‘ರಾಷ್ಟ್ರೀಯ ರಂಗೋತ್ಸವ’ ಉದ್ಘಾಟನೆ; ಭಾರತದ ನೆಲವನ್ನು ಕಾಮಿಸುತ್ತಿರುವ ಕಾರ್ಪೊರೇಟ್ ಸಂಸ್ಥೆಗಳು: ಬರಗೂರು

ಬೆಂಗಳೂರು, ಜ.24: ಭಾರತದ ನೆಲವನ್ನು ರೈತರು ಆರಾಧಿಸುತ್ತಿದ್ದರೆ, ಕಾರ್ಪೊರೇಟ್ ಸಂಸ್ಥೆಗಳು ಕಾಮಿಸುತ್ತಿವೆ ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ಅವಿಷ್ಕಾರ ನಗರದ ಕೆಜಿಎಸ್ ಸಭಾಂಗಣದಲ್ಲಿ ರವಿವಾರ ಆಯೋಜಿದ್ದ 20ನೆ ಬೀದಿನಾಟಕೋತ್ಸವದ ‘ರಾಷ್ಟ್ರೀಯ ರಂಗೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಭೂಮಿಯನ್ನು ತಾಯಿಗೆ ಹೋಲಿಸಿ ಪೂಜಿಸುತ್ತಾ ಬಂದಿದ್ದೇವೆ. ಆದರೆ, ಕಾರ್ಪೊರೇಟ್ ಸಂಸ್ಥೆಗಳು ಇದೇ ಭೂಮಿಯನ್ನು ಕಾಮಿಸುವ, ಕಬಳಿಸುವ ಮನಸ್ಥಿತಿಯನ್ನು ಹೊಂದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ರೈತರು ತಮ್ಮಲ್ಲಿರುವ ಅಲ್ಪಸ್ವಲ್ಪ ಜಮೀನಿನಲ್ಲಿಯೆ ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ. ಆದರೆ, ನಮ್ಮನಾಳುವ ಸರಕಾರಗಳು ಅಭಿವೃದ್ಧಿಯ ಹೆಸರಿನಲ್ಲಿ ರೈತರಲ್ಲಿದ್ದ ಭೂಮಿಯನ್ನು ಕಿತ್ತು, ಕಾರ್ಪೊರೇಟ್ ಸಂಸ್ಥೆಗಳ ಕೈಗಿಡುವ ಪ್ರಕ್ರಿಯೆ ಶುರು ಮಾಡಿದ್ದಾರೆ. ಈಗಾಗಲೇ ದೇಶದ ಬಹುತೇಕ ಜಮೀನು ಕಾರ್ಪೊರೇಟ್ ಸಂಸ್ಥೆಗಳ ಸ್ವಾಧೀನದಲ್ಲಿದೆ ಎಂದು ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.
ದೇಶದ ಸಂಪತ್ತನ್ನು ರಕ್ಷಿಸಬೇಕಾದ ಜನಪ್ರತಿನಿಧಿಗಳು ಕಾರ್ಪೊರೇಟ್ ಸಂಸ್ಥೆಗಳ ಗುಲಾಮರಾಗಿದ್ದಾರೆ. ಎಸ್‌ಇಝಡ್ ಹೆಸರಿನಲ್ಲಿ ನಮ್ಮ ಮಾತೃ ಸಮಾನವಾದ ನೆಲವನ್ನು ವಿದೇಶಿ ಬಂಡವಾಳಿಗರಿಗೆ ಒತ್ತೆ ಇಡುತ್ತಿದ್ದಾರೆ. ಇಂತಹ ರಾಜಕೀಯ ಪ್ರತಿನಿಧಿಗಳ ವಿರುದ್ಧ ಜನಹೋರಾಟದ ಅಗತ್ಯವಿದೆ ಎಂದು ಅವರು ತಿಳಿಸಿದರು.
ಅಮೆರಿಕದ ಗುಲಾಮನಂತೆ ವರ್ತಿಸುತ್ತಿರುವ ಕೇಂದ್ರ ಸರಕಾರ, ಅಲ್ಲಿನ ರೈತಪರ ನೀತಿಯನ್ನು ಜಾರಿ ಮಾಡುವಲ್ಲಿ ಹಿಂದೇಟು ಹಾಕುತ್ತಿದೆ. ಅಮೆರಿಕ ಸರಕಾರ ಶೇ.6ರಷ್ಟಿರುವ ರೈತರಿಗೆ ಶೇ.26ರಷ್ಟು ಸಬ್ಸಿಡಿಯನ್ನು ಕೊಡುತ್ತಿದೆ. ಆದರೆ, ಭಾರತ ಸರಕಾರ ಶೇ.60ರಷ್ಟಿರುವ ರೈತರಿಗೆ ಶೇ.2ಕ್ಕಿಂತಲೂ ಕಡಿಮೆ ಸಬ್ಸಿಡಿಯನ್ನು ಕೊಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಪ್ರಸ್ತುತ ದಿನಗಳಲ್ಲಿ ದೇಶದಾದ್ಯಂತ ಆತ್ಮಹತ್ಯೆ,ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಈ ಸಂದರ್ಭದಲ್ಲಿ ಬೀದಿ ನಾಟಕಗಳ ಜವಾಬ್ದಾರಿ ದೊಡ್ಡದಿದೆ. ಹಳ್ಳಿಗಳಿಗೆ ಹೋಗಿ ರೈತರಿಗೆ ಆತ್ಮವಿಶ್ವಾಸವನ್ನು ತುಂಬಿಸಿ, ಆತ್ಮಹತ್ಯೆಗಳನ್ನು ತಡೆಯಬೇಕಾಗಿದೆ. ಹಾಗೆಯೇ ಬಹುಸಂಸ್ಕೃತಿಯ ಕುರಿತು ಜಾಗೃತಿ ಮೂಡಿಸುವ ಮೂಲಕ ಕೋಮು ಸೌಹಾರ್ದತೆಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಬಿ.ಆರ್.ಮಂಜುನಾಥ್ ಮಾತನಾಡಿ, ವರ್ತಮಾನದ ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರಾರಂಭಗೊಂಡ ಬೀದಿ ನಾಟಕಗಳು ಚಳವಳಿಗಳ ಮುನ್ನಡೆಗೆ ಸಾಕಷ್ಟು ಕೊಡುಗೆ ನೀಡಿವೆ. ಹೀಗಾಗಿ ಪ್ರಸ್ತುತ ದೇಶದಲ್ಲಿ ಹೆಚ್ಚುತ್ತಿರುವ ಕೋಮುವಾದಿಗಳ ಉಪಟಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಬೀದಿ ನಾಟಕಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ಸಾವಿನ ಕುರಿತು ಗೊತ್ತುವಳಿ ಮಂಡಿಸಲಾಯಿತು. ರೋಹಿತ್ ಸಾವಿಗೆ ಕಾರಣರಾದ ಕೇಂದ್ರದ ಇಬ್ಬರು ಸಚಿವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಯಾವ ವಿದ್ಯಾರ್ಥಿಯೂ ಆತ್ಮಹತ್ಯೆಯಂತಹ ಪ್ರಕರಣದಲ್ಲಿ ಸಿಲುಕದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು. ಈ ವೇಳೆ ಡಾ.ಎಚ್.ಜಿ.ಜಯಲಕ್ಷ್ಮೀ ಉಪಸ್ಥಿತರಿದ್ದರು.
ಕೇಂದ್ರ ಸರಕಾರದಿಂದ ಜಾತಿ ರಾಜಕಾರಣ
ಬೆಂಗಳೂರು: ಕೇಂದ್ರ ಸರಕಾರ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ ವಿಚಾರದಲ್ಲಿ ಜಾತಿ ರಾಜಕಾರಣ ಮಾಡುತ್ತಿದೆ ಎಂದು ಪ್ರೊ.ಬರಗೂರು ರಾಮಚಂದ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್‌ನ ಕೇಂದ್ರೀಯ ವಿಶ್ವವಿದ್ಯಾ ನಿಲಯದ ಆಡಳಿತ ಮಂಡಳಿಯ ಕಿರುಕುಳದಿಂದಾಗಿ ಸಂಶೋಧನೆ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವನ್ನಪ್ಪಿದ್ದಾನೆ. ತನ್ನ ಸಂಶೋಧನೆಯ ಮೂಲಕ ದೇಶದ ಅಭಿವೃದ್ಧಿಗೆ ಕಾರಣವಾಗಬೇಕಾಗಿದ್ದ ಪ್ರತಿಭಾವಂತ ವಿದ್ಯಾರ್ಥಿಯ ಸಾವಿಗೆ ಇಡೀ ದೇಶದ ಜನತೆ ಕಣ್ಣೀರು ಸುರಿಸುತ್ತಿದ್ದಾರೆ. ಆದರೆ, ಕೇಂದ್ರ ಸರಕಾರ ಆತನ ಜಾತಿಯ ಮೂಲವನ್ನು ಹುಡುಕುವತ್ತ ತನ್ನ ಗಮನವನ್ನು ಕೇಂದ್ರೀಕರಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾವು ಪರಿಶಿಷ್ಟ ಜಾತಿಗೆ ಸೇರಿದವರೆಂದು ರೋಹಿತ್ ತಾಯಿ ಹೇಳುತ್ತಿದ್ದರೂ ಕೇಂದ್ರ ಸರಕಾರ ಅವರ ಮಾತನ್ನು ಸುಳ್ಳಾಗಿಸಲು ಪ್ರಯತ್ನಿಸುತ್ತಿದೆ. ರೋಹಿತ್ ತಂದೆಯ ಮಾತನ್ನು ಮುನ್ನೆಲೆಗೆ ತಂದು ಇಡೀ ಪ್ರಕರಣಕ್ಕೆ ರಾಜಕಿಯ ಬಣ್ಣ ಬಳಿಯುತ್ತಿದ್ದು, ಆ ಮೂಲಕ ಕೇಂದ್ರ ಸರಕಾರ ಸಂವೇದನಾ ಹೀನವಾಗಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಅವರು ಕಿಡಿಕಾರಿದರು.







