ ತೀರ್ಮಾನದಿಂದಾಗಿ ಆತನ ಮೇಲೆ ನಿರೀಕ್ಷೆ ಇಟ್ಟಿದ್ದ ಎಲ್ಲರಿಗೂ ನಿರಾಶೆಯಾಗಿದೆ.







