ಪದ್ಮ ಪ್ರಶಸ್ತಿ: ಸಾಧಕರ ಜೊತೆಗೆ ಸಮಯ ಸಾಧಕರು
ಕೆಲವೊಮ್ಮೆ ಪ್ರಶಸ್ತಿಗಳನ್ನು ನೀಡುವ ಮೂಲಕವೇ ಸಾಧಕರನ್ನು ಅವಮಾನಿಸುವ ಕೆಲಸ ನಡೆಯುತ್ತದೆ. ಸರಕಾರಿ ಪ್ರಶಸ್ತಿಗಳನ್ನು ನೀಡುವ ಸಂದರ್ಭದಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿರುವ ಕಾಲದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಅದೆಷ್ಟು ಅಗ್ಗವಾಗಿತ್ತು ಎಂದರೆ, ನಿಜವಾದ ಸಾಧಕರು, ಎಲ್ಲಿ ನಮಗೆ ಈ ಪ್ರಶಸ್ತಿಯನ್ನು ನೀಡಿ ಅವಮಾನಿಸಿ ಬಿಡುತ್ತಾರೋ ಎಂದು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಈ ಪ್ರಶಸ್ತಿಯ ಸಂಖ್ಯೆಯನ್ನು ಇಳಿಸಿ, ಪಡೆಯುವವರ ವಯಸ್ಸಿನ ಮಿತಿಯನ್ನು ಏರಿಸಿರುವುದರಿಂದ ಪ್ರಶಸ್ತಿಗೆ ಒಂದಿಷ್ಟು ಹಿರಿತನ, ಘನತೆ ಬಂದಿದೆ. ಇದು ಕೇವಲ ರಾಜ್ಯೋತ್ಸವ ಪ್ರಶಸ್ತಿಗೆ ಮಾತ್ರ ಸೀಮಿತವಾಗಿಲ್ಲ.ಪದ್ಮಭೂಷಣ, ಪದ್ಮ ವಿಭೂಷಣ, ಪದ್ಮಶ್ರೀ, ಭಾರತರತ್ನ ಇವುಗಳು ಕೂಡ ಕೆಲವೊಮ್ಮೆ ಸಾಧಕರ ಮುಜುಗರಕ್ಕೆ ಕಾರಣವಾಗಿವೆ.ನಿಜವಾದ ಸಾಧಕರು ಬದಿಗೆ ಸರಿದು, ಸಮಯಸಾಧಕರು ಈ ಪ್ರಶಸ್ತಿಯನ್ನು ಪಡೆಯುವುದು ಒಂದು ಬಗೆ. ಒಂದು ಕ್ಷೇತ್ರದಲ್ಲಿ ಹಿರಿಯರನ್ನು ಪಕ್ಕಕ್ಕಿಟ್ಟು ಕಿರಿಯರಿಗೆ ಪ್ರಶಸ್ತಿಯನ್ನು ನೀಡಿ, ಅದೆಷ್ಟೋ ವರ್ಷಗಳ ಬಳಿಕ ಹಿರಿಯರನ್ನು ಗುರುತಿಸುವುದು ಪರೋಕ್ಷವಾಗಿ ಅವರನ್ನು ಅವಮಾನಿಸಿದಂತೆಯೇ ಸರಿ.ಇಂತಹ ಅವಮಾನದಿಂದ ಹಲವು ಹಿರಿಯರು ನೊಂದದ್ದಿದೆ. ಪ್ರಶಸ್ತಿಯ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಿದೆ.
ಕಳೆದ ಬಾರಿ ಕರ್ನಾಟಕದ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಯವರಿಗೆ ಕೇಂದ್ರ ಸರಕಾರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿತ್ತು.ಅದೇ ಸಂದರ್ಭದಲ್ಲಿ ಅವರಿಗಿಂತ ಕಿರಿದು ಸಾಧನೆ ಮಾಡಿದವರು ಪದ್ಮವಿಭೂಷಣ ಪ್ರಶಸ್ತಿಯನ್ನು ಪಡೆದುಕೊಂಡರು.ಇದೊಂದು ರೀತಿಯಲ್ಲಿ ಪ್ರಶಸ್ತಿಯ ಮೂಲಕ ಅವರ ಸಾಧನೆಗಳನ್ನು ತೂಗಿ, ಅದರ ಬೆಲೆ ಹೇಳಿದಂತೆಯೇ ಅಲ್ಲವೇ?ಸಿದ್ದಗಂಗಾ ಸ್ವಾಮೀಜಿಯವರಿಗೆ ಭಾರತ ರತ್ನ ನೀಡಬೇಕು ಎನ್ನುವುದು ರಾಷ್ಟ್ರಮಟ್ಟದಲ್ಲಿ ಕೇಳಿ ಬರುವ ಒತ್ತಾಯವಾಗಿದೆ. ಇಂತಹ ಸಂದರ್ಭದಲ್ಲಿ ಎಲ್ಲ ಅರ್ಹತೆಯಿದ್ದು, ಅವರನ್ನು ಪದ್ಮವಿಭೂಷಣಕ್ಕೆ ಆಯ್ಕೆ ಮಾಡದೇ ಪದ್ಮಭೂಷಣ ಪ್ರಶಸ್ತಿ ನೀಡುವ ಮೂಲಕ ಸರಕಾರ ನೀಡಿರುವ ಸಂದೇಶವಾದರೂ ಏನು?ಇದಿಷ್ಟೇ ಅಲ್ಲ. ಈ ಬಾರಿಯ ಪದ್ಮವಿಭೂಷಣ ಪ್ರಶಸ್ತಿಯನ್ನು ಶ್ರೀ ರವಿಶಂಕರ್ ಅವರಿಗೆ ನೀಡಲಾಗಿದೆ. ರವಿಶಂಕರ್ ಯಾವುದೇ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡವರಲ್ಲ.ಕಲಿಯುವ ವಿದ್ಯಾರ್ಥಿಗಳಿಗೆ ದಾಸೋಹ ನೀಡುವುದು ಪಕ್ಕಕ್ಕಿರಲಿ, ಒಂದು ತುತ್ತು ಅನ್ನ ಹಾಕಿದವರೂ ಅಲ್ಲ.ಹೀಗಿರುವಾಗ, ಮಹಾಸಾಧಕರಾಗಿರುವ ಸಿದ್ದಗಂಗಾ ಸ್ವಾಮೀಜಿಗಳಿಗೆ ಪದ್ಮಭೂಷಣ ಕೊಟ್ಟು, ಸಮಯಸಾಧಕ ಎಂದು ಮಾಧ್ಯಮಗಳಲ್ಲಿ ಕುಖ್ಯಾತಿ ಗಳಿಸಿರುವ ರವಿಶಂಕರ್‌ಗೆ ಪದ್ಮ ವಿಭೂಷಣ ಕೊಟ್ಟಿರುವುದು ಸಿದ್ದಗಂಗಾ ಸ್ವಾಮೀಜಿಗಳ ಸಾಧನೆಗೆ ಸರಕಾರ ಅವಮಾನ ಮಾಡಿದಂತಲ್ಲವೇ?
ಇಷ್ಟಕ್ಕೂ ರವಿಶಂಕರ್ ಮಾಡಿದ ಸಾಧನೆಯಾದರೂ ಏನು? ಯೋಗದ ಹೆಸರಿನಲ್ಲಿ ಮಂಕು ಮರುಳು ಮಾಡಿ ಅದನ್ನು ಮಾರಿ ದುಡ್ಡು ಮಾಡಿದ್ದು ಹೊರತು ಪಡಿಸಿದರೆ ಅವರಿಂದ ಸಮಾಜಕ್ಕೆ ಸಿಕ್ಕಿದ್ದು ಶೂನ್ಯ.ಎಲ್ಲಕ್ಕಿಂತ ಮುಖ್ಯವಾಗಿ ಅಕ್ರಮವಾಗಿ ಭೂ ಒತ್ತುವರಿ ಮಾಡಿಕೊಂಡಿರುವ ಕುರಿತಂತೆ ಹಲವು ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.ಅವರ ಬಗ್ಗೆ ಇರುವಂತಹ ಆರೋಪಗಳು ಒಂದೆರಡಲ್ಲ.ವೈಯಕ್ತಿಕವಾಗಿ ಚಾರಿತ್ರವನ್ನು ಶುಚಿಯಾಗಿಟ್ಟುಕೊಳ್ಳದ ರವಿಶಂಕರ್‌ರಿಂದ ಸಮಾಜಕ್ಕೆ ಕೆಡುಕಾಗಿರುವುದೇ ಅಧಿಕ.ಹೀಗಿರುವಾಗ, ಸಿದ್ದಗಂಗಾ ಸ್ವಾಮೀಜಿಯವರಿಗಿಂತಲೂ ಹಿರಿದಾದ ಪ್ರಶಸ್ತಿಯನ್ನು ನೀಡುವ ಮೂಲಕ ಸರಕಾರ, ಸಮಾಜಕ್ಕೆ ಯಾವ ಸಂದೇಶವನ್ನು ನೀಡಲು ಹೊರಟಿದೆ?ಇದರಿಂದಾಗಿ ಪದ್ಮವಿಭೂಷಣ ಪ್ರಶಸ್ತಿಯ ಘನತೆ ಕಿರಿದಾಯಿತೇ ಹೊರತು, ಬೇರೇನೂ ಲಾಭವಾಗಲಿಲ್ಲ. ಈ ಹಿಂದೆ ಪದ್ಮವಿಭೂಷಣ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಗಣ್ಯರು ಒಳಗೊಳಗೆ ಮುಜುಗರ ಪಟ್ಟುಕೊಳ್ಳುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಇದೇ ಸಂದರ್ಭದಲ್ಲಿ ಸರಕಾರವೂ ಈ ಬಾರಿ ಬಹಳ ಜಾಗರೂಕತೆಯಿಂದ, ತನ್ನ ನಿಲುವಿನ ಜೊತೆಗಿರುವವರಿಗೇ ಪ್ರಶಸ್ತಿಯನ್ನು ಘೋಷಿಸಿದೆ. ಅಸಹಿಷ್ಣುತೆಯ ವಿರುದ್ಧ ಪ್ರಶಸ್ತಿ ವಾಪಸ್ ಚಳವಳಿ ತೀವ್ರವಾಗಿರುವ ಈ ದಿನಗಳಲ್ಲಿ, ಪ್ರಶಸ್ತಿ ಪಡೆಯುವುದೇ ಅವಮಾನ ಎನ್ನುವಂತಹ ವಾತಾವರಣವಿದೆ. ಪ್ರಶಸ್ತಿಯನ್ನು ವಾಪಸ್ ಮಾಡುವುದೇ ಘನತೆಯ ಕಾರ್ಯ ಎಂದು ಚಿಂತಕರು, ಗಣ್ಯರು ತಿಳಿದುಕೊಂಡ ಸಮಯ. ಈ ಸಮಯದಲ್ಲಿ ಪ್ರಶಸ್ತಿಯನ್ನು ನೀಡಿದರೆ ಎಲ್ಲಿ ಅವರು ವಾಪಸ್ ಮಾಡಿ ಬಿಟ್ಟು ಸರಕಾರಕ್ಕೆ ಮುಜುಗರವನ್ನು ತರುತ್ತಾರೆಯೋ ಎಂದು ಸರಕಾರ ಕೂಡ ಬಹಳ ಜಾಗರೂಗತೆಯಿಂದ ಪದ್ಮ ಪ್ರಶಸ್ತಿಯನ್ನು ಘೋಷಿಸಿದಂತಿದೆ. ಪರಿಣಾಮವಾಗಿ, ಕೇಂದ್ರ ಸರಕಾರವನ್ನು ಬೆಂಬಲಿಸುವ ಹಲವು ಕಲಾವಿದರು, ಜನಪ್ರಿಯ ಕಾದಂಬರಿಕಾರರು ಈ ಬಾರಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಾದಂಬರಿಯ ಹೆಸರಿನಲ್ಲಿ ಸಂಘಪರಿವಾರದ ಕರಪತ್ರವನ್ನು ಬರೆಯುವ ಎಸ್. ಎಲ್. ಭೈರಪ್ಪರಿಗೆ ಪದ್ಮಪ್ರಶಸ್ತಿ ದೊರಕಿದೆ. ಅಂತೆಯೇ ಅಸಹಿಷ್ಣುತೆಯಿಲ್ಲ ಎಂದು ಸಾಬೀತು ಮಾಡಲು ಬೀದಿಗಿಳಿದು ತೀವ್ರ ವ್ಯಂಗ್ಯ ತಮಾಷೆಗೊಳಗಾಗಿದ್ದ ಅನುಪಮ್ ಖೇರ್, ಮಧುರ್ ಭಂಡಾರ್ಕರ್ ಮೊದಲಾದವರಿಗೂ ಪದ್ಮಶ್ರೀ ದೊರಕಿರುವುದು ಅರ್ಥಪೂರ್ಣವಾಗಿದೆ. ಒಟ್ಟಿನಲ್ಲಿ, ಪದ್ಮ ಪ್ರಶಸ್ತಿ ಆಯ್ಕೆಯ ಸಂದರ್ಭದಲ್ಲಿ ಈ ಹಿಂದೆ ಎಂದೂ ನಡೆಯದಷ್ಟು ರಾಜಕೀಯ ಹಸ್ತಕ್ಷೇಪ ಈ ಬಾರಿ ನಡೆದಿದೆ. ಹಲವು ಗಣ್ಯರು, ನಿಜವಾದ ಸಾಧಕರು ತಮಗೆ ಪದ್ಮ ಪ್ರಶಸ್ತಿ ದೊರಕದೇ ಇದ್ದುದಕ್ಕಾಗಿ ಈ ಬಾರಿ ನಿರಾಳವಾದ ನಿಟ್ಟುಸಿರನ್ನು ಬಿಟ್ಟಿದ್ದಾರೆ.







