‘ಎದೆ ತುಂಬಿ ಹಾಡುವೆವು’ ಸಮಾರೋಪ ಸಮಾರಂಭ; ‘ಜನಪ್ರಿಯತೆ ಪಡೆಯದ ಜಿಎಸ್ಸೆಸ್’

ಬೆಂಗಳೂರು, ಜ. 24: ರಾಷ್ಟ್ರಕವಿ ಕುವೆಂಪು ಅವರಿಗಿದ್ದ ಸಾಹಿತ್ಯ ಪಾಂಡಿತ್ಯದಷ್ಟೇ ಸರಿಸಮನಾದ ಪಾಂಡಿತ್ಯವನ್ನು ಡಾ.ಜಿ.ಎಸ್.ಶಿವರುದ್ರಪ್ಪ ಹೊಂದಿದ್ದರು. ಆದರೆ ಅವರಿಗೆ ಕುವೆಂಪು ಅವರಿಗಿರುವ ಜನಪ್ರಿಯತೆಯನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದು ಜಿಎಸ್ಸೆಸ್ ಅವರ ಪತ್ನಿ ಪದ್ಮಾ ಶಿವರುದ್ರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿ ಸಹಯೋಗದಲ್ಲಿ ರಂಗಮಂಡಳ ಸಾಂಸ್ಕೃತಿಕ ಸಂಘ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಜ್ಞಾಪಕಾರ್ಥವಾಗಿ ನಗರದ ನಯನ ಸಭಾಂಗಣದಲ್ಲಿ ರವಿವಾರ ಆಯೋಜಿಸಿದ್ದ ‘ಎದೆ ತುಂಬಿ ಹಾಡುವೆವು’ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಷ್ಟ್ರಕವಿ ಕುವೆಂಪು ಅವರ ಶಿಷ್ಯರಾಗಿದ್ದ ಜಿಎಸ್ಸೆಸ್ ಅವರ ಪಾಂಡಿತ್ಯ ಮತ್ತು ಸಾಹಿತ್ಯದ ಅಧ್ಯಯನವು ಕುವೆಂಪು ಅವರ ಪಾಂಡಿತ್ಯಕ್ಕೆ ಹೋಲುತ್ತಿತ್ತು. ಜಿಎಸ್ಸೆಸ್ ಅವರ ಸಾಹಿತ್ಯ ಜಲಪಾತದಂತೆ ಝೇಂಕರಿಸದೆ ಸಮುದ್ರದ ರೀತಿಯಲ್ಲಿ ಅರ್ಭಟಿಸದೆ ಪ್ರಶಾಂತವಾಗಿ ಹರಿಯುವ ನದಿಯ ರೀತಿಯಲ್ಲಿ ಇತ್ತು ಎಂದು ಅವರು ಅರ್ಥೈಸಿದರು.
ಜಿಎಸ್ಸೆಸ್ ಅವರಿಗಿದ್ದ ಕನ್ನಡ ಸಾಹಿತ್ಯದಲ್ಲಿನ ಏಕಾಗ್ರತೆ ಮತ್ತು ಶ್ರದ್ಧೆ ಅವರನ್ನು ಸಾಧನೆಯ ಉತ್ತುಂಗಕ್ಕೆ ಕಂಡ್ಯೊಯಿತ್ತು. ಆದರೆ ಇವರಲ್ಲಿದ್ದ ಪ್ರಾಮಾಣಿಕತೆ ಅವರಿಗೆ ಮುಳುವಾಗಿ ಪರಿಣಮಿಸಿತ್ತು. ಈ ಪರಿಣಾಮ ಜಿಎಸ್ಸೆಸ್ ವಿರೋಧಿಗಳು ಸೃಷ್ಟಿಯಾದರು. ಇದರಿಂದ ನಮ್ಮ ಕುಟುಂಬ ಇರಿಸು ಮುರಿಸಿಗೆ ಒಳಗಾಗಿತ್ತು ಎಂದು ಪದ್ಮಾ ನುಡಿದರು.
ಜಿಎಸ್ಸೆಸ್ ಸಾಹಿತ್ಯದಲ್ಲಿ ನವ್ಯ, ನವ್ಯೋತ್ತರ, ಬಂಡಾಯ, ದಲಿತ ಅಂಶಗಳು ಹೆಚ್ಚಾಗಿದ್ದರಿಂದ ಅವರನ್ನು ಜಾತಿವಾದಿಗಳೆಂದು ಕಟುವಾಗಿ ನಿಂದಿಸುತ್ತಿದ್ದರು. ಆದರೆ ಇದ್ಯಾವುದಕ್ಕೂ ಕಿವಿಗೊಡದ ಜಿಎಸ್ಸೆಸ್ ಜಾತೀಯತೆ ಮತ್ತು ವೌಢ್ಯವನ್ನು ವಿರೋಧಿಸುತ್ತಿದ್ದರು. ಮಾನವೀ ಯತೆಯ ಧರ್ಮದ ಬಗ್ಗೆ ಪ್ರತಿಪಾದಿಸುತ್ತಿದ್ದರು ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್.ಹನುಮಂತಯ್ಯ, ವಿಮರ್ಶಕ ಭೈರಮಂಗಲ ರಾಮೇಗೌಡ, ಜಾನಪದ ಕಲಾವಿದ ಅಪ್ಪಗೆರೆ ತಿಮ್ಮರಾಜು, ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಉಪಸ್ಥಿತರಿದ್ದರು.





