ನೇಪಾಳ ಸಂವಿಧಾನಕ್ಕೆ ತಿದ್ದುಪಡಿ: ಮಧೇಶಿ ಸಮುದಾಯದ ಆಕ್ರೋಶ ತಣಿಸುವ ಯತ್ನ
ಕಠ್ಮಂಡು, ಜ. 24: ನೇಪಾಳದ ಸಂಸತ್ತು ಶನಿವಾರ ದೇಶದ ಸಂವಿಧಾನಕ್ಕೆ ಮಾಡಲಾದ ತಿದ್ದುಪಡಿಯನ್ನು ಮೂರನೆ ಎರಡು ಬಹುಮತದಿಂದ ಅಂಗೀಕರಿಸಿದೆ. ಸಂವಿಧಾನದ ಬಗ್ಗೆ ಅಲ್ಪಸಂಖ್ಯಾತ ಮಧೇಶಿ ಸಮುದಾಯ ಹೊಂದಿರುವ ಅತೃಪ್ತಿಯ ಹಿನ್ನೆಲೆಯಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟನ್ನು ಪರಿಹರಿಸುವುದಕ್ಕಾಗಿ ನೂತನ ಸಂವಿಧಾನ ಜಾರಿಗೆ ಬಂದ ನಾಲ್ಕು ತಿಂಗಳ ಬಳಿಕ ತಿದ್ದುಪಡಿ ಮಾಡಲಾಗಿದೆ.
ಆದಾಗ್ಯೂ, ಚಳವಳಿ ನಿರತ ಮಧೇಶಿ ಪಕ್ಷಗಳ ಸಂಸದರು ಮತದಾನವನ್ನು ಬಹಿಷ್ಕರಿಸಿದರು. ಪ್ರಸ್ತಾಪಿತ ತಿದ್ದುಪಡಿ ಅಪೂರ್ಣವಾಗಿದೆ ಹಾಗೂ ತಮ್ಮ ಬೇಡಿಕೆಗಳು ಈಡೇರಿಲ್ಲ ಎಂದು ಅವರು ಹೇಳಿದ್ದಾರೆ.
‘‘ನೇಪಾಳ ಸಂವಿಧಾನದ ಮೊದಲ ತಿದ್ದುಪಡಿ ಮೂರನೆ ಎರಡು ಬಹುಮತದಿಂದ ಅಂಗೀಕಾರಗೊಂಡಿದೆ ಎಂದು ನಾನು ಘೋಷಿಸುತ್ತೇನೆ’’ ಎಂದು ಸ್ಪೀಕರ್ ಒನ್ಸಾರಿ ಘರ್ತಿ ಮಗರ್ ಪ್ರಕಟಿಸಿದರು. ಅದನ್ನು ಸಂಸದರು ಮೇಜು ಕುಟ್ಟಿ ಸ್ವಾಗತಿಸಿದರು.
ಮಧೇಶಿ ಸಮು ದಾಯದ ಎರಡು ಪ್ರಮುಖ ಬೇಡಿಕೆಗಳನ್ನು ತಿದ್ದುಪಡಿ ಒಳಗೊಂಡಿದೆ. ಅವುಗಳೆಂದರೆ- ಮಧೇಶಿಗಳ ಸಂಖ್ಯಾನುಪಾತಕ್ಕೆ ಅನುಗುಣವಾಗಿ ಪ್ರಾತಿನಿಧ್ಯ ನೀಡುವುದು ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಸಂಸತ್ತಿನಲ್ಲಿ ಸ್ಥಾನ ನೀಡುವುದು.
ನಿರ್ಣಯವನ್ನು ಮತಕ್ಕೆ ಹಾಕಿದಾಗ, 461 ಮತಗಳು ನಿರ್ಣಯದ ಪರವಾಗಿ ಬಿದ್ದರೆ, ಏಳು ಮತಗಳು ವಿರುದ್ಧವಾಗಿ ಚಲಾವಣೆಗೊಂಡವು.
ಉಪ ಪ್ರಧಾನಿ ಚಿತ್ರ ಬಹಾದುರ್ ಕೆ.ಸಿ. ನಿರ್ಣಯದ ವಿರುದ್ಧವಾಗಿ ಮತ ಹಾಕಿದರು.
ಇದರೊಂದಿಗೆ, ದಕ್ಷಿಣದ ಬಯಲುಪ್ರದೇಶದ 20 ಜಿಲ್ಲೆಗಳಲ್ಲಿನ ಸಂಸದೀಯ ಸ್ಥಾನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.
ಭಾರತೀಯ ಮೂಲದ ಮಧೇಶಿಗಳು ಭಾರತದೊಂದಿಗೆ ಹೆಚ್ಚಿನ ಸಾಂಸ್ಕೃತಿಕ ಮತ್ತು ಕೌಟುಂಬಿಕ ಬಾಂಧವ್ಯಗಳನ್ನು ಹೊಂದಿದ್ದಾರೆ. ಕಳೆದ ವರ್ಷದಿಂದ ಮಧೇಶಿಗಳು ನಡೆಸುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ 55 ಮಂದಿ ಮೃತಪಟ್ಟಿದ್ದಾರೆ.
ತಿದ್ದುಪಡಿಗೆ ಮಧೇಶಿಗಳ ತಿರಸ್ಕಾರ
ದಕ್ಷಿಣ ನೇಪಾಳದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳನ್ನು ಕೊನೆಗೊಳಿಸುವ ಉದ್ದೇಶದಿಂದ ನೇಪಾಳ ಸಂವಿಧಾನಕ್ಕೆ ತರಲಾದ ತಿದ್ದುಪಡಿಯನ್ನು ಮಧೇಶಿ ಸಮುದಾಯ ತಿರಸ್ಕರಿಸಿದೆ.
ತಿದ್ದುಪಡಿ ಅಪೂರ್ಣವಾಗಿದೆ ಹಾಗೂ ತಮ್ಮ ಆತಂಕವನ್ನು ಪರಿಹರಿಸುವುದಿಲ್ಲ ಎಂದು ಯುನೈಟೆಡ್ ಡೆಮಾಕ್ರಟಿಕ್ ಮಾದೇಶಿ ಫ್ರಂಟ್‌ನ ಲಕ್ಷ್ಮಣ್ ಲಾಲ್ ಕರ್ಣ ರವಿವಾರ ಹೇಳಿದ್ದಾರೆ.
ನೂತನ ಸಂವಿಧಾನವು ದೇಶದಲ್ಲಿ ಏಳು ರಾಜ್ಯಗಳನ್ನು ಸೃಷ್ಟಿಸಿದ್ದು, ಈ ರಾಜ್ಯಗಳ ಗಡಿಗಳು ತಮ್ಮ ಪೂರ್ವಜರ ಭೂಮಿಯನ್ನು ವಿಭಜಿಸುತ್ತವೆ ಎಂಬ ದೂರನ್ನು ಮಧೇಶಿಗಳು ಹೊಂದಿದ್ದಾರೆ.







