ಭಾರತ-ಬಹರೈನ್ ನಡುವೆ ಕೈದಿಗಳ ಹಸ್ತಾಂತರ
ಮನಾಮ, ಜ. 24: ವ್ಯಾಪಾರ ಮತ್ತು ಭಯೋತ್ಪಾದನೆ ನಿಗ್ರಹ ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಹೊಂದಿರುವ ಬಾಂಧವ್ಯವನ್ನು ಗಟ್ಟಿಗೊಳಿಸಲು ಭಾರತ ಮತ್ತು ಬಹರೈನ್ ನಿರ್ಧರಿಸಿವೆ.ಶನಿವಾರ ವಿದೇಶ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಬಹರೈನ್‌ನ ವಿದೇಶ ವ್ಯವಹಾರಗಳ ಸಚಿವ ಖಾಲಿದ್ ಬಿನ್ ಅಹ್ಮದ್ ಅಲ್ ಖಲೀಫ ವಿವಿಧ ವಿಷಯಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಭಾರತ-ಅರಬ್ ಲೀಗ್ ಸಹಕಾರ ವೇದಿಕೆಯ ಮೊದಲ ಸಚಿವ ಮಟ್ಟದ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕಾಗಿ ಸುಷ್ಮಾ ಬಹ್ರೇನ್ ರಾಜಧಾನಿ ಮನಾಮಕ್ಕೆ ಎರಡು ದಿನಗಳ ಭೇಟಿ ನೀಡಿದ್ದಾರೆ.
ಮಾತುಕತೆಯ ಬಳಿಕ ಉಭಯ ನಾಯಕರು, ಶಿಕ್ಷೆಗೊಳಗಾದ ಕೈದಿಗಳನ್ನು ಹಸ್ತಾಂತರಿಸುವ ಒಪ್ಪಂದವೊಂದಕ್ಕೆ ಸಹಿ ಹಾಕಿದರು. ಈ ಒಪ್ಪಂದದ ಪ್ರಕಾರ, ವಲಸಿಗರು ತಾವು ನೆಲೆಸಿರುವ ದೇಶದಲ್ಲಿ ಶಿಕ್ಷೆಗೊಳಗಾದರೆ, ಅವರು ಶಿಕ್ಷೆಯನ್ನು ತಮ್ಮ ಸ್ವದೇಶದಲ್ಲಿ ಅನುಭವಿಸಬಹುದಾಗಿದೆ.
ಫ್ರಾನ್ಸ್‌ನಿಂದ 114 ಏರ್‌ಬಸ್ ಖರೀದಿಸಲಿರುವ ಇರಾನ್
ಟೆಹರಾನ್, ಜ. 24: ಈ ವಾರ ಇರಾನ್ ಅಧ್ಯಕ್ಷ ಹಸನ್ ರೂಹಾನಿ ಫ್ರಾನ್ಸ್‌ಗೆ ಭೇಟಿ ನೀಡಿದಾಗ, ಆ ದೇಶದಿಂದ 114 ಏರ್‌ಬಸ್ ವಿಮಾನಗಳನ್ನು ಖರೀದಿಸುವ ಗುತ್ತಿಗೆಗೆ ಇರಾನ್ ಸಹಿ ಹಾಕಲಿದೆ ಎಂದು ಇರಾನ್‌ನ ಸಾರಿಗೆ ಸಚಿವ ಅಬ್ಬಾಸ್ ಅಖೌಂಡಿ ಇಂದು ಹೇಳಿದ್ದಾರೆ.
ಇರಾನ್ ಅಧ್ಯಕ್ಷರ ಮೊದಲ ಅಧಿಕೃತ ಯುರೋಪ್ ಪ್ರವಾಸದ ಕೊನೆಯ ದಿನವಾದ ಬುಧವಾರ ಅವರು ಪ್ಯಾರಿಸ್‌ನಲ್ಲಿರುವಾಗ, ಇರಾನ್ ಏರ್ ಮತ್ತು ಏರ್‌ಬಸ್ ಗುತ್ತಿಗೆಗೆ ಸಹಿ ಹಾಕಲಿವೆ ಎಂದು ಅಬ್ಬಾಸ್‌ರನ್ನು ಉಲ್ಲೇಖಿಸಿ ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ವಿಶ್ವದ ಶಕ್ತ ರಾಷ್ಟ್ರಗಳೊಡನೆ ಇರಾನ್ ಸಹಿ ಹಾಕಿರುವ ಪರಮಾಣು ಒಪ್ಪಂದ ಜಾರಿಗೆ ಬಂದ ಬಳಿಕ ಇರಾನ್ ಅಧ್ಯಕ್ಷರು ಯುರೋಪ್ ಪ್ರವಾಸವನ್ನು ಕೈಗೊಂಡಿದ್ದಾರೆ.





