ಸುಲ್ತಾನ್ ಬತ್ತೇರಿಯಲ್ಲಿ 5 ಕೋಟಿ ವೆಚ್ಚದಲ್ಲಿ ಮೀನುಗಾರಿಕಾ ಜೆಟ್ಟಿಗೆ ಶಿಲಾನ್ಯಾಸ

ಮಂಗಳೂರು,ಜ.24: ಕರಾವಳಿ ಜಿಲ್ಲೆಯುದ್ದಕ್ಕೂ ಜೆಟ್ಟಿ ನಿರ್ಮಾಣಗೊಂಡರೆ ಜಿಲ್ಲೆಯ ಮೀನುಗಾರರಿಗೆ ಅನುಕೂಲವಾಗಲಿದ್ದು ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದು ಮಾಜಿ ಕೇಂದ್ರ ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್ ಹೇಳಿದರು. ನಗರದ ಬೋಳೂರುನ ಸುಲ್ತಾನ್‌ಬತ್ತೇರಿಯಲ್ಲಿ ಮೀನುಗಾರಿಕಾ ಇಲಾಖೆಯ ನಬಾರ್ಡ್ ಯೋಜನೆಯಡಿ 5 ಕೋಟಿ ವೆಚ್ಚದಲ್ಲಿ 100 ಮೀಟರ್ ಉದ್ದದಲ್ಲಿ ನಿರ್ಮಾಣಗೊಳ್ಳಲಿರುವ ಮೀನುಗಾರಿಕಾ ಬರ್ತಿಂಗ್ ಜೆಟ್ಟಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಕರಾವಳಿ ಜಿಲ್ಲೆಯುದ್ದಕ್ಕೂ ಜೆಟ್ಟಿಗಳ ನಿರ್ಮಾಣದ ಜೊತೆ ಜೆಟ್ಟಿಗೆ ಸಂಪರ್ಕ ಕಲ್ಪಿಸಲು ರಸ್ತೆಗಳನ್ನು ನಿರ್ಮಿಸಿದರೆ ಮೀನುಗಾರರು ಮೀನುಗಾರಿಕೆ ನಡೆಸಿದ ನಂತರ ತಮಗೆ ಅನುಕೂಲವಾದ ರೀತಿಯಲ್ಲಿ ಬೋಟ್‌ಗಳನ್ನು ನಿಲ್ಲಿಸಬಹುದು. ಇದರಿಂದ ಮೀನುಗಾರರು ಪಡುವ ಸಂಕಷ್ಟಕ್ಕೆ ಮುಕ್ತಿ ಸಿಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಸುಲ್ತಾನ್‌ಬತ್ತೇರಿಯಲ್ಲಿ ನಿರ್ಮಾಣಗೊಳ್ಳುತಿರುವ ಜೆಟ್ಟಿಗೆ 5 ಕೊಟಿ ಮಂಜೂರಾಗಿದ್ದು ಅಗತ್ಯ ಬಿದ್ದರೆ 5 ಕೋಟಿ ಹೆಚ್ಚುವರಿ ಹಣವನ್ನು ಮಂಜೂರು ಮಾಡಲಾಗುವುದು. ಇಲ್ಲಿ ಡ್ರಜ್ಜಿಂಗ್ ಮಾಡಲು ಬೇಕಾದ ಹಣದ ವ್ಯವಸ್ಥೆಯನ್ನು ನೀಡಲಾಗುವುದು ಮತ್ತು ಈ ಪ್ರದೇಶದಲ್ಲಿ ಐಸ್‌ಪ್ಲಾಂಟ್, ಡಿಸೇಲ್ ಬಂಕ್ ನಿರ್ಮಾಣಕ್ಕೂ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಜೆ.ಆರ್.ಲೋಬೋ ಸುಲ್ತಾನ್ ಬತ್ತೇರಿ ಕಡಲಕಿನಾರೆಗೆ ನಿರ್ಮಿಸಲು ಉದ್ದೇಶಿಸಿರುವ ತೂಗುಸೇತುವೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ 14 ಕೊಟಿ ಮಂಜೂರು ಮಾಡಿದ್ದು 7 ಕೋಟಿ ಹಣವನ್ನು ಪಿಡಬ್ಲುಡಿ ಇಲಾಖೆಗೆ ನೀಡಿದೆ. ತಾಂತ್ರಿ ಕಾರಣದಿಂದ ತೂಗುಸೇತುವೆ ಕಾಮಗಾರಿ ವಿಳಂಬವಾಗಿದ್ದು ಈ ಬಗ್ಗೆ ಜ.27 ರಂದು ಬೆಂಗಳೂರಿನಲ್ಲಿ ರಾಜ್ಯ ಪ್ರ.ಕಾರ್ಯದರ್ಶಿಗಳ ಕಚೇರಿಯಲ್ಲಿ ಸಭೆ ನಿಗದಿ ಮಾಡಲಾಗಿದ್ದು ಸಬೆಯಲ್ಲಿ ತೂಗುಸೇತುವೆ ನಿರ್ಮಾಣಕ್ಕೆ ಸಂಬಂಧಪಟ್ಟ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮನಪಾ ಮೇಯರ್ ಜೆಸಿಂತಾ ವಿಜಯ್ ಆಲ್ಪ್ರೆಡ್, ಮನಪಾ ಸಚೇತಕ ಶಶಿಧರ್ ಹೆಗ್ಡೆ, ಮನಪಾ ಸದಸ್ಯ ಲತಾ ಕಮಲಾಕ್ಷ ಸಾಲಿಯಾನ್, ಕಾಂಗ್ರೆಸ್ ಮುಖಂಡೆ ಸರಳಾ ಕಾಂಚನ್, ಮೊಗವೀರ ಮುಖಂಡ ರಾಜಶೇಖರ್ ಕರ್ಕೇರಾ ಉಪಸ್ಥಿತರಿದ್ದರು.







