ಮಂಗಳೂರು: ಅತ್ಯಾಚಾರ ಪ್ರಕರಣ ಆರೋಪ ಸಾಬೀತು
ಮಂಗಳೂರು: ಪುತ್ತೂರು ತಾಲೂಕಿನ ನರಿಮೊಗರು ಕಾಯರ್ ಮುಗೇರ್ ನಿವಾಸಿ ಶಶಿ ಯಾನೆ ಪರಮೇಶ್ವರ(33) ಎಂಬಾತನ ವಿರುದ್ಧ ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪ ಸಾಬೀತಾಗಿದೆ ಎಂದು ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಜ.27ರಂದು ವಾದ, ಪ್ರತಿವಾದ ನಡೆದ ನಂತರ ಆತನಿಗೆ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.
ಆರೋಪಿಗೆ ಸಹಕಾರ ನೀಡಿದ್ದ ಆರೋಪಿಯ ಚಿಕ್ಕಪ್ಪ ಕಾಣಿಯೂರು ಬೆದ್ರಾಜೆ ನಿವಾಸಿ ವಿಶ್ವನಾಥ (30) ಹಾಗೂ ಆರೋಪಿಯ ಸಹೋದರ ಮಹೇಶ್ (27) ಎಂಬವರ ಮೇಲಿನ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಇವರಿಬ್ಬರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಕಡಬ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಲಾರೆ ಎಂಬಲ್ಲಿ ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬಳನು ಆಕೆಯ ಇಚ್ಛೆಯ ವಿರುದ್ಧವಾಗಿ ವರ್ತಿಸಿ ದೈಹಿಕ ಸಂಪರ್ಕ ಬೆಳೆಸಿದ್ದ ಪರಮೇಶ್ವರ್ ಬಳಿಕ ಆಕೆಯನ್ನು ನಿರ್ಲಕ್ಷ್ಯಿಸಿದ್ದ ಎಂದು ಆರೋಪಿಸಲಾಗಿತ್ತು.ಈ ಕುರಿತಂತೆ ನೊಂದ ಯುವತಿ ತನಗಾದ ಅನ್ಯಾಯ ಹಾಗೂ ಅತ್ಯಾಚಾರದ ಕುರಿತಂತೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾೀಶರಾದ ಡಿ.ಟಿ.ಪುಟ್ಟರಂಗಸ್ವಾಮಿ ಆರೋಪ ಸಾಬೀತಾಗಿದೆ ಎಂದು ಇಂದು ತೀರ್ಪು ಪ್ರಕಟಿಸಿದರು.





