ನಿಯಮ ಉಲ್ಲಂಘನೆ; ‘108’ ಆ್ಯಂಬುಲೆನ್ಸ್‌ಗಳ 450 ಸಿಬ್ಬಂದಿ ವಜಾ
ಬೆಂಗಳೂರು, ಜ.25: ಆರೋಗ್ಯ ಕವಚ (108) ಆ್ಯಂಬುಲೆನ್ಸ್‌ಗಳ ಕಾರ್ಯನಿರ್ವಹಣೆಯಲ್ಲಿ ನಿಯಮ ಉಲ್ಲಂಘನೆ ಮಾಡಿದ 450 ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಜಿ.ವಿ.ಕೆ.-ಇಎಂಆರ್‌ಐ ಸಂಸ್ಥೆಯ ಹಿರಿಯ ಕಾರ್ಯನಿರ್ವಹಣಾಧಿಕಾರಿ ಪರ್ವೇಝ್ ತಿಳಿಸಿದ್ದಾರೆ.
ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಕವಚ(108) ಆ್ಯಂಬುಲೆನ್ಸ್ ವಾಹನಗಳ ದಾಖಲೆಗಳ ನಿರ್ವಹಣೆ, ಸಮವಸ್ತ್ರಗಳನ್ನು ಧರಿಸದೇ ಕಾರ್ಯನಿರ್ವಹಿಸುತ್ತಿದ್ದ ಮತ್ತು ವಾಹನಗಳ ಶುಚಿತ್ವವನ್ನು ಕಾಪಾಡುವಲ್ಲಿ ವಿಫಲವಾಗಿದ್ದ 450 ಮಂದಿ ನೌಕರರನ್ನು ವಜಾಗೊಳಿಸಲಾಗಿದೆ ಎಂದು ತಿಳಿಸಿದರು.
ನಿಯಮವನ್ನು ಉಲ್ಲಂಘಿಸುತ್ತಿದ್ದ ಸಿಬ್ಬಂದಿಗೆ ನಿಯಮ ಪಾಲಿಸುವಂತೆ ಹಲವಾರು ಬಾರಿ ನೋಟಿಸ್ ಜಾರಿ ಮಾಡಿದರೂ ನೌಕರರು ತಮ್ಮ ಚಾಳಿಯನ್ನು ಮುಂದುವರಿಸುತ್ತಿದ್ದರು. ಅಲ್ಲದೆ ತುರ್ತು ಸಂದರ್ಭಗಳಲ್ಲಿ ರೋಗಿಗಳ ಜೊತೆಯಲ್ಲಿ ಅಸಭ್ಯ ವರ್ತನೆ ಹಾಗೂ ಹಣ ವಸೂಲಿ ಮಾಡಿರುವ ಹಿನ್ನೆಲೆಯಲ್ಲಿ ಈ 450 ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಶರತ್ತುಗಳನ್ನು ಒಪ್ಪಿಕೊಂಡವರಿಗೆ ಸಂಬಳ ಹೆಚ್ಚಳ: ಆರೋಗ್ಯ ಕವಚ (108) ಆ್ಯಂಬುಲೆನ್ಸ್‌ಗಳ ನೌಕರರು ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಸರಕಾರ ಜ.14ರಂದು 6.64 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ. ಹೀಗಾಗಿ ಸೇವಾ ಕಾರ್ಯವನ್ನು ಉತ್ತಮಗೊಳಿಸಲು ಶರತ್ತುಬದ್ಧ ನಿಯಮಗಳಿಗೆ ಸಹಿಹಾಕಿದ ಆರೋಗ್ಯ ಕವಚ (108) ಆ್ಯಂಬುಲೆನ್ಸ್‌ಗಳ ನೌಕರರಿಗೆ ಜ.23ರಂದೇ ಹೆಚ್ಚುವರಿ ಸಂಬಳವನ್ನು ನೀಡ ಲಾಗಿದೆ. ಇದುವರೆಗೂ 200 ಮಂದಿ ನೌಕರರು ಶರತ್ತುಬದ್ಧ ನಿಯಮಗಳನ್ನು ಒಪ್ಪಿ ಸಹಿಹಾಕಿದ್ದಾರೆ. ಹಾಗೂ ಹೊಸದಾಗಿ 900 ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ: ಆರೋಗ್ಯ ಕವಚ (108) ಆ್ಯಂಬುಲೆನ್ಸ್‌ಗಳ ನೌಕರರು ಮುಷ್ಕರ ನಡೆಸುತ್ತಿರುವುದರಿಂದ 108 ಆ್ಯಂಬುಲೆನ್ಸ್ ಸೇವೆಗೆ ಅಡ್ಡಿಯಾಗದಂತೆ, ಅಗತ್ಯವಿರುವ ಕೆಎಸ್ಸಾರ್ಟಿಸಿ ಹಾಗೂ ಬಿಎಂಟಿಸಿ ಚಾಲಕರನ್ನು ಮತ್ತು ಸರಕಾರಿ ಆಸ್ಪತ್ರೆಯ ಶುಶ್ರೂಷಕರನ್ನು ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.





