ಭಾರತದಲ್ಲಿ ಶೇ.80ಕ್ಕೂ ಅಧಿಕ ಇಂಜಿನಿಯರಿಂಗ್ ಪದವೀಧರರು ನೇಮಕಾತಿಗೆ ಅನರ್ಹರು: ಅಧ್ಯಯನ
ಹೊಸದಿಲ್ಲಿ, ಜ.24: ದೇಶದಲ್ಲಿ ಶೇ.80ಕ್ಕೂ ಅಧಿಕ ಇಂಜಿನಿಯರಿಂಗ್ ಪದವೀಧರರು ನೌಕರಿ ಮಾಡಲು ಅನರ್ಹರಾಗಿದ್ದಾರೆ ಎಂದು ಹೇಳಿರುವ ಅಧ್ಯಯನ ವರದಿಯೊಂದು, ಶಿಕ್ಷಣ ಮಟ್ಟವನ್ನು ಮೇಲ್ದರ್ಜೆಗೇರಿಸುವ ಮತ್ತು ತರಬೇತಿ ವ್ಯವಸ್ಥೆಯ ಅಗತ್ಯವನ್ನು ಪ್ರಮುಖವಾಗಿ ಬಿಂಬಿಸಿದೆ.
ಶಿಕ್ಷಣ ಸಂಸ್ಥೆಗಳು ಲಕ್ಷಾಂತರ ಸಂಖ್ಯೆಯಲ್ಲಿ ಇಂಜಿನಿಯರ್‌ಗಳನ್ನು ಸಿದ್ಧಗೊಳಿಸುತ್ತವೆ, ಆದರೆ ಅವರು ಉದ್ಯೋಗಕ್ಕೆ ಅಗತ್ಯವಾದ ಕೌಶಲವನ್ನಾಗಲೀ ಪ್ರತಿಭೆಯನ್ನಾಗಲೀ ಹೊಂದಿರುವುದಿಲ್ಲ ಎಂದು ಕಾರ್ಪೊರೇಟ್ ಕಂಪೆನಿಗಳು ದೂರುವುದು ಸಾಮಾನ್ಯವಾಗಿ ಬಿಟ್ಟಿದೆ.
2015ರಲ್ಲಿ 650ಕ್ಕೂ ಅಧಿಕ ಇಂಜಿನಿಯರಿಂಗ್ ಕಾಲೇಜುಗಳಿಂದ ಪದವಿಯೊಂದಿಗೆ ಹೊರಬಿದ್ದಿರುವ 1.50 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಅಧ್ಯಯನಕ್ಕೊಳಪಡಿಸಿ ಆಸ್ಪೈರಿಂಗ್ ಮೈಂಡ್ಸ್ ನ್ಯಾಷನಲ್ ಎಂಪ್ಲಾಯೇಬಿಲಿಟಿ ಸಿದ್ಧಗೊಳಿಸಿರುವ ವರದಿಯಂತೆ ಈ ಪೈಕಿ ಶೇ.80ಕ್ಕೂ ಅಧಿಕ ಪದವೀಧರರು ನೇಮಕಾತಿಗೆ ಅನರ್ಹರಾಗಿದ್ದಾರೆ.
ವಾಸ್ತವದಲ್ಲಿ ಹೆಚ್ಚಿನ ವಿದ್ಯಾರ್ಥಿಗಳ ಪಾಲಿಗಿಂದು ಇಂಜಿನಿಯರಿಂಗ್ ಎಂದರೆ ಕೇವಲ ಒಂದು ಪದವಿಯಾಗಿದೆ. ನಮ್ಮ ಶಿಕ್ಷಣದ ಗುಣಮಟ್ಟವನ್ನು ಮೇಲ್ದರ್ಜೆಗೇರಿಸುವ ಜೊತೆಗೆ ಅವರನ್ನು ಹೆಚ್ಚು ಉದ್ಯೋಗ ಕೇಂದ್ರಿತರನ್ನಾಗಿಸಲು ಪದವಿ ಶಿಕ್ಷಣ ಹಂತದಲ್ಲಿಯೇ ಸೂಕ್ತ ಕಾರ್ಯಕ್ರಮವನ್ನು ರೂಪಿಸುವುದು ಹೆಚ್ಚು ಅಗತ್ಯವಾಗಿದೆ ಎಂದು ಆಸ್ಪೈರಿಂಗ್ ಮೈಂಡ್ಸ್‌ನ ಸಿಟಿಒ ವರುಣ ಅಗರವಾಲ್ ಹೇಳಿದ್ದಾರೆ.
ರಾಜ್ಯವಾರು ಉದ್ಯೋಗಾರ್ಹ ಇಂಜಿನಿಯರ್‌ಗಳನ್ನು ಉತ್ಪಾದಿಸುವಲ್ಲಿ ದಿಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದರೆ,ಬೆಂಗಳೂರು ಮತ್ತು ದೇಶದ ಪಶ್ಚಿಮದ ರಾಜ್ಯಗಳು ನಂತರದ ಸ್ಥಾನಗಳಲ್ಲಿವೆ ಎಂದು ವರದಿಯು ತಿಳಿಸಿದೆ.





