ಹೈದರಾಬಾದ್ ವಿವಿಗೆ ಭೇಟಿ ನೀಡಿದ ಖರ್ಗೆ: ಸಂಸತ್ತಿನಲ್ಲಿ ವೇಮುಲಾ ಪರ ಧ್ವನಿ

ಹೈದರಾಬಾದ್, ಜ.24:ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾನ ಆತ್ಮಹತ್ಯೆ ಪ್ರಕರಣವನ್ನು, ಸಂಸತ್‌ನಲ್ಲಿ ಎತ್ತುವುದಾಗಿ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಎಂ. ಮಲ್ಲಿ ಕಾರ್ಜುನ ಖರ್ಗೆ ರವಿವಾರ ತಿಳಿಸಿದ್ದಾರೆ.
ಪಕ್ಷದ ತೆಲಂಗಾಣ ಘಟಕದ ಮುಖಂಡರೊಂದಿಗೆ ಹೈದರಾಬಾದ್ ವಿವಿ ಕ್ಯಾಂಪಸ್‌ಗೆ ಇಂದು ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಾ, ಉಪಕುಲಪತಿ ಹಾಗೂ ಎನ್‌ಡಿಎ ಸರಕಾರವು ಸಂಶೋಧನಾ ವಿದ್ಯಾರ್ಥಿಯನ್ನು ಹತ್ಯೆಗೈದಿದೆ. ಆತನಿಗೆ ಮಾನವಹಕ್ಕುಗಳನ್ನು ನಿರಾಕರಿಸಿದೆ. ಈ ವಿಷಯವನ್ನು ನಾವು ಸಂಸತ್ ಮುಂದೆ ಕೊಂಡೊಯ್ಯಲಿದ್ದೇವೆ ಹಾಗೂ ಹೈದರಾಬಾದ್ ವಿವಿಯಲ್ಲಿ ನಡೆದಿರುವ ಅನ್ಯಾಯವನ್ನು ಇಡೀ ದೇಶದ ಮುಂದೆ ಹೇಳಲಿದ್ದೇವೆ ಎಂದರು.
ರೋಹಿತ್ ವೇಮುಲಾನ ಆತ್ಮಹತ್ಯೆ ವಿಚಾರವನ್ನು ಸಂಸತ್‌ನ ಮುಂದಿಡುವ ಬಗ್ಗೆ ಇತರ ಪಕ್ಷಗಳ ಜೊತೆಗೂಡಿ ಕಾರ್ಯತಂತ್ರವೊಂದನ್ನು ರೂಪಿಸಲಾಗುವುದು. ವಿವಿಯ ಹಿತಾಸಕ್ತಿಯ ದೃಷ್ಟಿಯಿಂದ ಮಾತ್ರವಲ್ಲ, ಇಡೀ ದಲಿತ ಸಮುದಾಯ ಹಾಗೂ ದೇಶದ ಹಿತದೃಷ್ಟಿಯಿಂದ ನಾವು ಈ ಬಗ್ಗೆ ಕಾರ್ಯತಂತ್ರ ರೂಪಿಸಲಿದ್ದೇವೆಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಸದಾ ಕಾಲ ಭಾವನಾತ್ಮಕ ಹಾಗೂ ಆಕರ್ಷಕ ಭಾಷಣಗಳನ್ನು ಮಾಡುವುದರಲ್ಲೇ ಮಗ್ನರಾಗಿರುತ್ತಾರೆ. ಅವರು ಕಾರ್ಯಶೀಲ ವ್ಯಕ್ತಿಯಲ್ಲ ಹಾಗೂ ಬಡವರ ಕಡೆಗೆ ಅವರು ಕಣ್ಣೆತ್ತಿಯೂ ನೋಡುವುದಿಲ್ಲ ಎಂದು ಖರ್ಗೆ ವ್ಯಂಗ್ಯವಾಡಿದರು. ಈ ಮಧ್ಯೆ ವಿವಿ ಉಪಕುಲಪತಿ ಪ್ರೊ.ಅಪ್ಪಾರಾವ್‌ರನ್ನು ವಜಾಗೊಳಿಸಬೇಕು ಹಾಗೂ ವೇಮುಲಾರ ಸಂತ್ರಸ್ತ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಆಗ್ರಹಿಸಿ ಏಳು ವಿದ್ಯಾರ್ಥಿಗಳು, ರವಿವಾರ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ಆರಂಭಿಸಿದ್ದಾರೆ.
ಇದಕ್ಕೂ ಮುನ್ನ ಎನ್‌ಎಸ್‌ಯುಐ ರಾಷ್ಟ್ರೀಯ ಅಧ್ಯಕ್ಷೆ ರೋಜಿ ಎಂ.ಜಾನ್ ರವಿವಾರ ಹೈದರಾಬಾದ್ ವಿವಿಯ ಮುಷ್ಕರನಿರತ ವಿದ್ಯಾರ್ಥಿಗಳನ್ನು ಭೇಟಿ ಮಾಡಿದರು. ಹೈದರಾಬಾದ್ ವಿವಿ ವಿದ್ಯಾರ್ಥಿಗಳ ಚಳವಳಿಯನ್ನು ಬೆಂಬಲಿಸಿ ಸೋಮವಾರ ಎಲ್ಲ ರಾಜ್ಯಗಳ ರಾಜಧಾನಿಗಳಲ್ಲಿ ಎನ್‌ಎಸ್‌ಯುಐ ಕಾರ್ಯಕರ್ತರು ಒಂದು ದಿನದ ನಿರಶನ ನಡೆಸಲಿದ್ದಾರೆ ಅವರು ತಿಳಿಸಿದರು.







