ಮಂಗಳೂರು : ಸಂಘಪರಿವಾರ ಕಾರ್ಯಕರ್ತರಿಂದ ಹಲ್ಲೆ: ಓರ್ವನಿಗೆ ಗಾಯ
ಮಂಗಳೂರು, ಜ. 25: ವಿದೇಶಕ್ಕೆ ತೆರಳಬೇಕಾಗಿದ್ದ ಸ್ನೇಹಿತರೊಬ್ಬರನ್ನು ಬಿಡಲೆಂದು ಮಡಿಕೇರಿಯಿಂದ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದ ಕಡೆಗೆ ಪ್ರಯಾಣಿಸುತ್ತಿದ್ದ ನಾಲ್ವರ ಮೇಲೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಇಂದು ರಾತ್ರಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಲ್ಲೆಯಿಂದ ಓರ್ವನಿಗೆ ಗಾಯವಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಮಡಿಕೇರಿ ನಾಪೋಕ್ಲು ನಿವಾಸಿ ಮೊಯ್ದು ಎಂಬವರ ಪುತ್ರ ಝಕರಿಯ್ಯಿ (23) ಎಂದು ಗುರುತಿಸಲಾಗಿದೆ. ಅವರೊಂದಿಗಿದ್ದ ಸಿರಾಜ್ ಹಾಗೂ ಜಮಾಲ್ ಎಂಬವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.
ಮಡಿಕೇರಿಯ ನಾಪೋಕ್ಲು ನಿವಾಸಿ ಅಬ್ದುರ್ರಹ್ಮಾನ್ ಎಂಬವರ ಪುತ್ರ ಸುಹೇಲ್ ಎಂಬವರು ಇಂದು ದುಬೈಗೆ ತೆರಳಬೇಕಾಗಿತ್ತು. ಸುಹೇಲ್‌ರನ್ನು ಬಜ್ಪೆ ವಿಮಾನ ನಿಲ್ದಾಣಕ್ಕೆ ಬಿಡಲೆಂದು ಇತರ ಮೂವರು ಸ್ವಿಫ್ಟ್ ಕಾರಿನಲ್ಲಿ ಇಂದು ಮಧ್ಯಾಹ್ನ ಮಡಿಕೇರಿಯಿಂದ ಮಂಗಳೂರಿಗೆ ತೆರಳಿದ್ದರು. ಸುಮಾರು ಸಂಜೆ 7 ಗಂಟೆ ಹೊತ್ತಿಗೆ ಈ ನಾಲ್ವರು ಮಂಗಳೂರು ತಲುಪಿದ್ದರು. ದುಬೈಗೆ ಪ್ರಯಾಣಿಸಬೇಕಾಗಿದ್ದ ವಿಮಾನವು ಕೊಂಚ ವಿಳಂಬವಾಗಿದ್ದು, ರಾತ್ರಿ 11 ಗಂಟೆಗೆ ವಿಮಾನ ಹೊರಡುವುದಾಗಿ ಸಮಯ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಇನ್ನೂ ಸಮಯ ಇರುವುದರಿಂದ ಈ ನಾಲ್ವರು ಮಂಗಳೂರು ಕಡೆಗೆ ಬಂದು ಲಾಲ್‌ಬಾಗ್‌ನ ಸೈಬೀನ್ ಕಾಂಪ್ಲೆಕ್ಸ್‌ನಲ್ಲಿ ಹೊಸ ಮೊಬೈಲ್‌ವೊಂದನ್ನು ಖರೀದಿಸಿ ಬಜ್ಪೆ ಕಡೆಗೆ ಹಿಂದಿರುಗಿದರೆನ್ನಲಾಗಿದೆ. ಈ ಸಂದರ್ಭದಲ್ಲಿ ಮಾರ್ಗಮಧ್ಯೆ ಬೊಂದೇಲ್ ಚರ್ಚ್ ಬಳಿ ಕುಡಿದು ತೂರಾಡುತ್ತಿದ್ದ ವ್ಯಕ್ತಿಯೋರ್ವನಿಗೆ ಇವರ ಸ್ವಿಫ್ಟ್ ಕಾರು ಢಿಕ್ಕಿ ಹೊಡೆದಿದೆ. ಈ ನಾಲ್ವರು ಕಾರಿನಿಂದಿಳಿದು ಅದೇ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಾಗ ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಬಿಳಿ ಬಣ್ಣದ ಝೆನ್ (ಕೆ.ಎ. 19 ಝೆಡ್ 2284) ಕಾರೊಂದು ಇವರ ಸಮೀಪ ನಿಂತಿದ್ದು, ಅದರಲ್ಲಿದ್ದ ಐದು ಮಂದಿ ಕಾರಿನಿಂದ ಇಳಿದವರೇ ಈ ನಾಲ್ವರೊಂದಿಗೆ ವಾಗ್ವಾದಕ್ಕಿಳಿದು ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಯಿಂದ ಗಾಯಗೊಂಡ ಝಕರಿಯ್ಯ ಅವರನ್ನು ಸಿರಾಜ್ ಮತ್ತು ಜಮಾಲ್ ಅವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಸುಹೇಲ್‌ರನ್ನು ಬಜ್ಪೆ ವಿಮಾನ ನಿಲ್ದಾಣಕ್ಕೆ ಬಿಟ್ಟು ಬಂದಿದ್ದಾರೆನ್ನಲಾಗಿದೆ.





