ಅಮೆರಿಕದಲ್ಲಿ ಹಿಮ ಬಿರುಗಾಳಿ : ಸಾವಿನ ಸಂಖ್ಯೆ 19ಕ್ಕೆ
ನ್ಯೂಯಾರ್ಕ್, ಜ. 24: ಅಮೆರಿಕದ ಪೂರ್ವ ಕರಾವಳಿಗೆ ಶನಿವಾರ ಅಪ್ಪಳಿಸಿದ ಹಿಮ ಬಿರುಗಾಳಿ ಭಾರೀ ನಾಶ-ನಷ್ಟಗಳ ಸರಮಾಲೆಯನ್ನೇ ಸೃಷ್ಟಿಸಿದೆ. ವಾಶಿಂಗ್ಟನ್‌ನ ರಸ್ತೆಗಳು, ಸೇತುವೆಗಳು ಮತ್ತು ನ್ಯೂಯಾರ್ಕನ್ನು ಸಂಪರ್ಕಿಸುವ ಸುರಂಗಗಳು ಮುಚ್ಚಿವೆ ಹಾಗೂ ಜನಜೀವನ ಸ್ತಬ್ಧವಾಗಿದೆ.
ಹಿಮ ಬಿರುಗಾಳಿಯಿಂದಾಗಿ ವಿವಿಧ ರಾಜ್ಯಗಳಲ್ಲಿ ಕನಿಷ್ಠ 19 ಸಾವುಗಳು ಸಂಭವಿಸಿವೆ. ನ್ಯೂಯಾರ್ಕ್ ನಗರದಲ್ಲಿ ಕನಿಷ್ಠ 25.1 ಇಂಚು ಹಾಗೂ ವಾಶಿಂಗ್ಟನ್‌ನಲ್ಲಿ ಎರಡು ಅಡಿಗಳಷ್ಟು ದಪ್ಪ ಹಿಮ ರಾಶಿಬಿದ್ದಿದೆ. ಅರ್ಕಾನ್ಸಸ್, ನಾರ್ತ್ ಕ್ಯಾರಲೈನ, ಕೆಂಟುಕಿ, ಓಹಿಯೊ, ಟೆನೆಸಿ ಮತ್ತು ವರ್ಜೀನಿಯ ರಾಜ್ಯಗಳಲ್ಲಿ ಸಂಭವಿಸಿದ ಹವಾಮಾನ ಸಂಬಂಧಿ ಕಾರು ಅಪಘಾತಗಳಲ್ಲಿ 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮ್ಯಾರಿಲ್ಯಾಂಡ್ ರಾಜ್ಯದಲ್ಲಿ ಓರ್ವ ಸತ್ತರೆ, ನ್ಯೂಯಾರ್ಕ್ ಸಿಟಿಯಲ್ಲಿ ಹಿಮ ತೆರವುಗೊಳಿಸುತ್ತಿದ್ದಾಗ ಮೂವರು ಬಲಿಯಾಗಿದ್ದಾರೆ. ವರ್ಜೀನಿಯದಲ್ಲಿ ಅತ್ಯಂತ ಕಡಿಮೆ ದೇಹದ ಉಷ್ಣತೆಯಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಸುಮಾರು 5,100 ವಿಮಾನಗಳ ಹಾರಾಟವನ್ನು ಶನಿವಾರ ರದ್ದುಗೊಳಿಸಲಾಗಿದೆ ಹಾಗೂ ರವಿವಾರದ 2,800 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗುವುದು.





