ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಸಂಪುಟದ ಶಿಫಾರಸು

ಹೊಸದಿಲ್ಲಿ,ಜ.24: ರವಿವಾರ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ರಾಜಕೀಯ ಪ್ರಕ್ಷುಬ್ಧತೆಯನ್ನು ಎದುರಿಸುತ್ತಿರುವ ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲು ಶಿಫಾರಸು ಮಾಡಿದೆ.
ಕಳೆದ ವರ್ಷದ ಡಿ.16ರಂದು ಸ್ಥಳೀಯಾಡಳಿತವು ರಾಜ್ಯ ವಿಧಾನಸಭಾ ಸಂಕೀರ್ಣಕ್ಕೆ ಬೀಗಮುದ್ರೆ ಹಾಕಿದ್ದರಿಂದ 21 ಬಂಡಾಯ ಕಾಂಗ್ರೆಸ್ ಶಾಸಕರು 11 ಬಿಜೆಪಿ ಮತ್ತು ಇಬ್ಬರು ಪಕ್ಷೇತರ ಶಾಸಕರೊಂದಿಗೆ ಸೇರಿಕೊಂಡು ಸಮುದಾಯ ಭವನವೊಂದರಲ್ಲಿ ಬೈಠಕ್ ಸೇರಿ ವಿಧಾನಸಭಾ ಸ್ಪೀಕರ್ ನಬಮ್ ರೆಬಿಯಾ ಅವರ ವಿರುದ್ಧ ಮಹಾಭಿಯೋಗ ಕ್ರಮವನ್ನು ಜರುಗಿಸಿದ್ದರು. ಉಪ ಸ್ಪೀಕರ್ ಟಿ.ನೊರ್ಬು ಥೊಂಗ್ಡೊಕ್ ಅಧ್ಯಕ್ಷತೆಯಲ್ಲಿ ಕಲಾಪವು ನಡೆದಿದ್ದು,ಇದನ್ನು ‘ಅಕ್ರಮ ಮತ್ತು ಸಂವಿಧಾನ ವಿರೋಧಿ’ ಎಂದು ಸ್ಪೀಕರ್ ಬಣ್ಣಿಸಿದ್ದರು. ಮುಖ್ಯಮಂತ್ರಿ ನಬಮ್ ಟುಕಿ ಅವರ ವಿರುದ್ಧ ಬಂಡೆದ್ದಿರುವ 21 ಕಾಂಗ್ರೆಸ್ ಶಾಸಕರಲ್ಲಿ ಒಂದು ದಿನ ಮೊದಲು ಅನರ್ಹಗೊಳಿಸಲಾಗಿದ್ದ 14 ಶಾಸಕರೂ ಸೇರಿದ್ದರು.
60 ಸದಸ್ಯಬಲದ ವಿಧಾನಸಭೆಯಲ್ಲಿ ಟುಕಿ ಮತ್ತು ಅವರ ಸಂಪುಟದ ಸಚಿವರು ಸೇರಿದಂತೆ ಸುಮಾರು 27 ಶಾಸಕರು ಕಲಾಪವನ್ನು ಬಹಿಷ್ಕರಿಸಿದ್ದರು.
ಡಿ.17ರಂದು ಟುಕಿ ಅವರನ್ನು ಪದಚ್ಯುತಗೊಳಿಸಿ ಅವರ ಸ್ಥಾನದಲ್ಲಿ ಬಂಡಾಯ ಕಾಂಗ್ರೆಸ್ ಶಾಸಕರೋರ್ವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲು ಪ್ರತಿಪಕ್ಷ ಬಿಜೆಪಿ ಮತ್ತು ಬಂಡಾಯ ಕಾಂಗ್ರೆಸ್ ಶಾಸಕರು ಸ್ಥಳೀಯ ಹೋಟೆಲ್ಲೊಂದರಲ್ಲಿ ಸಮಾವೇಶಗೊಂಡಿದ್ದರು. ಆದರೆ ಮಧ್ಯಪ್ರವೇಶಿಸಿದ ಗುವಾಹಟಿ ಉಚ್ಚ ನ್ಯಾಯಾಲಯವು ಬಂಡಾಯ ‘ಅಧಿವೇಶನ’ದಲ್ಲಿ ಕೈಗೊಂಡ ನಿರ್ಣಯಗಳನ್ನು ತಡೆಹಿಡಿದಿತ್ತು.
ಸಭೆಯಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ ಬಳಿಕ ಬಂಡುಕೋರ ಕಾಂಗ್ರೆಸ್ ಶಾಸಕ ಕಾಲಿಖೊ ಪುಲ್ ಅವರನ್ನು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ‘ಆಯ್ಕೆ’ಮಾಡಲಾಗಿತ್ತು.
ಪ್ರಜಾಪ್ರಭುತ್ವದ ‘ಕಗ್ಗೊಲೆ’ಯಾಗಿದೆ ಮತ್ತು ರಾಜ್ಯಪಾಲ ಜ್ಯೋತಿಪ್ರಸಾದ ರಾಜಖೋವಾ ಅವರು ಬಂಡಾಯ ಶಾಸಕರನ್ನು ಬೆಂಬಲಿಸುವ ಮೂಲಕ ಚುನಾಯಿತ ಸರಕಾರವನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿಗಳು ಸಂವಿಧಾನವನ್ನು ಎತ್ತಿ ಹಿಡಿಯಲು ಮಧ್ಯ ಪ್ರವೇಶಿಸುವಂತೆ ಕೋರಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರಗಳನ್ನು ಬರೆದಿದ್ದರು.
ಸರಕಾರವನ್ನು ಉಪೇಕ್ಷಿಸಿ ವಿಧಾನಸಭೆಯ ಅಧಿವೇಶನವನ್ನು ಕರೆದಿದ್ದ ರಾಜ್ಯಪಾಲರ ಕ್ರಮದಿಂದ ಕುಪಿತ ಕಾಂಗ್ರೆಸ್ ರಾಜ್ಯಸಭೆಯ ಚಳಿಗಾಲದ ಅಧಿವೇಶನದ ಕಲಾಪಗಳಿಗೆ ಎರಡು ದಿನಗಳ ಕಾಲ ವ್ಯತ್ಯಯವನ್ನೊಡ್ಡಿತ್ತು.





