ಕಾರು-ಲಾರಿ ಮುಖಾಮುಖಿ ಢಿಕ್ಕಿ; ಒಂದೇ ಕುಟುಂಬದ ಆರು ಮಂದಿ ಬಲಿ
ಬೀದರ್, ಜ. 24: ಲಾರಿ ಹಾಗೂ ಕಾರು ನಡುವೆ ಮುಖಾಮುಖಿ ಢಿಕ್ಕಿಯಾಗಿ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಹುಮ್ನಾಬಾದ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಜೆ 5:30ರ ಸುಮಾರಿಗೆ ಸಂಭವಿಸಿದೆ.
ಮೃತರನ್ನು ಕಲಬುರಗಿ ಜಿಲ್ಲೆಯ ಚಿತ್ತಾಪುರ ಸಮೀಪದ ಹೆಬ್ಬಾಳ ಗ್ರಾಮದ ನಿವಾಸಿಗಳಾದ ಲಕ್ಷ್ಮೀಬಾಯಿ (60), ಬಸವಂತ್ ಚಂದ್ರಶೇಖರ್ (40), ಶರಣಮ್ಮ ರಾಜ್‌ಕುಮಾರ್ (30), ಮಹಾರುದ್ರಪ್ಪ (40), ಚಂದ್ರಮೋಹನ್ (6), ಮಹಾಂತೇಶ್ (6) ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಬಸವಮ್ಮ (60) ಎಂಬ ವೃದ್ಧ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ಕಲಬುರಗಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವರೆಲ್ಲರೂ ಕಾರಿನಲ್ಲಿ ಬೀದರ್ ಜಿಲ್ಲೆ ಭಾಲ್ಕಿ ಸಮೀಪದಲ್ಲಿನ ಮೈಲಾರ ಮಲ್ಲಣ್ಣ ದೇವಸ್ಥಾನಕ್ಕೆ ತೆರಳಿದ್ದು, ಅಲ್ಲಿಂದ ಊರಿಗೆ ಹಿಂದಿರುಗುವ ವೇಳೆ ಬೀದರ್-ಹುಮ್ನಾಬಾದ್ ರಸ್ತೆಯಲ್ಲಿನ ಜಲಸಂಗಿ ಕ್ರಾಸ್ ಬಳಿ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಟಾ ಇಂಡಿಕಾ ಕಾರು ಮತ್ತು ಜಾನುವಾರು ಸಾಗಿಸುತ್ತಿದ್ದ ಲಾರಿಯ ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಘಟನೆಯಲ್ಲಿ ನಾಲ್ಕೈದು ಜಾನುವಾರುಗಳು ಸಾವನ್ನಪ್ಪಿವೆ.
ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಲಾರಿ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಈ ಸಂಬಂಧ ಹುಮ್ನ್ನಾಬಾದ್ ಸಂಚಾರ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.





