ಇನ್ವೆಸ್ಟ್ ಕರ್ನಾಟಕ-2016; 117 ಯೋಜನೆಗಳ ಪಟ್ಟಿ ಸಿದ್ಧ: ಸಚಿವ ಬೇಗ್

ಬೆಂಗಳೂರು, ಜ.25: ಬೆಂಗಳೂರಿನ ಅರಮನೆ ಆವರಣದಲ್ಲಿ ಫೆ.3 ರಿಂದ 5ರವರೆಗೆ ಆಯೋಜಿಸಿರುವ ಇನ್ವೆಸ್ಟ್ ಕರ್ನಾಟಕ-2016ದಲ್ಲಿ ಬಂಡವಾಳ ಹೂಡಿಕೆ ದಾರರಿಗೆ ಪ್ರದರ್ಶಿಸಲು ಒಂಬತ್ತು ವಲಯಗಳಲ್ಲಿ ಒಟ್ಟು 117 ಯೋಜನೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆರ್.ರೋಷನ್‌ಬೇಗ್ ತಿಳಿಸಿದ್ದಾರೆ.
ಈ ಪೈಕಿ 25ಕ್ಕೂ ಹೆಚ್ಚು ಯೋಜನೆಗಳು ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಮೂಲಸೌಲಭ್ಯಗಳನ್ನು ಬಲ ಪಡಿಸುವಂತದಾಗಿದೆ. ನಗರದಲ್ಲಿ ಸುಗಮ ವಾಹನ ಸಂಚಾರ, ಪಾರ್ಕಿಂಗ್ ವ್ಯವಸ್ಥೆ, ಪಾದಚಾರಿಗಳ ಸೌಕರ್ಯಕ್ಕಾಗಿ ಸ್ಕೈವಾಕ್ಸ್ ಇತ್ಯಾದಿ ಯೋಜನೆಗಳು ಪೂರಕವಾಗಿವೆ ಎಂದು ಅವರು ಹೇಳಿದ್ದಾರೆ.
ಈ ಪೈಕಿ ಲೈಟ್‌ರೈಲ್ ಟ್ರಾನ್ಸಿಟ್ ವ್ಯವಸ್ಥೆ, ಆರ್ ಎಲಿವೇಟೆಡ್ ಕಾರಿಡಾರ್‌ಗಳು, ಬಹುಮಹಡಿ ವಾಹನ ನಿಲ್ದಾಣಗಳು, 40 ಜನನಿಬಿಡ ರಸ್ತೆಗಳಲ್ಲಿ ಲಿಫ್ಟ್ ಸೌಕರ್ಯ ಒಳಗೊಂಡ ಸ್ಕೈವಾಕ್‌ಗಳು ಮತ್ತು ಸಾರ್ವಜನಿಕ ಶೌಚಾಲಯಗಳು ಮುಖ್ಯವಾಗಿವೆ ಎಂದು ರೋಷನ್‌ಬೇಗ್ ತಿಳಿಸಿದ್ದಾರೆ.
ಮುಖ್ಯ ಯೋಜನೆಗಳು: ದೇವನಹಳ್ಳಿ ಬಿಸಿನೆಸ್‌ಪಾರ್ಕ್, ಬೆಂಗಳೂರು ಅಂತಾ ರಾಷ್ಟ್ರೀಯ ಮಟ್ಟದ ಕನ್ವೆಂಷನ್ ಕೇಂದ್ರ, ಬೆಂಗಳೂರಿನ ಎರಡು ಕಾರಿಡಾರ್‌ಗಳಲ್ಲಿ ಲೈಟ್ ರೈಲ್ ಸಾರಿಗೆ ವ್ಯವಸ್ಥೆ (ಜೆಪಿ ನಗರದಿಂದ ಹೊರ ವರ್ತುಲ ರಸ್ತೆ ಮಾರ್ಗವಾಗಿ ಹೆಬ್ಬಾಳದವರೆಗೆ 31.30 ಕಿ.ಮೀ., ಮಾಗಡಿ ರಸ್ತೆಯ ಟೋಲ್ ಗೇಟ್‌ನಿಂದ ಫೆರಿಫೆರಲ್ ವರ್ತುಲ ರಸ್ತೆಯವರೆಗೆ 10.60 ಕಿ.ಮೀ.).
ನ್ಯಾಷನಲ್ ಇನ್ವೆಸ್ಟ್‌ಮೆಂಟ್ ಆ್ಯಂಡ್ ಮ್ಯಾನುಫ್ಯಾಕ್ಚರಿಂಗ್ ವಲಯಗಳು, ಶಿವಮೊಗ್ಗದಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ, ಬಾಗಲಕೋಟೆ, ಚಿಕ್ಕಮಗಳೂರು, ದಾವಣಗೆರೆ, ಗದಗ, ರಾಯಚೂರು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಏರ್‌ಸ್ಟ್ರಿಪ್‌ಗಳು, 18 ರಾಜ್ಯ ಹೆದ್ದಾರಿಯ ಭಾಗಗಳ ಅಭಿವೃದ್ಧಿ, ತದಡಿ, ಕಾರವಾರ, ಬೇಲೆಕೇರಿ ಮತ್ತು ಪಾವಿನಕುರ್ವೆ ಬಂದರುಗಳ ಅಭಿವೃದ್ಧಿ.
ಸಾರಿಗೆ ವಲಯದಲ್ಲಿ ಒಟ್ಟು 41 ಯೋಜನೆಗಳು (ಅಂದಾಜು ಯೋಜನಾ ವೆಚ್ಚ 29,391 ಕೋಟಿ ರೂ.), ನಗರ ಮತ್ತು ಮುನಿಸಿಪಲ್ ಮೂಲಸೌಲಭ್ಯ ವಲಯದಲ್ಲಿ 28 ಯೋಜನೆಗಳು (2028 ಕೋಟಿ ರೂ.), ಪ್ರವಾಸೋದ್ಯಮ ವಲಯದಲ್ಲಿ 20 ಯೋಜನೆಗಳು (1982 ಕೋಟಿ ರೂ.), ಕೃಷಿ ಮೂಲ ಸೌಲಭ್ಯ ವಲಯದಲ್ಲಿ 13 ಯೋಜನೆಗಳು (6739 ಕೋಟಿ ರೂ.).
ಕೈಗಾರಿಕಾ ಮೂಲಸೌಲಭ್ಯ ವಲಯದಲ್ಲಿ 7 ಯೋಜನೆಗಳು (31,043 ಕೋಟಿ ರೂ.), ಇಂಧನ ವಲಯದಲ್ಲಿ 4 ಯೋಜನೆಗಳು(10,520 ಕೋಟಿ ರೂ.), ಕೈಗಾರಿಕಾ ಮೂಲಸೌಲಭ್ಯ-ಮಾಹಿತಿ ತಂತ್ರಜ್ಞಾನ ಪಾರ್ಕ್ ವಲಯದಲ್ಲಿ 2 ಯೋಜನೆಗಳು (808 ಕೋಟಿ ರೂ.) ಹಾಗೂ ಆರೋಗ್ಯ ಮತ್ತು ದೂರ ಸಂಪರ್ಕ ವಲಯಗಳಲ್ಲಿ ತಲಾ ಒಂದು ಯೋಜನೆಗಳನ್ನು ಗುರುತಿಸಲಾಗಿದೆ.
117 ಯೋಜನೆಗಳ ಪೈಕಿ ಸುಮಾರು 5900 ಕೋಟಿ ರೂ.ಯೋಜನಾ ವೆಚ್ಚದ 17 ಯೋಜನೆಗಳ ಕಾರ್ಯಸಾಧ್ಯತಾ ವರದಿಗಳನ್ನು ತಯಾರಿಸಿದ್ದು, ಬಿಡ್ಡಿಂಗ್ ಹಂತದಲ್ಲಿವೆ. 11 ಯೋಜನೆಗಳ ಕಾರ್ಯಸಾಧ್ಯತಾ ವರದಿಗಳನ್ನು, 22 ಯೋಜನೆಗಳ ಪೂರ್ವ-ಕಾರ್ಯಸಾಧ್ಯತಾ ವರದಿಗಳನ್ನು ತಯಾರಿಸಲಾಗಿದೆ. ಉಳಿದ ಯೋಜನೆಗಳ ಕುರಿತು ಅಧ್ಯಯನ ಕಾರ್ಯವು ಪ್ರಗತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.
ಯೋಜನೆಗಳ ಕುರಿತು ಕಿರು ಪರಿಚಯದ ವಿವರಗಳು ಮೂಲಸೌಲಭ್ಯ ಇಲಾಖೆಯ ವೆಬ್‌ಸೈಟ್ ಡಿಡಿಡಿ.ಜಿಚ್ಟ್ಞಠಿ.ಜಟ.ಜ್ಞಿ ಹಾಗೂ ಇನ್ವೆಸ್ಟ್ ಕರ್ನಾಟಕ-2016ರ ವೆಬ್‌ಸೈಟ್ ಡಿಡಿಡಿ.ಜ್ಞಿಛಿಠಿಚ್ಟ್ಞಠಿ.್ಚಟ.ಜ್ಞಿಗಳಲ್ಲಿ ಲಭ್ಯವಿದೆ ಎಂದು ರೋಷನ್‌ಬೇಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





