ಬೋಳಿಯಾರಿನಲ್ಲಿ ವಿವಾಹಿತ ಮಹಿಳೆ ಆತ್ಮಹತ್ಯೆ - ಪತಿಯ ಕಿರುಕುಳ ಆರೋಪ
ಕೊಣಾಜೆ: ಮುಡಿಪು ಸಮೀಪದ ಬೋಳಿಯಾರು ಗ್ರಾಮದ ರಂತಡ್ಕದಲ್ಲಿ ವಿವಾಹಿತ ಮಹಿಳೆಯೊಬ್ಬರು ನೇಣುಬಿಗಿದು ಆತ್ಮಹತ್ಯೆಗೈದಿರುವ ಘಟನೆ ನಡೆದಿದ್ದು, ಆತ್ಮಹತ್ಯೆಗೆ ಪತಿಯ ಮಾನಸಿಕ ಕಿರುಕುಳ ಕಾರಣ ಎಂಬ ಆರೋಪ ಆಕೆಯ ಪೋಷಕರಿಂದ ವ್ಯಕ್ತವಾಗಿದೆ. ಆತ್ಮಹತ್ಯೆಗೈದ ಮಹಿಳೆಯನ್ನು ಬೋಳಿಯಾರು ರಂತಡ್ಕದ ಇಕ್ಬಾಲ್ ಅವರ ಪತ್ನಿ ಸಫಿಯಾ(26)ಎಂದು ಗುರುತಿಸಲಾಗಿದೆ. ಸೆಫಿಯಾ ಮುನ್ನೂರು ಗ್ರಾಮದ ಸುಭಾಷ್ ನಗರದ ನಿವಾಸಿಯಾಗಿದ್ದು ಕಳೆದ ಮೂರು ವರ್ಷಗಳ ಹಿಂದೆ ಬೋಳಿಯಾರು ಗ್ರಾಮದ ರಂತಡ್ಕ ನಿವಾಸಿ, ಮುಡಿಪಿನಲ್ಲಿ ಹೋಟೆಲ್ ನಡೆಸುತ್ತಿರುವ ಇಕ್ಬಾಲ್ (30)ಗೆ ವಿವಾಹ ಮಾಡಿಕೊಡಲಾಗಿತ್ತು. ಸೆಫಿಯಾ ಸಾವಿಗೆ ಆಕೆಯ ಪತಿ ಮನೆಯಲ್ಲಿ ಮಾನಸಿಕ ಕಿರುಕುಳ ಕಾರಣ ಎಂದು ಸೆಫಿಯಾ ಪೋಷಕರು ಆರೋಪಿಸಿದ್ದಾರೆ. ಸೆಫಿಯಾ ಒಂದು ಪುಟ್ಟ ಮಗುವಿನ ತಾಯಿಯಾಗಿದ್ದು ದಂಪತಿ ಅನ್ಯೋನ್ಯವಾಗಿದ್ದರು ಎಂದು ಕೆಲವರು ತಿಳಿಸಿದ್ದು ಸತ್ಯ ತನಿಖೆಯ ಬಳಿಕವಷ್ಟೆ ಹೊರಬೀಳಲಿದೆ. ಸೆಫಿಯಾಳ ಮೃತ ಶರೀರವನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮಹಜರಿಗೆ ಇಡಲಾಗಿದೆ. ಸೋಮವಾರ ತಹಶೀಲ್ದಾರ್ ಭೇಟಿ ಕೊಡಲಿದ್ದಾರೆ. ಈ ಬಗ್ಗೆ ಕೊಣಾಜೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





