ಯುವಿ ಸಹಿತ 11 ಆಟಗಾರರಿಗೆ ಗರಿಷ್ಠ ಮೂಲ ಬೆಲೆ
ಐಪಿಎಲ್ ಆಟಗಾರರ ಹರಾಜು
ಹೊಸದಿಲ್ಲಿ, ಜ.24: ಕಳೆದ ಆವೃತ್ತಿಯ ಐಪಿಎಲ್ ಹರಾಜಿನಲ್ಲಿ ದುಬಾರಿ ಆಟಗಾರನಾಗಿದ್ದ ಭಾರತದ ದಾಂಡಿಗ ಯುವರಾಜ್ ಸಿಂಗ್ ಹಾಗೂ ಇತರ 11 ಆಟಗಾರರು ಈ ವರ್ಷದ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.
2016ರ ಐಪಿಎಲ್ ಹರಾಜು ಪ್ರಕ್ರಿಯೆ ಫೆ.6ಕ್ಕೆ ಬೆಂಗಳೂರಿನಲ್ಲಿ ನಡೆಯುವುದು.
ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ವರದಿಯ ಪ್ರಕಾರ, ಯುವರಾಜ್‌ರಲ್ಲದೆ, ಇಂಗ್ಲೆಂಡ್‌ನ ಕೇವಿನ್ ಪೀಟರ್ಸನ್ ಹಾಗೂ ಫಾರ್ಮ್‌ನಲ್ಲಿರುವ ಆಸ್ಟ್ರೇಲಿಯದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಸಹಿತ 12 ಆಟಗಾರರು ಗರಿಷ್ಠ ಮೂಲ ಬೆಲೆ ಹೊಂದಿದ್ದಾರೆ.
ಒಟ್ಟು 714 ಆಟಗಾರರ ಪೈಕಿ ಅಂತಿಮ ಗ್ರೂಪ್ ಪಟ್ಟಿಯನ್ನು ಸೋಮವಾರ ಆಯ್ಕೆ ಮಾಡಲಾಗುತ್ತದೆ. ಶೇನ್ ವ್ಯಾಟ್ಸನ್, ಇಶಾಂತ್ ಶರ್ಮ, ಆಶೀಷ್ ನೆಹ್ರಾ, ದಿನೇಶ್ ಕಾರ್ತಿಕ್, ಸ್ಟುವರ್ಟ್ ಬಿನ್ನಿ, ಸಂಜು ಸ್ಯಾಮ್ಸನ್, ಮೈಕ್ ಹಸ್ಸಿ 2 ಕೋ.ರೂ. ಮೂಲ ಬೆಲೆ ಹೊಂದಿದ್ದರೆ, ದಕ್ಷಿಣ ಆಫ್ರಿಕದ ವೇಗದ ಬೌಲರ್ ಡೇಲ್ ಸ್ಟೇಯ್ನಿ, ಭಾರತದ ಮೋಹಿತ್ ಶರ್ಮ, ಇಂಗ್ಲೆಂಡ್‌ನ ಜೋಸ್ ಬಟ್ಲರ್ 1.5 ಕೋ.ರೂ.ಮೂಲ ಬೆಲೆ ಹೊಂದಿದ್ದಾರೆ. ಇರ್ಫಾನ್ ಪಠಾಣ್ ಹಾಗೂ ಟಿಮ್ ಸೌಥಿ ತಲಾ 1 ಕೋಟಿ ರೂ. ಮೂಲ ಬೆಲೆ ಹೊಂದಿದ್ದಾರೆ.
ಈ ವರ್ಷ ಆರು ಫ್ರಾಂಚೈಸಿಗಳು ಒಟ್ಟು 61 ಆಟಗಾರರನ್ನು ತಂಡದಿಂದ ಬಿಡುಗಡೆಗೊಳಿಸಿದೆ ಎಂದು ವರದಿಯಾಗಿದೆ.







