ಸಾನಿಯಾ, ಸೈನಾಗೆ ಪದ್ಮಭೂಷಣ, ದೀಪಿಕಾರಿಗೆ ಪದ್ಮ ಶ್ರೀ

ಕ್ರೀಡಾಳುಗಳಿಗೆ ಪದ್ಮ ಪ್ರಶಸ್ತಿ: ಮಹಿಳೆಯರ ಮೇಲುಗೈ
ಹೊಸದಿಲ್ಲಿ, ಜ.25: ಈ ವರ್ಷ ಕ್ರೀಡಾಳುಗಳಿಗೆ ನೀಡಲಾಗಿರುವ ಪದ್ಮ ಪ್ರಶಸ್ತಿಯಲ್ಲಿ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ. ಟೆನಿಸ್ ತಾರೆ ಸಾನಿಯಾ ಮಿರ್ಝಾ, ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾದರು. ಆರ್ಚರಿ ಆಟಗಾರ್ತಿ ದೀಪಿಕಾ ಕುಮಾರಿ ಪದ್ಮ ಶ್ರೀ ಪ್ರಶಸ್ತಿಗೆ ಆಯ್ಕೆಯಾದರು.
ಸಾನಿಯಾ, ಸೈನಾ ಹಾಗೂ ದೀಪಿಕಾ ಕಳೆದ ವರ್ಷ ಕ್ರೀಡಾಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದರು.
2015ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಸಾನಿಯಾ ಅವರು ಸ್ವಿಸ್‌ನ ಮಾರ್ಟಿನಾ ಹಿಂಗಿಸ್ ಜೊತೆಗೂಡಿ ಎರಡು ಗ್ರಾನ್‌ಸ್ಲಾಮ್ ಸಹಿತ ಒಟ್ಟು 9 ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಅಪೂರ್ವ ಸಾಧನೆಯ ಮೂಲಕ ಡಬ್ಲ್ಯುಟಿಎ ಡಬಲ್ಸ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನವನ್ನು ಗಳಿಸಿದ್ದರು.
29ರ ಹರೆಯದ ಸಾನಿಯಾ ಪ್ರಸ್ತುತ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸ್ಪರ್ಧಿಸುತ್ತಿದ್ದು, ಆ ಟೂರ್ನಿಯಲ್ಲಿ ಮಹಿಳೆಯರ ಡಬಲ್ಸ್‌ನಲ್ಲಿ ಹಿಂಗಿಸ್‌ರೊಂದಿಗೆ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಸೈನಾ ಕೂಡ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ ವರ್ಷ ಆಲ್ ಇಂಗ್ಲೆಂಡ್ ಹಾಗೂ ವರ್ಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದ ಸೈನಾ ಇಂಡಿಯಾ ಓಪನ್ ಸೂಪರ್ ಸರಣಿ ಹಾಗೂ ಸೈಯದ್ ಮೋದಿ ಗ್ರಾನ್ ಪ್ರಿ ಗೋಲ್ಡ್ ಟೂರ್ನಿಯನ್ನು ಗೆದ್ದುಕೊಂಡಿದ್ದರು.
ಮತ್ತೊಂದೆಡೆ, ಕೋಲ್ಕತಾದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಆರ್ಚರಿ ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಿ ಬೆಳ್ಳಿ ಪದಕ ಜಯಿಸಿದ್ದರು. ವಿಶ್ವಕಪ್ ಎರಡನೆ ಹಂತ ಹಾಗೂ ಏಷ್ಯನ್ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದರು.
ಈ ವಾರ ಭಾರತದಲ್ಲಿ ನಡೆಯುವ ಸೈಯದ್ ಮೋದಿ ಗ್ರಾನ್ ಪ್ರಿ ಗೋಲ್ಡ್ ಟೂರ್ನಿಯಲ್ಲಿ ಭಾಗವಹಿಸಲು ಸಜ್ಜಾಗುತ್ತಿರುವ ಸೈನಾ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
‘‘ಇದೊಂದು ಮಹಾ ಗೌರವ, ತನಗೆ ಈ ಪ್ರಶಸ್ತಿ ನೀಡುತ್ತಿರುವ ಸಚಿವಾಲಯಕ್ಕೆ ಕೃತಜ್ಞತೆ ಸಲ್ಲಿಸುವೆ. ಕಳೆದ ವರ್ಷ ನೀಡಿರುವ ಪ್ರದರ್ಶನ ತೃಪ್ತಿ ನೀಡಿದೆ. ಕಳೆದ ವರ್ಷ ನಾನು ವಿಶ್ವ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ತಲುಪಿದ್ದೇನೆ. ಇದೀಗ ಎರಡನೆ ಸ್ಥಾನದಲ್ಲಿದ್ದೇನೆ. ಈ ವರ್ಷ ಉತ್ತಮ ಪ್ರದರ್ಶನ ನೀಡಲು ಈ ಪ್ರಶಸ್ತಿ ಉತ್ತೇಜನ ನೀಡುವ ವಿಶ್ವಾಸ ನನಗಿದೆ’’ ಎಂದು ಸೈನಾ ಹೇಳಿದ್ದಾರೆ.







