ದಕ್ಷಿಣ ಆಫ್ರಿಕದ ಗುಲಾಮ್ ಬೋಡಿಗೆ 20 ವರ್ಷ ನಿಷೇಧ

ಮ್ಯಾಚ್ ಫಿಕ್ಸಿಂಗ್ ಆರೋಪ
ಸೆಂಚೂರಿಯನ್, ಜ.25: ಮ್ಯಾಚ್ ಫಿಕ್ಸಿಂಗ್‌ಗೆ ಯತ್ನಿಸಿದ ಆರೋಪದಲ್ಲಿ ದಕ್ಷಿಣ ಆಫ್ರಿಕದ ಮಾಜಿ ದಾಂಡಿಗ ಗುಲಾಮ್ ಬೋಡಿಗೆ ದ.ಆಫ್ರಿಕ ಕ್ರಿಕೆಟ್ ಮಂಡಳಿ ಯಾವುದೇ ಅಂತಾರಾಷ್ಟ್ರೀಯ ಇಲ್ಲವೇ ದೇಶೀಯ ಕ್ರಿಕೆಟ್ ಪಂದ್ಯಗಳಲ್ಲಿ ಆಡದಂತೆ 20 ವರ್ಷಗಳ ಕಾಲ ನಿಷೇಧ ಹೇರಿದೆ.
ಕ್ರಿಕೆಟ್ ದಕ್ಷಿಣ ಆಫ್ರಿಕದ ಮುಖ್ಯ ಕಾರ್ಯಾಧ್ಯಕ್ಷ ಹರೂನ್ ಲಾರ್ಗಟ್ ಸೋಮವಾರ ಕಳಂಕಿತ ಬೋಡಿಗೆ ಶಿಕ್ಷೆ ಪ್ರಕಟಿಸಿದರು.
‘‘ಬೋಡಿ ಕಳೆದ ವರ್ಷ ದಕ್ಷಿಣ ಆಫ್ರಿಕದ ದೇಶೀಯ ಕ್ರಿಕೆಟ್ ಟ್ವೆಂಟಿ-20 ಟೂರ್ನಿಯ ವೇಳೆ ಪಂದ್ಯವನ್ನು ಫಿಕ್ಸ್ ಮಾಡಲು ಯೋಜನೆ ರೂಪಿಸಿದ್ದರು ಎಂದು ದಕ್ಷಿಣ ಆಫ್ರಿಕದ ಭ್ರಷ್ಟಾಚಾರ ವಿರೋಧಿ ಘಟಕ ನಡೆಸಿರುವ ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ. ಆದರೆ, ತನಿಖೆ ಅಪೂರ್ಣವಾಗಿದ್ದು, ತನಿಖೆ ಮುಗಿಯಲು ಇನ್ನೂ ಕೆಲವು ಸಮಯ ಬೇಕಾಗಬಹುದು. ಅಲ್ಲಿಯ ತನಕ ಬೋಡಿ ಯಾವುದೇ ಕ್ರಿಕೆಟ್ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ’’ ಎಂದು ಲಾರ್ಗಟ್ ತಿಳಿಸಿದ್ದಾರೆ.
ಬೋಡಿ ದಕ್ಷಿಣ ಆಫ್ರಿಕದ ಪರ ಎರಡು ಏಕದಿನ ಅಂತಾರಾಷ್ಟ್ರೀಯ ಪಂದ್ಯ ಹಾಗೂ ಒಂದು ಟ್ವೆಂಟಿ-20 ಪಂದ್ಯ ಆಡಿದ್ದಾರೆ.





