ವಿಂಡೀಸ್‌ನ ಚಂದ್ರಪಾಲ್ ವಿದಾಯ
ಹೊಸದಿಲ್ಲಿ, ಜ.23: ವೆಸ್ಟ್‌ಇಂಡೀಸ್‌ನ ಬ್ಯಾಟ್ಸ್‌ಮನ್ ಶಿವನಾರಾಯಣ ಚಂದ್ರಪಾಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಂದು ಅಧಿಕೃತವಾಗಿ ವಿದಾಯ ಘೋಷಿಸಿದ್ದಾರೆ.
41ರ ಹರೆಯದ ಚಂದ್ರಪಾಲ್ ಕಳೆದ ವರ್ಷ ಮೇಯಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದರು. ಆನಂತರ ಅವರು ತಂಡದಿಂದ ಹೊರಗುಳಿದಿದ್ದರು. ಆಸ್ಟ್ರೇಲಿಯ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ.
ಕಳೆದ ಎರಡು ದಶಕಗಳ ಕಾಲ ವೆಸ್ಟ್‌ಇಂಡೀಸ್ ಕ್ರಿಕೆಟ್‌ಗೆ ದೊಡ್ಡ ಕೊಡುಗೆ ನೀಡಿರುವ ಚಂದ್ರಪಾಲ್ 164 ಟೆಸ್ಟ್‌ಗಳನ್ನು ಆಡಿದ್ದಾರೆ. 51.37 ರನ್ ಸರಾಸರಿಯಂತೆ 11,867 ರನ್ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ 30 ಶತಕ ಮತ್ತು 66 ಅರ್ಧಶತಕ ದಾಖಲಿಸಿರುವ ಚಂದ್ರಪಾಲ್ 9 ವಿಕೆಟ್ ಗಳಿಸಿದ್ದಾರೆ.
ವಿಂಡೀಸ್ ಪರ ಗರಿಷ್ಠ ರನ್ ದಾಖಲಿಸಿರುವ ಬ್ಯಾಟ್ಸ್‌ಮನ್‌ಗಳ ಪೈಕಿ ಚಂದ್ರಪಾಲ್ ಎರಡನೆ ಸ್ಥಾನದಲ್ಲಿದ್ದಾರೆ. ಬ್ರಯಾನ್ ಲಾರ್ 11,953 ರನ್ ದಾಖಲಿಸಿ ವಿಂಡೀಸ್ ಪರ ಗರಿಷ್ಠ ರನ್ ದಾಖಲಿಸಿರುವ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರ ಬಳಿಕದ ಸ್ಥಾನದಲ್ಲಿ ಚಂದ್ರಪಾಲ್ ಇದ್ಧಾರೆ. ಚಂದ್ರಪಾಲ್ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಔಟಾಗದೆ 203 ರನ್. ಲಾರಾ ದಾಖಲೆಯನ್ನು ಮೀರಿಸುವ ಕನಸು ಕಂಡಿದ್ದ ಚಂದ್ರಪಾಲ್‌ಗೆ ಇದಕ್ಕಾಗಿ ಅವಕಾಶ ಒಲಿಯಲಿಲ್ಲ. 86 ರನ್ ಗಳಿಸಿದ್ದರೆ ಚಂದ್ರಪಾಲ್ ಅವರು ಲಾರಾ ದಾಖಲೆಯನ್ನು ಸರಿಗಟ್ಟುತ್ತಿದ್ದರು.
268 ಏಕದಿನ ಪಂದ್ಯಗಳನ್ನು ಆಡಿರುವ ಚಂದ್ರಪಾಲ್ 251 ಇನಿಂಗ್ಸ್‌ಗಳಲ್ಲಿ 41.60 ಸರಾಸರಿಯಂತೆ 8,778 ರನ್ ಗಳಿಸಿದ್ದಾರೆ. 11 ಶತಕ ಮತ್ತು 59 ಅರ್ಧಶತಕ ದಾಖಲಿಸಿರುವ ಚಂದ್ರಪಾಲ್ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ 150. ವಿಕೆಟ್ 14.
22 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 343 ರನ್ ಗಳಿಸಿದ್ದಾರೆ.
ಕಡೆಗಣಿಸಿದ ಆಯ್ಕೆ ಮಂಡಳಿ: ಕಳೆದ ಎಂಟು ತಿಂಗಳಿನಿಂದ ಚಂದ್ರಪಾಲ್ ತಂಡಕ್ಕೆ ವಾಪಸಾಗುವ ನಿರೀಕ್ಷೆಯಲ್ಲಿದ್ದರು. ಆದರೆ ಪ್ರತಿಯೊಂದು ಸರಣಿಗೂ ಈ ಹಿರಿಯ ಆಗಾರನನ್ನು ಕಡೆಗಣಿಸಲಾಯಿತು. ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ ಕಳಪೆ ಪ್ರದರ್ಶನದ ಕಾರಣಕ್ಕಾಗಿ ಚಂದ್ರಪಾಲ್‌ಗೆ ಅವಕಾಶ ನಿರಾಕರಿಸಲಾಗಿತ್ತು.
ಕಳೆದ ಡಿಸೆಂಬರ್‌ನಲ್ಲಿ ವಾರ್ಷಿಕ 15 ಆಟಗಾರರ ಒಪ್ಪಂದದ ಪಟ್ಟಿಯಲ್ಲೂ ಚಂದ್ರಪಾಲ್‌ಗೆ ಅವಕಾಶ ಸಿಗಲಿಲ್ಲ. ಕಳೆದ ಜೂನ್‌ನಲ್ಲೇ ಚಂದ್ರಪಾಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗುವ ಚಿಂತನೆ ನಡೆಸಿದ್ದರು. ಆದರೆ ಈ ವಿಚಾರವನ್ನು ಅಧಿಕೃತವಾಗಿ ಪ್ರಕಟಿಸದೆ ಅವಕಾಶಕ್ಕಾಗಿ ಕಾಯುತ್ತಿದ್ದರು.
ಸಚಿನ್ ಬಳಿಕ ಎರಡನೆ ಬ್ಯಾಟ್ಸ್‌ಮನ್: ಮಾಸ್ಟರ್ ಬ್ಲಾಸ್ಟರ್ ಸಚಿನ್ ತಂಡುಲ್ಕರ್ ಬಳಿಕ ಸುದೀರ್ಘ ಕ್ರಿಕೆಟ್ ಆಡಿದ ಎರಡನೆ ಆಟಗಾರ ಚಂದ್ರಪಾಲ್. ಚಂದ್ರಪಾಲ್ ಒಂದೊಮ್ಮೆ ವಿಂಡೀಸ್ ಕ್ರಿಕೆಟ್‌ನ ಬೆನ್ನಲುಬು ಆಗಿದ್ದರು. ಆದರೆ ಅವರು ಫಾರ್ಮ್ ಕಳೆದುಕೊಂಡು ಅವಕಾಶ ದೊರೆಯದೆ ಕ್ರಿಕೆಟ್ ವೃತ್ತಿ ಬದುಕನ್ನು ಕೊನೆಗೊಳಿಸಿದ್ದಾರೆ.





