ಪ್ರಥಮ ಏಕದಿನ: ಕಿವೀಸ್‌ಗೆ ಶರಣಾದ ಪಾಕ್

ನಿಕೊಲ್ಸ್ ಆಕರ್ಷಕ ಅರ್ಧಶತಕ, ಆಮಿರ್ ಶ್ರಮ ವ್ಯರ್ಥ
ವೆಲ್ಲಿಂಗ್ಟನ್, ಜ.25: ಪಾಕಿಸ್ತಾನ ತಂಡ ಸೋಮವಾರ ಇಲ್ಲಿ ನಡೆದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ 70 ರನ್‌ಗಳ ಅಂತರದಿಂದ ಸೋತಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 0-1ರಿಂದ ಹಿನ್ನಡೆ ಅನುಭವಿಸಿದೆ.
ಪಾಕಿಸ್ತಾನದಿಂದ ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ನ್ಯೂಝಿಲೆಂಡ್ 8 ವಿಕೆಟ್‌ಗಳ ನಷ್ಟಕ್ಕೆ 280 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ತಂಡ ಟ್ರೆಂಟ್ ಬೌಲ್ಟ್(4-40) ಹಾಗೂ ಎಲಿಯಟ್(3-43) ದಾಳಿಗೆ ತತ್ತರಿಸಿ 46 ಓವರ್‌ಗಳಲ್ಲಿ 210 ರನ್‌ಗೆ ಆಲೌಟಾಯಿತು.
27ನೆ ಓವರ್‌ನಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 118 ರನ್ ಗಳಿಸಿದ್ದ ಪಾಕಿಸ್ತಾನ 46ನೆ ಓವರ್‌ನಲ್ಲಿ ಸರ್ವಪತನಗೊಂಡಿತು. ಪಾಕ್ ಪರ ಬಾಬರ್ ಆಝಂ(62) ಅಗ್ರ ಸ್ಕೋರರ್ ಎನಿಸಿಕೊಂಡರು. ಮುಹಮ್ಮದ್ ಹಫೀಝ್(42) ಹಾಗೂ ಸರ್ಫರಾಝ್ ಅಹ್ಮದ್(30) ಎರಡಂಕೆಯ ಸ್ಕೋರ್ ದಾಖಲಿಸಿದರು.
ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಝಿಲೆಂಡ್ ತಂಡ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಐದು ವರ್ಷ ನಿಷೇಧಕ್ಕೆ ಒಳಗಾಗಿ ಸಕ್ರಿಯ ಕ್ರಿಕೆಟ್‌ಗೆ ಮರಳಿದ್ದ ಪಾಕ್‌ನ ಯುವ ವೇಗದ ಬೌಲರ್ ಮುಹಮ್ಮದ್ ಆಮಿರ್(3-28) ದಾಳಿಗೆ ಸಿಲುಕಿ ಒಂದು ಹಂತದಲ್ಲಿ 99 ರನ್‌ಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಆಗ ದಿಟ್ಟ ಹೋರಾಟವನ್ನು ನೀಡಿದ ಯುವ ದಾಂಡಿಗ ಹೆನ್ರಿ ನಿಕೊಲ್ಸ್(82 ರನ್, 111 ಎಸೆತ, 7 ಬೌಂಡರಿ), ಕೆಳ ಕ್ರಮಾಂಕದ ಆಟಗಾರರಾದ ಮಿಚೆಲ್ ಸ್ಯಾಟ್ನೆರ್(48), ಮ್ಯಾಟ್ ಹೆನ್ರಿ(ಔಟಾಗದೆ 48) ಹಾಗೂ ಮೆಕ್ಲೆನಘನ್(31) ನೆರವಿನಿಂದ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 280 ರನ್ ಗಳಿಸಿತು.
ಪಾಕ್ ಪರ ಆಮಿರ್‌ರಲ್ಲದೆ, ಅನ್ವರ್ ಅಲಿ(3-66) ಹಾಗೂ ಮುಹಮ್ಮದ್ ಇರ್ಫಾನ್(2-43) ಐದು ವಿಕೆಟ್‌ಗಳನ್ನು ಹಂಚಿಕೊಂಡರು.
ನ್ಯೂಝಿಲೆಂಡ್ ಸ್ಪರ್ಧಾತ್ಮಕ ಸ್ಕೋರ್ ದಾಖಲಿಸಲು ನೆರವಾದ ನಿಕೊಲ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್
ನ್ಯೂಝಿಲೆಂಡ್: 50 ಓವರ್‌ಗಳಲ್ಲಿ 280/6
(ನಿಕೊಲ್ಸ್ 82, ಸ್ಯಾಂಟ್ನರ್ 48, ಹೆನ್ರಿ ಔಟಾಗದೆ 48, ಮೆಕ್ಲೆನಘನ್ 31, ಮುಹಮ್ಮದ್ ಆಮಿರ್ 3-28, ಅನ್ವರ್ ಅಲಿ 3-66)
ಪಾಕಿಸ್ತಾನ: 46 ಓವರ್‌ಗಳಲ್ಲಿ 210 ರನ್‌ಗೆ ಆಲೌಟ್
(ಬಾಬರ್ ಆಝಂ 62, ಮುಹಮ್ಮದ್ ಹಫೀಝ್ 42, ಅಹ್ಮದ್ 30, ಬೌಲ್ಟ್ 4-40, ಎಲಿಯಟ್ 3-43)
ಪಂದ್ಯಶ್ರೇಷ್ಠ: ಮಿಚೆಲ್ ನಿಕೊಲ್ಸ್.







