20 ರೂ.ಗೆ 20 ಲೀಟರ್ ಶುದ್ಧ ಕುಡಿಯುವ ನೀರು: ಕಾಸರಗೋಡು ನಗರಸಭೆಯ ಯೋಜನೆ

ಕಾಸರಗೋಡು, ಜ.24: ಇಪ್ಪತ್ತು ರೂ.ಗೆ 20 ಲೀಟರ್ ಶುದ್ಧ ಕುಡಿಯುವ ನೀರು ಯೋಜನೆ ಜಾರಿಗೆ ಕಾಸರಗೋಡು ನಗರಸಭೆ ಮುಂದಾಗಿದೆ. ತೀವ್ರ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ನಗರಸಭೆ ‘ಪ್ಯೂರ್ ವಾಟರ್’ ಎಂಬ ಯೋಜನೆಗೆ ಚಾಲನೆ ನೀಡಿದ್ದು, ಕುಟುಂಬಶ್ರೀ ಉಸ್ತುವಾರಿ ವಹಿಸಿಕೊಂಡಿದೆ.
ನೋಡಲ್ ಏಜೆನ್ಸಿಯಾಗಿರುವ ಮಹಿಳಾ ಅಭಿವೃದ್ಧಿ ನಿಗಮದ ಸಹಯೋಗ ದೊಂದಿಗೆ ರಾಜ್ಯ ಸರಕಾರದ ನಿರ್ದೇಶನದಂತೆ ಈ ಯೋಜನೆ ಜಾರಿಗೆ ತರ ಲಾಗಿದೆ. ವಿದ್ಯಾನಗರದ ಕೈಗಾರಿಕಾ ಪ್ರಾಂಗಣದ ಪ್ಲಾಂಟ್‌ನಲ್ಲಿ ನೀರನ್ನು ಶುದ್ಧೀಕರಿಸಲಾಗುತ್ತಿದೆ. ಪ್ರತಿದಿನ 48 ಸಾವಿರ ಲೀಟರ್ ಕುಡಿಯುವ ನೀರು ಸಂಗ್ರಹಿಸುವ ಪ್ಲಾಂಟ್ ತಯಾರಿಸಲಾಗಿದೆ. ಇದಕ್ಕಾಗಿ ಸಮೀಪ ಕೊಳವೆ ಬಾವಿ ತೋಡಲಾಗಿದೆ. ಏಳು ಹಂತಗಳಲ್ಲಿ ನೀರನ್ನು ಶುದ್ಧೀೀಕರಿಸಲಾಗುತ್ತಿದೆ. ಬಳಿಕವಷ್ಟೇ ಇದು ಗ್ರಾಹಕರಿಗೆ ತಲುಪಲಿದೆ.
ನಗರಸಭಾ ಕುಟುಂಬಶ್ರೀ, ಸಿಡಿಎಸ್‌ನ ಐವರ ತಂಡವು ಕುಡಿಯುವ ನೀರು ಸರಬರಾಜಿನ ಜವಾಬ್ದಾರಿ ಪಡೆದುಕೊಂಡಿದೆ. ಇದಕ್ಕಾಗಿ ವಿಶೇಷ ವಾಹನವನ್ನು ಖರೀದಿಸಲಾಗಿದೆ. ಮೊದಲ ಹಂತದಲ್ಲಿ ಎರಡು ಸಾವಿರದಷ್ಟು ಗ್ರಾಹಕರಿಗೆ ನೀರು ತಲುಪಿಸಲಾಗುವುದು. ನಗರದ ಬಸ್, ರೈಲು ನಿಲ್ದಾಣಗಳಲ್ಲಿ ಒಂದು ರೂ. ಕಾಯಿನ್ ಹಾಕಿದ್ದಲ್ಲಿ ಒಂದು ಬಾಟಲಿ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ಶೀಘ್ರ ಜಾರಿಗೆ ತರಲು ನಗರಸಭೆ ತೀರ್ಮಾನಿಸಿದೆ.
ಮೊದಲ ಹಂತದಲ್ಲಿ 20 ಲೀಟರ್ ಕ್ಯಾನ್‌ನಲ್ಲಿ ಮಾತ್ರ ನೀರು ಸರಬರಾಜು ಮಾಡಲಾಗುವುದು. ಮುಂದಿನ ಹಂತದಲ್ಲಿ ಸಣ್ಣ ಬಾಟಲ್ಗಳಲ್ಲೂ ನೀರು ಮಾರಾಟ ಮಾಡಲಾಗುವುದು. ‘ಪ್ಯೂರ್ ಕಾಸರಗೋಡು’ ಎಂಬ ಬ್ರಾಂಡ್‌ನಲ್ಲಿ ಕುಡಿಯುವ ನೀರು ಬಾಟಲಿಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.
ಮಾರುಕಟ್ಟೆಯಲ್ಲಿ 20 ಲೀಟರ್‌ಗೆ 60 ರೂ. ಈಗ ವಸೂಲು ಮಾಡಲಾಗುತ್ತಿದೆ. ಆದರೆ ನಗರಸಭೆ 20 ಲೀಟರ್ ನೀರನ್ನು 20 ರೂ.ಗೆ ಗ್ರಾಹಕರಿಗೆ ತಲುಪಿಸುತ್ತಿದೆ. ಆದರೆ ಪ್ರಥಮ ಹಂತದಲ್ಲಿ ಮನೆಗಳಿಗೆ ಹಾಗೂ ಸಂಸ್ಥೆಗಳಿಗೆ ಮಾತ್ರ ನೀರು ಪೂರೈಕೆ ಮಾಡಲಾಗುವುದು. ಮುಂದೆ ನಗರಸಭಾ ವ್ಯಾಪ್ತಿಯ ಮಾರುಕಟ್ಟೆಯಲ್ಲೂ ಶುದ್ಧ ಕುಡಿಯುವ ನೀರು ಮಾರಾಟ ಮಾಡಲಾಗುವುದು.
-ಬೀಫಾತಿಮ ಇಬ್ರಾಹೀಂ, ಕಾಸರಗೋಡು ನಗರಸಭಾ ಅಧ್ಯಕ್ಷೆ







