350 ಕೋಟಿ ಹಿಂದಿನ ವಜ್ರಗಳ ಮೂಲಕ ಪ್ರಾಚೀನ ಭೂಮಿಯ ಶೋಧ

ಜೊಹಾನ್ಸ್‌ಬರ್ಗ್, ಜ. 24: 1890 ಮತ್ತು 1930ರ ನಡುವಿನ ಅವಧಿಯಲ್ಲಿ ದಕ್ಷಿಣ ಆಫ್ರಿಕದ ಪುರಾತನ ಬಂಡೆ ಸಮೂಹಗಳಿಂದ ಅಗೆಯಲಾದ ವಜ್ರಗಳು, 350 ಕೋಟಿ ವರ್ಷಗಳಿಗೂ ಹಿಂದೆ ಭೂಮಿ ಯಾವ ರೀತಿಯಲ್ಲಿ ರೂಪುಗೊಂಡಿತು ಎಂಬ ರಹಸ್ಯಗಳನ್ನು ತಮ್ಮ ಒಡಲೊಳಗೆ ಇಟ್ಟುಕೊಂಡಿವೆ ಎಂದು ನೂತನ ಅಧ್ಯಯನವೊಂದು ಹೇಳಿದೆ.
ಪ್ರಸಿದ್ಧ ಜೊಹಾನ್ಸ್‌ಬರ್ಗ್ ಚಿನ್ನದ ಗಣಿಗೆ ಸೇರಿದ ಬಂಡೆ ಸಮೂಹ ವಿಟ್‌ವಾಟರ್‌ಸ್ಯಾಂಡ್ ಸೂಪರ್ ಗ್ರೂಪ್‌ನಿಂದ ಪಡೆಯಲಾದ ಮೂರು ವಜ್ರಗಳ ಬಗ್ಗೆ ಜೊಹಾನ್ಸ್‌ಬರ್ಗ್ ವಿಶ್ವವಿದ್ಯಾನಿಲಯ, ದಕ್ಷಿಣ ಆಫ್ರಿಕ ವಿಟ್ಸ್ ವಿಶ್ವವಿದ್ಯಾನಿಲಯ ಮತ್ತು ಕೆನಡದ ಆಲ್ಬರ್ಟ ವಿಶ್ವವಿದ್ಯಾನಿಲಯದ ಸಂಶೋಧಕರು ಸಂಶೋಧನೆ ಮಾಡುತ್ತಿದ್ದಾರೆ. ಭೂ ಗ್ರಹದಲ್ಲಿ ಆಧುನಿಕ ಶೈಲಿಯ ಪ್ಲೇಟ್ ಟೆಕ್ಟಾನಿಕ್‌ಗಳು ಯಾವಾಗ ಅಸ್ತಿತ್ವಕ್ಕೆ ಬಂತು ಎಂಬುದನ್ನು ಪತ್ತೆಹಚ್ಚುವ ಉದ್ದೇಶವನ್ನು ಅವರ ಸಂಶೋಧನೆ ಹೊಂದಿದೆ.
ಭೂಮಿಯ ಪ್ರಾಯ ಸುಮಾರು 450 ಕೋಟಿ ವರ್ಷ. ಸುಮಾರು 400 ಕೋಟಿ ವರ್ಷಗಳ ಹಿಂದಿನಿಂದ ಬಂಡೆಗಳ ದಾಖಲೆ ಲಭ್ಯವಿದೆ.
ಈ ಸಂಶೋಧನೆಯಲ್ಲಿ ಬಳಸಿಕೊಳ್ಳಲಾಗಿರುವ ವಜ್ರಗಳು 300 ಕೋಟಿ ವರ್ಷಗಳ ಹಿಂದಿನ ಬಂಡೆಗಳಲ್ಲಿ ಪತ್ತೆಯಾಗಿವೆ. ಆದರೆ, ಬಂಡೆಗಳಿಗಿಂತಲೂ ತುಂಬಾ ಆಳದಲ್ಲಿ ಅವುಗಳು ರೂಪುಗೊಂಡಿದ್ದವು. ಜ್ವಾಲಾಮುಖಿಯೊಂದಿಗೆ ಆ ವಜ್ರಗಳು ಭೂಮಿಯ ಮೇಲ್ಪದರಕ್ಕೆ ಬಂದದ್ದು, ಬಳಿಕ ಪ್ರಾಚೀನ ಭೂಮಿಯ ಮೇಲ್ಪದರದಾದ್ಯಂತ ಅವುಗಳ ಪ್ರಯಾಣ ಹಾಗೂ ಅಂತಿಮವಾಗಿ ವಿಟ್‌ವಾಟರ್‌ಸ್ಯಾಂಡ್ ಜಲಾನಯನ ಪ್ರದೇಶದಲ್ಲಿ ನೆಲೆಯೂರಿದ್ದು- ಇವೆಲ್ಲ ಸಂಭವಿಸಿದ್ದು 350ರಿಂದ 300 ಕೋಟಿ ವರ್ಷಗಳ ಹಿಂದೆ.
ವಿಟ್‌ವಾಟರ್‌ಸ್ಯಾಂಡ್ ವಜ್ರಗಳ ಇಂಗಾಲ ಮತ್ತು ಸಾರಜನಕ ಐಸೋಟೋಪ್‌ಗಳ ಪ್ರಮಾಣವನ್ನು ತಿಳಿಯಲು ಸಂಶೋಧಕರು ಇಯಾನ್ ಪ್ರೋಬ್ ಬಳಸಿದರು.





