ಸಂವಿಧಾನ ನಾವು ರಕ್ಷಿಸಿದರೆ ನಮ್ಮನ್ನು ರಕ್ಷಿಸುತ್ತದೆ
1949ರ ನವೆಂಬರ್ 26ನೆಯ ದಿವಸ ಭಾರತೀಯರಾದ ನಾವು ಅಂಗೀಕರಿಸಿ, ಅಧಿನಿಯಮಿಸಿ ಅರ್ಪಿಸಿಕೊಂಡ ಭಾರತ ಸಂವಿಧಾನವು 1950ರ ಜನವರಿ 26ನೆಯ ದಿವಸ ಜಾರಿಗೆ ಬಂತು. ವಿಶ್ವದ ಹತ್ತು ಜನ ಮಹಾನ್ ಜ್ಞಾನಿಗಳ ಸಾಲಿನಲ್ಲಿ ಪ್ರಪ್ರಥಮ ಸ್ಥಾನ ಪಡೆದಿರುವ ವಿಶ್ವನಾಯಕ, ಮಾನವತಾವಾದಿ, ಅರ್ಥಶಾಸ್ತ್ರಜ್ಞ, ಸಮಾಜಶಾಸ್ತ್ರಜ್ಞ, ರಾಜನೀತಿತಜ್ಞ ಮುಂತಾದ ಸಕಲ ವಿಷಯಗಳಲ್ಲೂ ಪಾರಂಗತರಾದ ಪ್ರಬುದ್ಧ ಭಾರತರತ್ನ ಬಾಬಾಸಾಹೇಬ್ ಡಾ. ಭೀಮ್‌ರಾವ್ ರಾಮ್‌ಜೀ ಅಂಬೇಡ್ಕರ್ ಅವರು ರಚಿಸಿಕೊಟ್ಟಂತಹ ರಾಷ್ಟ್ರಗ್ರಂಥ ಸಂವಿಧಾನವನ್ನು ನಮ್ಮ ದೇಶಕ್ಕೆ ನಾವೇ ಸಮರ್ಪಿಸಿಕೊಂಡು, ಜಾರಿಗೊಳಿಸಿದ ದಿನ ಸಂವಿಧಾನ ದಿನಾಚರಣೆ ಅಲ್ಲವೇ?! ಸಂವಿಧಾನ ರಚನೆಯ ಹಿಂದಿದೆ ಅಂಬೇಡ್ಕರರ ಹೋರಾಟ: ಸಂವಿಧಾನ ರಚನೆಯ ಹಿಂದಿನ ಸಂಘರ್ಷದ ಇತಿಹಾಸವನ್ನು ಅರಿಯದ ಹೊರತು ಅದರ ಮಹತ್ವ ನಮಗೆ ತಿಳಿಯಲಸಾಧ್ಯ. ಬ್ರಿಟಿಷರು ಕೊಟ್ಟ ಸ್ವಾತಂತ್ರ್ಯದ ಭರವಸೆಯೊಂದಿಗೆ ಸಂವಿಧಾನದ ರಚನಾ ಕಾರ್ಯಕ್ಕಾಗಿ 1946ರಲ್ಲಿ ದೇಶದಲ್ಲಿ ಒಂದು ಪ್ರಾಂತೀಯ ಅಸೆಂಬ್ಲಿ ಚುನಾವಣೆಯು ಜರಗುತ್ತದೆ. ಈ ಚುನಾವಣೆಯು ಸಂವಿಧಾನ ರಚನಾಕಾರರನ್ನು ಜನರೇ ನಿರ್ಧರಿಸಬೇಕಾದ ವಿಧಾನವಾಗಿರುತ್ತದೆ. ಹಿಂದೆಯೆಲ್ಲಾ ಕೆಲವು ದೇಶೀಯ ಸಂಸ್ಥಾನಗಳನ್ನು ಹೊರತುಪಡಿಸಿ ಬಹುಪಾಲು ಪ್ರಾಂತಗಳಲ್ಲಿ ಮತದಾನದ ಹಕ್ಕು ಕೇವಲ ಭೂಮಾಲಕರು, ಶ್ರೀಮಂತರು, ಪದವೀಧರರು, ಮೇಲಂತಸ್ತಿನಲ್ಲಿ ಕುಳಿತ ಕೆಲವೇ ವರ್ಗಗಳಿಗೆ ಸೀಮಿತವಾಗಿತ್ತು. ಆದರೆ ಅಂಬೇಡ್ಕರ್ ಅವರು ಸೌತ್‌ಬರೋ ಆಯೋಗಕ್ಕೆ ಸಲ್ಲಿಸಿದ ವರದಿಯ ಕೃಪೆಯಿಂದ ಈ ದೇಶದ ಪ್ರತಿಯೊಬ್ಬ ವಯಸ್ಕ ಪ್ರಜೆಗೂ ಓಟಿನ ಹಕ್ಕು ದೊರೆಯಿತು. ಸಂವಿಧಾನ ರಚನಾ ಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಪಾಲು ಕ್ಷೇತ್ರಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎಂಬ ಒಂದು ಸ್ವಾತಂತ್ರ್ಯ ಹೋರಾಟಗಾರರ ಸಂಸ್ಥೆ/ಪಕ್ಷ, ಮುಸ್ಲಿಮ್ ಲೀಗ್, ಹಿಂದೂ ಮಹಾಸಭಾ ಹಾಗೂ ಡಾ. ಅಂಬೇಡ್ಕರ್ ಸಂಘಟಿತ ಅಖಿಲ ಭಾರತ ಪರಿಶಿಷ್ಟ ಜಾತಿಗಳ ಒಕ್ಕೂಟದ ಅಭ್ಯರ್ಥಿಗಳು ಸ್ಪರ್ಧಿಸಿದರು. ಆದರೆ ಕೆಲವು ಪ್ರತಿಗಾಮಿ ಶಕ್ತಿಗಳ ತಂತ್ರ-ಕುತಂತ್ರದೆದುರು ಅಂಬೇಡ್ಕರ್ ಎಂಬ ಮೂಕನಾಯಕರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಪರಾಜಯಗೊಳ್ಳಬೇಕಾಯಿತು. ಇದು ತನ್ನದೇ ಆದ ವಿಭಿನ್ನ ಆಲೋಚನೆಗಳ ಮೂಲಕ ಸಂವಿಧಾನ ರೂಪಿಸಲು ಹೊರಟಿದ್ದ ಒಬ್ಬ ರಾಜಕೀಯ ಪ್ರಬುದ್ಧರನ್ನು ಈ ರೀತಿ ವಾಮಮಾರ್ಗದ ಮೂಲಕ ಸೋಲಿಸಬೇಕಾದ ಅನಿವಾರ್ಯತೆಗೆ ಯಾರು ಹೊಣೆ? ಬಾಬಾಸಾಹೇಬರು ದುಂಡುಮೇಜಿನ ಸಭೆಯಲ್ಲಿ ಹೋರಾಟ ಮಾಡಿ ತಂದಿದ್ದ ದಲಿತರಿಗೆ ಪ್ರತ್ಯೇಕ ಪ್ರಾತಿನಿಧ್ಯದ ಹಕ್ಕಿನ ವಿರುದ್ಧ ಗಾಂಧಿ ಮಹಾತ್ಮ(?)ರು ನಡೆಸಿದ ಪ್ರತಿಗಾಮಿತನದ ಮುಂದುವರಿದ ಭಾಗ ಇದಲ್ಲವೇ...?!
ನಂತರ ಪೂರ್ವ ಬಂಗಾಳ ಪ್ರಾಂತದಿಂದ ಚುನಾಯಿತರಾಗಿದ್ದ ಮುಸ್ಲಿಮ್ ಲೀಗ್ ಬೆಂಬಲಿತ ದಲಿತ ನಾಯಕರಾದ ಜೋಗೇಂದ್ರನಾಥ ಮಂಡಲ್ ಅವರು ರಾಜೀನಾಮೆ ನೀಡಿ ಆ ಸ್ಥಾನದಿಂದ ಸಂವಿಧಾನ ರಚನಾ ಸಭೆಗೆ ಅಂಬೇಡ್ಕರ್ ಅವರು ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದರು. ಆದರೆ ಅಂಬೇಡ್ಕರ್ ಅವರ ವಿರೋಧಿ ಶಕ್ತಿಗಳು ಸುಮ್ಮನೆ ಕೂರಲಿಲ್ಲ. ಅವರು ಪ್ರತಿನಿಧಿಸಿದ್ದ ಪೂರ್ವ ಬಂಗಾಳ ಪ್ರಾಂತವನ್ನು ದೇಶವಿಭಜನೆಯಿಂದಾಗಿ ಪಾಕಿಸ್ತಾನಕ್ಕೆ ಸೇರಿಸುವಲ್ಲಿ ಯತ್ನಿಸಿ ಸಫಲರಾದರು. ತನ್ನ ಸಮುದಾಯದ ವಿಮೋಚನೆ ಹಾಗೂ ದೇಶವಾಸಿಗಳ ಹಿತಕಾಯುವಲ್ಲಿ ಕಂಕಣಬದ್ಧರಾಗಿದ್ದ ಅಂಬೇಡ್ಕರ್‌ರವರು ರಾಜೀನಾಮೆ ನೀಡಿ ಸಂವಿಧಾನ ರಚನಾ ಸಭೆಯಿಂದ ಹೊರಗುಳಿಯಬೇಕಾಯಿತು. ವಿಶ್ವಜ್ಞಾನಿಯೊಬ್ಬರ ಅನುಪಸ್ಥಿತಿಯಿಂದ ರಚನೆಗೊಳ್ಳುವ ಸಂವಿಧಾನವನ್ನು ಕಲ್ಪಿಸಿಕೊಂಡ ಬ್ರಿಟಿಷರ ಕಟ್ಟಪ್ಪಣೆಯಿಂದಾಗಿ ಅಂಬೇಡ್ಕರ್ ಅವರನ್ನು ಅವರ ವಿರೋಧಿಗಳು ಒಲ್ಲದ ಮನಸ್ಸಿನಿಂದ ಸಂವಿಧಾನ ರಚನಾ ಸಭೆಗೆ ಸ್ವಾಗತಿಸಬೇಕಾಯಿತು.
ಇಂತಹ ಒಂದು ಸಂಘರ್ಷದ ಹಾದಿ ಕ್ರಮಿಸಿ ಬಂದ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯ ಪ್ರತಿಯೊಂದು ಸಭೆಯಲ್ಲೂ ಸಕ್ರಿಯವಾಗಿ ಭಾಗವಹಿಸಿ ಚರ್ಚಿಸುತ್ತಿದ್ದರು. ಈ ಸಭೆಯಲ್ಲಿ ಅಂಬೇಡ್ಕರ್ ಸಹಿತವಾಗಿ ಪಂಡಿತ್ ಜವಾಹರ್‌ಲಾಲ್ ನೆಹರೂ, ಡಾ. ಬಾಬು ರಾಜೇಂದ್ರ ಪ್ರಸಾದ್, ಮೌಲಾನ ಅಬ್ದುಲ್ ಕಲಾಂ ಆಝಾದ್, ಶ್ಯಾಮ್ ಪ್ರಸಾದ್ ಮುಖರ್ಜಿಯವರಂತಹ ಪ್ರಮುಖರ ಜೊತೆಗೆ ಆಂಗ್ಲೋ-ಇಂಡಿಯನ್ ಸಮುದಾಯದ ಪ್ರತಿನಿಧಿಯಾಗಿ ಫ್ರಾಂಕ್ ಆಂಟನಿ, ಪಾರ್ಸಿ ಜನರ ಪ್ರತಿನಿಧಿಯಾಗಿ ಎಚ್.ಪಿ.ಮೋದಿ, ಭಾರತೀಯ ಕ್ರೈಸ್ತರ ಪ್ರತಿನಿಧಿಯಾಗಿ ಹರೇಂದ್ರಕುಮಾರ್ ಮುಖರ್ಜಿ, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಬಿ.ಎನ್.ರಾವ್, ಕೆ.ಎಂ.ಮುನ್ಶಿ, ಮಹಿಳಾ ಪ್ರತಿನಿಧಿಗಳಾಗಿ ಸರೋಜಿನಿ ನಾಯ್ಡು ಮತ್ತು ವಿಜಯಲಕ್ಷ್ಮೀ ಪಂಡಿತ್ ಸೇರಿದಂತೆ ಅನೇಕ ಸದಸ್ಯರಿದ್ದರು. ಜೊತೆಗೆ ಮೀಸಲು ಕ್ಷೇತ್ರಗಳಲ್ಲಿ ವಿಜೇತರಾಗಿದ್ದ 30ಕ್ಕೂ ಹೆಚ್ಚು ನಿಮ್ನವರ್ಗದ ಪ್ರತಿನಿಧಿಗಳೂ ಸಹ ಇದ್ದರು. ರಚನಾ ಸಭೆಯ ತಾತ್ಕಾಲಿಕ ಅಧ್ಯಕ್ಷರಾಗಿ ಡಾ. ಸಚ್ಚಿದಾನಂದ ಸಿನ್ಹಾ ಅವರು ಮೊದಲು ಅಧ್ಯಕ್ಷರಾಗಿದ್ದರು. ನಂತರ ಶಾಶ್ವತ ಅಧ್ಯಕ್ಷತೆಯನ್ನು ಡಾ. ಬಾಬು ರಾಜೇಂದ್ರ ಪ್ರಸಾದ್ ಅವರು ವಹಿಸಿಕೊಂಡರು. 1946ರ ಡಿಸೆಂಬರ್ 9ರಂದು ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನ ನಡೆಯಿತು. 1947ರ ಆಗಸ್ಟ್ 29ರಂದು ಸಂವಿಧಾನ ಕರಡು ಸಮಿತಿಯೊಂದನ್ನು ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು. ಇವರ ಜೊತೆಗೆ ಪಂಡಿತ್ ವಲ್ಲಭ ಪಂತ್, ಕೆ.ಎಂ.ಮುನ್ಶಿ, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಎನ್.ಗೋಪಾಲಸ್ವಾಮಿ ಅಯ್ಯಂಗಾರ್, ಬಿ.ಎನ್.ಮಿತ್ತಲ್, ಮುಹಮ್ಮದ್ ಸಾದುಲ್ಲಾ ಮತ್ತು ಡಿ.ಪಿ.ಖೈತನ್ ಅವರನ್ನು ಸದಸ್ಯರಾಗಿ ಆಯ್ಕೆಮಾಡಲಾಯಿತು. ಬಿ.ಎನ್.ರಾವ್ ಅವರನ್ನು ಸಂವಿಧಾನಾತ್ಮಕ ಸಲಹೆಗಾರರನ್ನಾಗಿ ನೇಮಿಸಲಾಯಿತು. ನಂತರದ ದಿನಗಳಲ್ಲಿ ಒಬ್ಬ ಸದಸ್ಯರ ರಾಜೀನಾಮೆ, ಮತ್ತೊಬ್ಬ ಸದಸ್ಯರ ನಿಧನ, ಇನ್ನೊಬ್ಬರ ವಿದೇಶ ಪ್ರವಾಸ ಹಾಗೂ ಉಳಿದವರ ಗೈರುಹಾಜರಿಯಲ್ಲಿ ಅಂಬೇಡ್ಕರ್ ಅವರು ಸಿದ್ಧಪಡಿಸಿದ ಕರಡು ಪ್ರತಿಯಲ್ಲಿನ ಕೆಲವು ಅಂಶಗಳನ್ನು ಪರಿಷ್ಕರಿಸಿ, 2000 ತಿದ್ದುಪಡಿಗಳ ನಂತರ ಅಂತಿಮವಾಗಿ 1949ರ ನವೆಂಬರ್ 26ರಂದು ಕರಡು ಸಂವಿಧಾನಕ್ಕೆ ಸಮಿತಿ ಸದಸ್ಯರುಗಳ ಒಪ್ಪಿಗೆ ದೊರೆಯಿತು. 2 ವರ್ಷ, 11 ತಿಂಗಳು 18 ದಿನಗಳ ಕಾಲ ಸತತ ಪರಿಶ್ರಮದಿಂದ ಅಂಬೇಡ್ಕರ್ ರಚಿಸಿದ ಕರಡು ಪ್ರತಿಗೆ ಒಟ್ಟು 166 ದಿನಗಳ ಅಧಿವೇಶನದಲ್ಲಿ ಅಂಗೀಕಾರ ದೊರೆಯಿತು. ಪ್ರತಿಯೊಂದು ಅಧಿವೇಶನದಲ್ಲಿಯೂ ಸಂವಿಧಾನದ ಕರಡು ಪ್ರತಿಯ ಪ್ರತಿಯೊಂದು ಪದಗಳ ಕುರಿತು ಸುದೀರ್ಘ, ವಿವರಣಾತ್ಮಕ ಭಾಷಣದ ಮೂಲಕ ಸ್ಪಷ್ಟೀಕರಣ ನೀಡಿದ ಬಾಬಾಸಾಹೇಬರ ಪಾಂಡಿತ್ಯವನ್ನು ಮೆಚ್ಚಿಯೇ ಅವರನ್ನು ವಿಶ್ವದ ಬುದ್ಧಿವಂತರ ಸಾಲಿನಲ್ಲಿ ಪ್ರಥಮ ಸ್ಥಾನ ನೀಡಲಾಗಿದೆ.
ಸಂವಿಧಾನ ಕರಡು ಪ್ರತಿಯ ಎಲ್ಲಾ ಅಂಶಗಳನ್ನು ಭಾರತದ ಸಂವಿಧಾನವಾಗಿ ಸಿದ್ಧಪಡಿಸಿದ ಹಿಂದಿ ಮತ್ತು ಇಂಗ್ಲಿಷ್ ಆವೃತ್ತಿಯ 2 ಪ್ರತಿಗಳನ್ನು ರಚನಾ ಸಭೆಯ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್, ನೆಹರೂ, ವಲ್ಲಭಬಾಯ್ ಪಟೇಲ್ ಅವರು ಸಂವಿಧಾನ ಶಿಲ್ಪಿಗಳಿಂದ ಸ್ವೀಕರಿಸಿ ದೇಶದ ಸಂವಿಧಾನವನ್ನಾಗಿ ಅಳವಡಿಸಿಕೊಳ್ಳಲಾಯಿತು. 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಪಡೆದು ಸಾರ್ವಭೌಮ ರಾಷ್ಟ್ರವಾದ ಭಾರತವು 1950ರ ಜನವರಿ 26ರಂದು ಪ್ರಜಾಸತ್ತಾತ್ಮಕ ಗಣತಂತ್ರ ರಾಷ್ಟ್ರವಾಯಿತು. ಆದ್ದರಿಂದ ಈ ದಿನವನ್ನು ‘ಗಣರಾಜ್ಯ ದಿನ’ವನ್ನಾಗಿ ಆಚರಿಸುವ ಬದಲು ‘ಸಂವಿಧಾನ ದಿನ’ವನ್ನಾಗಿ ಆಚರಿಸುವುದು ಹೆಚ್ಚು ಅರ್ಥಪೂರ್ಣವಾಗಿದೆ. ಏಕೆಂದರೆ, ಗಣರಾಜ್ಯ ಎಂಬುದು ಭಾರತ ಸಂವಿಧಾನದ ಒಂದು ಭಾಗವಷ್ಟೇ ಆಗಿದೆ. ಗಣರಾಜ್ಯವೆಂಬ ಅಂಶವು ಸೇರಿದಂತೆ ಹಲವಾರು ಆಡಳಿತ ಸೂತ್ರದ ಸಮಷ್ಟಿಪ್ರಜ್ಞೆಯ ಸಂಕೇತವಾದ ಸಂವಿಧಾನವು ಜಾರಿಗೆ ಬಂದ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸಿ, ಈ ದೇಶದ ಪ್ರಜೆಗಳಾದ ನಾವು ಸಂವಿಧಾನದ ಅರಿವು ಪಡೆಯಬೇಕಾಗಿದೆ. ಸಂವಿಧಾನವನ್ನು ಜಾರಿಗೊಳಿಸಿ 65 ವರ್ಷಗಳು ಕಳೆದು, 66ನೆ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಾವು ಸಂವಿಧಾನದ ಕುರಿತು ಪುನರಾವಲೋಕನ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂವಿಧಾನದ ಆಶಯಗಳು ಯಶಸ್ವಿಯಾಗಿ ಈಡೇರಿದೆಯೇ ಎಂದು ನಾವು ಚಿಂತಿಸಬೇಕಾಗಿದೆ. ವಿಪರ್ಯಾಸದ ಸಂಗತಿಯೆಂದರೆ ಸಂವಿಧಾನದ ಮೂಲ ಪ್ರಸ್ತಾವನೆಯ ಆಶಯಗಳೇ ಇನ್ನೂ ಸಹ ಪ್ರಜೆಗಳಾದ ನಮಗೆ, ನಮ್ಮ ಪ್ರತಿನಿಧಿಗಳಾದ ರಾಜಕಾರಣಿಗಳಿಗೆ, ಸಂವಿಧಾನವನ್ನು ಕಾವಲು ಕಾಯಬೇಕಾದ ನ್ಯಾಯಾಂಗಕ್ಕೆ ಅರ್ಥವಾಗಿಲ್ಲವೆಂದರೆ ಅದು ಹೇಗೆ ಈಡೇರಲು ಸಾಧ್ಯ? ‘‘ಭಾರತವೆಂಬ ಸಾರ್ವಭೌಮ, ಸಮಾಜವಾದಿ, ಸರ್ವ ಧರ್ಮ ಸಮಭಾವ, ಪ್ರಜಾಸತ್ತಾತ್ಮಕ, ಗಣರಾಜ್ಯದ ಪ್ರಜೆಗಳಾದ ನಾವು...’’ ಎಂಬ ವಾಕ್ಯದೊಂದಿಗೆ ಸಂವಿಧಾನದ ಪುಟಗಳು ಮುಂದುವರಿಯುತ್ತದೆ. ಇಂದು ಭಾರತವು ಆಂತರಿಕವಾಗಿ ಮತ್ತು ಬಾಹ್ಯವಾಗಿ ಬೇರೊಂದು ರಾಷ್ಟ್ರದ ಹಿಡಿತದಲ್ಲಿರದೆ ಸಾರ್ವಭೌಮ ರಾಷ್ಟ್ರವಾಗಿದೆ. ಪ್ರಜಾಪ್ರಭುತ್ವವನ್ನು ಮಾನ್ಯಮಾಡಿರುವ ನಮ್ಮ ದೇಶದಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬ ಪ್ರಜೆಯೂ ಯಾವುದೇ ಧರ್ಮ, ಜಾತಿ, ಭಾಷೆ, ಪ್ರಾಂತ, ಲಿಂಗ ಮತ್ತು ಶಿಕ್ಷಣ ಮಟ್ಟದ ಭೇದವಿಲ್ಲದೆ ಮತದಾನ ಮಾಡುವ ಹಕ್ಕನ್ನು ಪಡೆದಿದ್ದಾರೆ. ದೇಶದ ಆಡಳಿತವನ್ನು ವಂಶಪಾರಂಪರ್ಯವನ್ನಾಗಿಸದೇ ನಮ್ಮಿಂದಲೇ ಆಯ್ಕೆಯಾದ ನಮ್ಮ ಪ್ರತಿನಿಧಿಗಳು ನಡೆಸುವ ವ್ಯವಸ್ಥೆಯೇ ಗಣತಂತ್ರವಾಗಿದೆ.
ಇಲ್ಲಿ ಗಮನಾರ್ಹ ಅಂಶವೆಂದರೆ, ಪ್ರಜಾಪ್ರಭುತ್ವ ದೇಶದ ಪ್ರಜೆಗಳು ಪಡೆದಿರುವ ‘ಒಂದು ಮತ-ಒಂದು ಮೌಲ್ಯ’ ಎಂಬ ತತ್ವವು ಯಶಸ್ವಿಯಾಗಿದೆಯೇ? ಇಂದಿಗೂ ಸಾರ್ವತ್ರಿಕ ಚುನಾವಣೆಯಲ್ಲಿ ಶೇ. 100ರಷ್ಟು ಮತದಾನವಾದ ದಾಖಲೆಗಳಿವೆಯೇ? ಎಷ್ಟೋ ಪ್ರಜೆಗಳು ಮತದಾರರ ಪಟ್ಟಿಯಲ್ಲಿ ಸ್ಥಾನವಂಚಿತರಾಗಿರುವುದು ಚುನಾವಣಾ ಆಯೋಗವನ್ನೇ ಅಣಕಿಸುವಂತಿದೆ. 18 ವರ್ಷ ತುಂಬಿದಾಕ್ಷಣ ಆಯಾಯ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಯವರಿಂದ ಅರ್ಜಿ ಪಡೆದು ಭರ್ತಿಮಾಡಿ ಮತದಾನಕ್ಕೆ ನೋಂದಾಯಿಸಿಕೊಳ್ಳುವಂತೆ ಮನವಿ ಸಲ್ಲಿಸಿದರೂ ಆ ಹೆಸರುಗಳು ಮತದಾರ ಪಟ್ಟಿಯಲ್ಲಿರುವುದಿಲ್ಲ ಅಥವಾ ಇದ್ದರೂ ವಾಸವಿರುವ ಸ್ಥಳದಿಂದ ದೂರ ಸರಿದಿರುತ್ತದೆ. ಹಾಗಾದರೆ ಭಾರತದ ಪ್ರಜೆ ಹೇಗೆ ಮತ ಚಲಾಯಿಸಬೇಕು? ಚಿಂತಿಸಿ...
ಇನ್ನು 1976ರ 42ನೆ ತಿದ್ದುಪಡಿಯ ಮೂಲಕ ಸೇರ್ಪಡೆಯಾದ ಸಮಾಜವಾದಿ ಎಂಬುದರ ಆಶಯ ಸಫಲಗೊಂಡಿದೆಯೇ? ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ದೃಷ್ಟಿಯಿಂದ ಮೂಲಭೂತ ಹಕ್ಕಿನಲ್ಲೇ ದಾಖಲಾಗಿದ್ದರೂ ಇನ್ನೂ ಯಶಸ್ವಿಯಾಗಿಲ್ಲ. ಜಾತಿ, ಧರ್ಮ, ಲಿಂಗ, ಪ್ರಾಂತಗಳ ಭೇದವೆಣಿಸಬಾರದ ಭಾರತದಲ್ಲಿ ಇಂದು ನಡೆಯುತ್ತಿರುವುದೇನು? ಅಸ್ಪಶ್ಯತೆ ಆಚರಣೆ ಕಾನೂನುಬಾಹಿರವಾಗಿದ್ದರೂ ಕಡಿಮೆಯಾಗಿದೆಯೇ ಹೊರತು ಸಂಪೂರ್ಣವಾಗಿ ನಾಶವಾಗಿಲ್ಲ.
ಸಮಾಜವಾದದ ಮತ್ತೊಂದು ಅಂಶವೆಂದರೆ ಆರ್ಥಿಕ ಸಮಾನತೆ. ಇಂದು ಭಾರತ ಅತಿ ಹೆಚ್ಚು ಬಡಜನರಿಂದ ಕೂಡಿದ ಒಂದು ಶ್ರೀಮಂತ ರಾಷ್ಟ್ರವಾಗಿದೆ! ಅಂದರೆ ಭಾರತದಲ್ಲಿ ಏನಿಲ್ಲಾ? ಎಲ್ಲವೂ ಇದೆ. ಆದರೆ ಅದು ಎಲ್ಲರಿಗೂ ಸಮನಾಗಿ ಹಂಚಿಕೆಯಾಗಿಲ್ಲ. ಶೇ. 15ರಷ್ಟಿರುವ ಮೇಲ್ವರ್ಗಗಳಲ್ಲಿ ಶೇ. 85ರಷ್ಟು ಸಂಪನ್ಮೂಲ ಸಂಚಯಗೊಂಡಿದೆ. ಶೇ. 85ರಷ್ಟಿರುವ ಶ್ರಮಿಕ ವರ್ಗಗಳು ಶೇ. 15ರಷ್ಟು ಆಸ್ತಿಯನ್ನೇ ತಮ್ಮ ಪಾಲಿಗೆ ಬಂದದ್ದೆ ಪಂಚಾಮೃತವೆಂದು ಭಾವಿಸಿ ಸ್ವೀಕರಿಸಿವೆ. ಇದಕ್ಕೆಲ್ಲ ಮೂಲ ಕಾರಣವೇ ಸಂವಿಧಾನದ ಬಗ್ಗೆ ಜನರಲ್ಲಿರುವ ಅರಿವಿನ ಕೊರತೆ. ಸಂವಿಧಾನವು ‘ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು’ ಎಂಬ ತತ್ವವನ್ನು ಒಳಗೊಂಡಿದ್ದು, ಇದನ್ನು ತಿಳಿದುಕೊಂಡಾಗ ಮಾತ್ರ ಇದರ ಆಶಯ ಈಡೇರಲು ಸಾಧ್ಯ.
ಇದರ ಜೊತೆಗೆ ಸಂವಿಧಾನದ ಪ್ರಸ್ತಾವನೆಗೆ ಸೇರ್ಪಡೆಯಾದ ಮತ್ತೊಂದು ಅಂಶವೆಂದರೆ, ಅದು ಸೆಕ್ಯುಲರ್ ಎಂಬ ಪದ. ಇದನ್ನು ನಾವು ಅರ್ಥೈಸಿಕೊಂಡಿರುವುದರಲ್ಲೇ ನಮ್ಮ ಮೌಢ್ಯತೆ ಎಷ್ಟಿದೆ ಎಂದು ಗೊತ್ತಾಗುತ್ತದೆ. ಭಾರತದ ಮಟ್ಟಿಗೆ ಪರಿಭಾವಿಸುವುದಾದರೆ ಈ ಪದವನ್ನು ‘ಸರ್ವಧರ್ಮ ಸಮಭಾವ’ ಎಂದು ವ್ಯಾಖ್ಯಾನಿಸಬಹುದು. ಭಾರತವು ಏಕ ಧರ್ಮದ, ಏಕ ಸಂಸ್ಕೃತಿಯ ಭೂಮಿಯಲ್ಲ; ಇದು ಸರ್ವಜನಾಂಗದ ಶಾಂತಿಯ ಉದ್ಯಾನವಾಗಿದೆ. ಇಲ್ಲಿ ದೇಶವನ್ನಾಳುವ ಶಾಸಕಾಂಗ-ಕಾರ್ಯಾಂಗವಾಗಲಿ, ನ್ಯಾಯಾಂಗವಾಗಲಿ ಒಂದು ಧರ್ಮದ ಅವಲಂಬಿಗಳಾಗಬಾರದು. ಜನರ ಧರ್ಮಾಚರಣೆಗಳು ಅವರ ಮನೆ ಮತ್ತು ಗುಡಿ-ಮಸೀದಿ-ಚರ್ಚು-ವಿಹಾರ- ಬಸದಿ-ಗುರುದ್ವಾರಗಳಿಗೆ ಸೀಮಿತವಾಗಿರಬೇಕು. ಸರಕಾರದ ಕಚೇರಿಗಳಲ್ಲಾಗಲಿ, ಸರಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳಲ್ಲಾಗಲಿ ಒಂದು ಧರ್ಮದ ಕುರಿತು ಯಾವುದೇ ಪ್ರಚಾರ, ಆಚರಣೆ ನಡೆಯಕೂಡದು. ಆದರೆ ಇಂದಿನ ಶಾಲೆ ಮತ್ತು ಕಚೇರಿಗಳನ್ನು ನೋಡಿದರೆ ಸೆಕ್ಯುಲರ್‌ತತ್ವಕ್ಕೆ ತದ್ವಿರುದ್ಧವಾಗಿವೆ. ಮನೆಯೆಂಬ ಸ್ವಧರ್ಮದ ಗೂಡಿನಿಂದ ಹೊರಬಂದ ಮಗುವಿಗೆ ವಿಶ್ವಮಾನವನಾಗಲು ಶಾಲೆಯೇ ಪ್ರಯೋಗಾಲಯ. ದೇಶದ ಭಾವಿಪ್ರಜೆಗಳಾದ ಮಕ್ಕಳಿಗೆ ಸಂವಿಧಾನದ ಪ್ರಸ್ತಾವನೆಯನ್ನು ತೋರಿಸಿ, ಸರ್ವಧರ್ಮ ಸಮಭಾವದ ತತ್ವವನ್ನು ತಿಳಿಸಿಕೊಡಬೇಕಾದ ಶಾಲೆಗಳಲ್ಲಿರುವ ವೈದಿಕ ದೇವತೆಗಳ ಚಿತ್ರಪಟ ಹಾಗೂ ಪ್ರತಿ ಶುಕ್ರವಾರ ನಡೆಯುವ ಸರಸ್ವತಿ ಪೂಜೆಗಳು ಹೇಗೆತಾನೆ ವೈಚಾರಿಕತೆ ಬೆಳೆಸುತ್ತದೆ...?! ಬ್ಯಾಂಕುಗಳು ಹಾಗೂ ಸರಕಾರಿ ಕಚೇರಿಗಳಲ್ಲಿ ಪ್ರತಿ ಶುಕ್ರವಾರ ನಡೆಯುವ ಲಕ್ಷ್ಮೀಪೂಜೆಯು ಸಂವಿಧಾನದ ಸರ್ವಧರ್ಮ ಸಮಭಾವದ ಆಶಯವನ್ನು ಹೇಗೆ ಈಡೇರಿಸುತ್ತದೆ...?! ಭಾರತದ ಇಂದಿನ ಸಮಸ್ಯೆಗಳಿಗೆಲ್ಲಾ ಸಂವಿಧಾನದಲ್ಲಿ ಪರಿಹಾರವಿದೆ. ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರು ಇಂದು ನಮಗೆ ಕೊಟ್ಟಿರುವ ಸಂವಿಧಾನದ ಹಿಂದೆ ಒಂದು ಸಂಘರ್ಷದ ಇತಿಹಾಸವಿದೆ. ಯಾವುದನ್ನಾದರೂ ಸರಿ ಶ್ರಮಪಟ್ಟು ಸಂಪಾದಿಸಿದರೆ ಮಾತ್ರ ಅದರಿಂದ ಸುಖ ದೊರೆಯುವುದು. ಅಂಬೇಡ್ಕರ್ ಅವರು ಶ್ರಮಪಟ್ಟು ರಚಿಸಿಕೊಟ್ಟಿರುವ ಸಂವಿಧಾನದಲ್ಲಿ ದೇಶದ ಸರ್ವಜನರ ಹಿತ; ಸರ್ವಜನರ ಸುಖ ಅಡಗಿದೆ. ನಮಗೆಲ್ಲಾ ಸಂವಿಧಾನದಿಂದಲೇ ಬದುಕುವ ಹಕ್ಕು, ಶಿಕ್ಷಣ, ಉದ್ಯೋಗ ಪಡೆಯುವ ಹಕ್ಕು, ಆಸ್ತಿ ಸಂಪಾದಿಸುವ ಹಕ್ಕು, ನಮಗೆ ಒಪ್ಪಿಗೆಯಾದ ಧರ್ಮವನ್ನು ಪಾಲಿಸುವ ಹಕ್ಕು ಎಲ್ಲವೂ ದೊರೆತಿರುವುದರಿಂದ ಇಂದಿನ ಪ್ರತಿಗಾಮಿ ಸಂದರ್ಭದಲ್ಲಿ ಸಂವಿಧಾನವನ್ನು ನಾವು ರಕ್ಷಿಸಿದರೆ ಮಾತ್ರ ನಮ್ಮನ್ನು ಸಂವಿಧಾನ ರಕ್ಷಿಸುತ್ತದೆ ಅಲ್ಲವೇ...!