ಐಸಿಸಿ ರ್ಯಾಂಕಿಂಗ್: ರೋಹಿತ್ ಶರ್ಮ ಜೀವನ ಶ್ರೇಷ್ಠ ಸಾಧನೆ

ದುಬೈ, ಜ.24: ಆಸ್ಟ್ರೇಲಿಯದ ವಿರುದ್ಧ ಶನಿವಾರ ಕೊನೆಗೊಂಡ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಭಾರತದ ಅಗ್ರ ಕ್ರಮಾಂಕದ ದಾಂಡಿಗ ರೋಹಿತ್ ಶರ್ಮ ರವಿವಾರ ಬಿಡುಗಡೆಯಾಗಿರುವ ಐಸಿಸಿ ಏಕದಿನ ದಾಂಡಿಗರ ರ್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.
ಐದು ಪಂದ್ಯಗಳಲ್ಲಿ 2 ಶತಕಗಳ ಸಹಿತ ಒಟ್ಟು 441 ರನ್ ಗಳಿಸಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದ ರೋಹಿತ್ ಐಸಿಸಿ ರ್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ ಐದನೆ ಸ್ಥಾನಕ್ಕೆ ತಲುಪಿದ್ದಾರೆ.
ರೋಹಿತ್ ಐಸಿಸಿ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿರುವ ಭಾರತದ ಎರಡನೆ ದಾಂಡಿಗನಾಗಿದ್ದಾರೆ. ವಿರಾಟ್ ಕೊಹ್ಲಿ ಎರಡನೆ ಸ್ಥಾನದಲ್ಲಿದ್ದಾರೆ. ನಾಯಕ ಎಂಎಸ್ ಧೋನಿ ಏಳು ಸ್ಥಾನ ಕೆಳ ಜಾರಿ 13ನೆ ಸ್ಥಾನದಲ್ಲಿದ್ದಾರೆ.
ಮುಂಬೈ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ಆಸ್ಟ್ರೇಲಿಯದಲ್ಲಿ ನೀಡಿರುವ ಶ್ರೇಷ್ಠ ಪ್ರದರ್ಶನದ ಹಿನ್ನೆಲೆಯಲ್ಲಿ 59 ಅಂಕವನ್ನು ಗಳಿಸಿದ್ದಾರೆ. ಎರಡನೆ ರ್ಯಾಂಕಿನಲ್ಲಿರುವ ಕೊಹ್ಲಿಗಿಂತ 64 ಅಂಕ ಹಾಗೂ ನಂ.1 ದಾಂಡಿಗ ದಕ್ಷಿಣ ಆಫ್ರಿಕದ ಎಬಿ ಡಿವಿಲಿಯರ್ಸ್‌ಗಿಂತ 75 ಅಂಕ ಹಿಂದಿದ್ದಾರೆ.
ಆಸ್ಟ್ರೇಲಿಯದ ವಿರುದ್ಧ ಸಿಡ್ನಿಯಲ್ಲಿ ನಡೆದಿದ್ದ ಐದನೆ ಏಕದಿನ ಪಂದ್ಯವನ್ನು ಜಯಿಸಿರುವ ಭಾರತ ಐಸಿಸಿ ತಂಡಗಳ ರ್ಯಾಂಕಿಂಗ್‌ನಲ್ಲಿ ಎರಡನೆ ಸ್ಥಾನವನ್ನು ಉಳಿಸಿಕೊಂಡಿದೆ. ಸರಣಿಯಲ್ಲಿ ಪ್ರಾಬಲ್ಯ ಮೆರೆದಿರುವ ಆಸ್ಟ್ರೇಲಿಯ ತಂಡದ ದಾಂಡಿಗರಾದ ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವನ್ ಸ್ಮಿತ್ ರ್ಯಾಂಕಿಂಗ್‌ನಲ್ಲಿ ಭಡ್ತಿ ಪಡೆದಿದ್ದಾರೆ. ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್ ಹಾಗೂ ಜಾನ್ ಹೇಸ್ಟಿಂಗ್ಸ್ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.
ಸರಣಿಯಲ್ಲಿ ಒಟ್ಟು 169 ರನ್‌ಗಳನ್ನು ಗಳಿಸಿದ್ದ ಮ್ಯಾಕ್ಸ್‌ವೆಲ್ 2 ಸ್ಥಾನ ಮೇಲಕ್ಕೇರಿ 8ನೆ ಸ್ಥಾನದಲ್ಲೂ, 315 ರನ್ ಗಳಿಸಿದ್ದ ಸ್ಮಿತ್ ಐದು ಸ್ಥಾನ ಭಡ್ತಿ ಪಡೆದು 15ನೆ ಸ್ಥಾನಕ್ಕೇರಿದ್ದಾರೆ. ಒಟ್ಟು 220 ರನ್ ಗಳಿಸಿರುವ ವಾರ್ನರ್ ಐದು ಸ್ಥಾನ ಭಡ್ತಿ ಪಡೆದು 18ನೆ ಸ್ಥಾನಕ್ಕೇರಿದ್ದಾರೆ.







