ಭಾರತದಿಂದ ದ.ಏಷ್ಯಾ ರಾಷ್ಟ್ರಗಳಿಗೆ ಎಲ್ ನಿನೊ ಮುನ್ನೆಚ್ಚರಿಕೆ
ಹೊಸದಿಲ್ಲಿ,ಜ.24: ದಕ್ಷಿಣ ಏಷ್ಯಾದ ರಾಷ್ಟ್ರಗಳಿಗೆ ತಾಪಮಾನ ಮತ್ತು ಮಳೆ ಕುರಿತು ಮಾಹಿತಿಗಳನ್ನು ಒದಗಿಸುತ್ತಿರುವ ಭಾರತವು ಈಗ ಅವುಗಳಿಗೆ ಎಲ್ ನಿನೊ ಮುನ್ನೆಚ್ಚರಿಕೆಗಳನ್ನು ನೀಡುವುದನ್ನು ಆರಂಭಿಸಿದೆ.
ಶ್ರೀಲಂಕಾ,ಮಾಲ್ದೀವ್ಸ್,ಪಾಕಿಸ್ತಾನ,ಅಫ್ಘಾನಿಸ್ತಾನ,ಬಾಂಗ್ಲಾದೇಶ,ಭೂತಾನ ಮತ್ತು ನೇಪಾಳ ಸೇರಿದಂತೆ ಎಲ್ಲ ದ.ಏಷ್ಯಾ ರಾಷ್ಟ್ರಗಳಿಗಾಗಿ ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯು ಎಲ್ ನಿನೊ ಮಾಹಿತಿಗಳನ್ನು ಪ್ರತಿ ತಿಂಗಳೂ ಪರಿಷ್ಕರಿಸುತ್ತಿದೆ.
ವಿಶ್ವ ಹವಾಮಾನ ಸಂಘಟನೆಯು ಪ್ರಾದೇಶಿಕ ಹವಾಮಾನ ಕೇಂದ್ರವಾಗಿ ಭಾರತವನ್ನು ನಿಯೋಜಿಸಿದೆ ಮತ್ತು ನಾವು ಇತರ ದ.ಏಷ್ಯಾ ರಾಷ್ಟ್ರಗಳಿಗೆ ತಾಪಮಾನ ಮತ್ತು ಮಳೆ ಕುರಿತು ಮಾಹಿತಿಗಳನ್ನು ನೀಡುತ್ತಿದ್ದೇವೆ. ಈಗ ಎಲ್ ನಿನೊ ಕುರಿತೂ ಮಾಹಿತಿಗಳನ್ನು ನೀಡಲು ಆರಂಭಿಸಿದ್ದೇವೆ ಎಂದು ಭೂ ವಿಜ್ಞಾನಗಳ ಸಚಿವಾಲಯದ ಕಾರ್ಯದರ್ಶಿ ರಾಜೀವನ್ ಅವರು ತಿಳಿಸಿದರು. ಭಾರತವು ಪಾಕಿಸ್ತಾನ,ಓಮನ್,ಮಾಲ್ದೀವ್ಸ್,ಥೈಲಂಡ್,ಮ್ಯಾನ್ಮಾರ್,ಬಾಂಗ್ಲಾದೇಶ ಮತ್ತು ಶ್ರೀಲಂಕಾ ಸೇರಿದಂತೆ ಏಳು ರಾಷ್ಟ್ರಗಳಿಗೆ ಉತ್ತರ ಹಿಂದು ಮಹಾಸಾಗರದಲ್ಲಿ ರೂಪುಗೊಳ್ಳುವ ಚಂಡಮಾರುತಗಳ ಬಗ್ಗೆಯೂ ಮಾಹಿತಿಗಳನ್ನು ಒದಗಿಸುತ್ತಿದೆ.





