ನೇತಾಜಿ ಬೋಸ್ ಕುರಿತಾದ ಗೌಪ್ಯ ಕಡತ ಬಿಡುಗಡೆ

ಹೊಸದಿಲ್ಲಿ, ಜ.23: ನೇತಾಜಿ ಸುಭಾಶ್ಚಂದ್ರ ಬೋಸರ 119ನೆ ಜಯಂತಿಯ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ, ಇದುವರೆಗೆ ವರ್ಗೀಕರಿಸಲಾಗಿದ್ದ ನೇತಾಜಿಗೆ ಸಂಬಂಧಿಸಿದ 100 ಕಡತಗಳನ್ನು ಸಾರ್ವಜನಿಕ ವೀಕ್ಷಣೆಗಾಗಿ ಬಿಡುಗಡೆಗೊಳಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬೋಸರ ಕುಟುಂಬಿಕರೊಂದಿಗೆ ನಡೆಸಿದ್ದ ಸಭೆಯೊಂದರಲ್ಲಿ, ಸ್ವಾತಂತ್ರ ಸೇನಾನಿಗೆ ಸಂಬಂಧಿಸಿದ ಕಡತಗಳನ್ನು ಸರಕಾರ ಅವರ್ಗೀಕರಿಸಲಿದೆಯೆಂದು ಪ್ರಧಾನಿ ಮೋದಿ ಘೋಷಿಸಿದ್ದರು. 70 ವರ್ಷಗಳ ಹಿಂದೆ ಬೋಸರು ಕಣ್ಮರೆಯಾಗಿರುವುದು ಇಂದಿಗೂ ನಿಗೂಢವಾಗಿದೆ.
ದಿಲ್ಲಿಯಲ್ಲಿರುವ ಭಾರತದ ರಾಷ್ಟ್ರೀಯ ಪತ್ರಾಗಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೋಸರ ಕುಟುಂಬದ 12 ಮಂದಿ ಸದಸ್ಯರು ಉಪಸ್ಥಿತರಿದ್ದರು. ಅಲ್ಲಿ ಮೋದಿ, ಕಡತಗಳ ಡಿಜಿಟಲ್ ಪ್ರತಿಗಳನ್ನು ಬಿಡುಗಡೆಗೊಳಿಸಿದರೆಂದು ಇಂದು ಮುಂಜಾನೆ ಪ್ರಧಾನಿ ಕಚೇರಿ ಟ್ವೀಟಿಸಿದೆ.
ನೇತಾಜಿ, 1945ರ ಆ.18ರಂದು ತೈಪೆಯಲ್ಲಿ ನಡೆದಿದ್ದ ವಿಮಾನ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದರೆಂದು ಎರಡು ವಿಚಾರಣಾ ಆಯೋಗಗಳು ತೀರ್ಮಾನಕ್ಕೆ ಬಂದಿದ್ದವು. ಮೂರನೆ ಆಯೋಗ ಹಾಗೂ ಅವರ ಕೆಲವು ಬಂಧುಗಳು ಸೇರಿದಂತೆ ಹಲವರು ಇದಕ್ಕೆ ಸವಾಲು ಹಾಕಿದ್ದರು.
ತಾನು ವಿಮಾನಾಪಘಾತದ ಕತೆಯನ್ನು ನಂಬುವುದಿಲ್ಲ. ತಮಗೆ ಇಂದು ಎಲ್ಲ ಉತ್ತರಗಳು ದೊರೆಯದಿರಬಹುದು. ಆದರೆ, ಕೆಲವು ಸೂಚನೆಗಳು ಲಭಿಸಬಹುದೆಂಬ ಆಶಾವಾದ ತನಗಿದೆಯೆಂದು ನೇತಾಜಿಯವರ ಮರಿಮಗ ಚಂದ್ರಬೋಸ್ ಇಂದು ಮುಂಜಾನೆ ಎನ್‌ಡಿಟಿವಿಗೆ ತಿಳಿಸಿದ್ದಾರೆ.
ನೇತಾಜಿಯವರ ಕಣ್ಮರೆಯ ಕುರಿತು ಪ್ರಚಲಿತದಲ್ಲಿರುವ ಎರಡು ಸಿದ್ಧಾಂತಗಳಿವೆ. ಅವರು ಭಾರತದ ಸ್ವಾತಂತ್ರ ಹೋರಾಟವನ್ನು ಮುಂದುವರಿಸಲು ಸೋವಿಯತ್ ಒಕ್ಕೂಟಕ್ಕೆ ಪಲಾಯನ ಮಾಡಿದ್ದರು. ಆದರೆ ಅವರು ಕೊಲ್ಲಲ್ಪಟ್ಟರು ಎಂಬುದೊಂದು ನೇತಾಜಿ ಗುಮ್ನಾಮಿ ಬಾಬಾ ಹೆಸರಿನ ಸನ್ಯಾಸಿಯಂತೆ ಭಾರತಕ್ಕೆ ಮರಳಿದ್ದರು ಹಾಗೂ 1985ರ ವರೆಗೆ ಉತ್ತರಪ್ರದೇಶದ ಫೈಝಾಬಾದ್‌ನಲ್ಲಿ ಜೀವಿಸಿದ್ದರು ಎಂಬುದು ಇನ್ನೊಂದು.
ಅವರು ಸನ್ಯಾಸಿಯಾಗಿ ಬದುಕಿದ್ದರೆಂಬುದು ‘ಸಂಪೂರ್ಣ ಅಸಂಬದ್ಧ’ ಎಂದು ತಳ್ಳಿ ಹಾಕಿರುವ ನೇತಾಜಿಯವರ ಜರ್ಮನಿ ನಿವಾಸಿ ಪುತ್ರಿ ಅನಿತಾ ಬೋಸ್ ಫಫ್, ತನ್ನ ತಂದೆ ವಿಮಾನಾಪಘಾತದಲ್ಲಿ ಮಡಿದರೆಂಬುದು ತನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದಿದ್ದಾರೆ. ಅವರು ಇಂದಿನ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ.
ಭಾರತದ ರಾಷ್ಟ್ರೀಯ ಪತ್ರಾಗಾರವು ಪ್ರತಿ ತಿಂಗಳು ನೇತಾಜಿಯವರ 25 ಅವರ್ಗೀಕೃತ ಕಡತಗಳ ಡಿಜಿಟಲ್ ಪ್ರತಿಗಳನ್ನು ಸಾರ್ವಜನಿಕಗೊಳಿಸಲು ನಿರ್ಧರಿಸಿದೆ. ಮೊದಲ 33 ಕಡತಗಳನ್ನು ಪ್ರಧಾನಿ ಕಚೇರಿಯು ಅವರ್ಗೀಕರಿಸಿ, ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಷ್ಟ್ರೀಯ ಪತ್ರಾಗಾರಕ್ಕೆ ಹಸ್ತಾಂತರಿಸಿತ್ತು.







