ಸಮುದ್ರದಲ್ಲಿ ದರೋಡೆಕೋರರ ಹಾವಳಿ: ಸೂಕ್ತ ಕ್ರಮಕ್ಕೆ ಮೀನುಗಾರರ ಆಗ್ರಹ
ಉಡುಪಿ, ಜ.23: ಹೊರರಾಜ್ಯಗಳ ದರೋಡೆಕೋರರಿಂದ ನಲುಗಿಹೋಗಿರುವ ಮಲ್ಪೆ ಆಳ ಸಮುದ್ರ ಮೀನುಗಾರಿಕೆ ನಿರತ ಮೀನುಗಾರರು ಜೀವಭಯದಿಂದ ಕಳೆದ ನಾಲ್ಕೈದು ದಿನಗಳಿಂದ ಮೀನುಗಾರಿಕೆಗೆ ತೆರಳದೆ ಬೋಟ್‌ಗಳನ್ನು ಮಲ್ಪೆ ಬಂದರಿನಲ್ಲೇ ಲಂಗಾರು ಹಾಕಿರುವ ಘಟನೆ ನಡೆದಿದೆ.
ಸುಮಾರು 3 ತಿಂಗಳುಗಳಿಂದ ಮಹಾರಾಷ್ಟ್ರದ ಮಾಲ್ವಾನ್ ಬಂದರಿನಿಂದ ಸುಮಾರು 15.50ಯಿಂದ 16.25 ಡಿಗ್ರಿವರೆಗೆ ದರೋಡೆಕೋರರು ಮಲ್ಪೆ ಮೀನುಗಾರರ ಬೋಟನ್ನು ಹಿಡಿದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ ಬೋಟನ್ನು ಜಖಂಗೊಳಿಸಿ ಬೋಟ್‌ನಲ್ಲಿದ್ದ ಎಲ್ಲ ಸೊತ್ತುಗಳನ್ನು ದೋಚುತ್ತಿದ್ದಾರೆ ಎಂದು ಮಲ್ಪೆ ಡೀಪ್ ಸೀ ಬೋಟ್ ತಾಂಡೇಲರ ಸಂಘದ ಅಧ್ಯಕ್ಷ ರವಿ ಸುವರ್ಣ ದೂರಿದ್ದಾರೆ.
ಸುಮಾರು 16.25ಡಿಗ್ರಿಯಿಂದ 18 ಡಿಗ್ರಿಯವರೆಗೆ ಪರ್ಸಿನ್ ಮತ್ತು ಇತರ ಬೋಟ್‌ನವರು ಮಾರಕಾಯುಧ ಗಳನ್ನು ಹಿಡಿದು ಬೆನ್ನಟಿಕೊಂಡು ಬರುತ್ತಾರೆ. ಮಹಾರಾಷ್ಟ್ರದ ಕರಾವಳಿ ಪಡೆಯವರು ಎಂದು ಸುಳ್ಳು ಹೇಳಿ ಬೋಟಿನ ದಾಖ ಲಾತಿಗಳನ್ನು ತೋರಿ ಸಿದರೂ ಹಣ ಮತ್ತು ಮೀನುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇದರಿಂದ ನಮಗೆ ಹೊರರಾಜ್ಯ ಗಳಲ್ಲಿ ಮೀನುಗಾರಿಕೆ ನಡೆಸಲು ಕಷ್ಟವಾಗುತ್ತಿದ್ದು, ಬೋಟು ಹಾಗೂ ಜೀವದ ರಕ್ಷಣೆಗಾಗಿ ಮೀನುಗಾರಿಕೆಗೆ ತೆರಳದೆ ಮಲ್ಪೆ ಬಂದರಿನಲ್ಲಿ ಬಂದು ಲಂಗಾರು ಹಾಕಿದ್ದೇವೆ. ಇದಕ್ಕೆ ಸರಕಾರ ಕೂಡಲೇ ಸ್ಪಂದಿಸಬೇಕಾಗಿದೆ ಅವರು ಒತ್ತಾಯಿಸಿದ್ದಾರೆ.





