ದಿನೇಶ್ ಅಮೀನ್ ಮಟ್ಟು ಹೇಳಿಕೆ; ಸಿಎಂ ಸ್ಪಷ್ಟೀಕರಣಕ್ಕೆ ಸುರೇಶ್ ಕುಮಾರ್ ಆಗ್ರಹ
ಬೆಂಗಳೂರು, ಜ. 25: ಭಯೋತ್ಪಾದನೆಗೆ ಕೋಮುಬಣ್ಣ ಹಚ್ಚುವುದು ಸರಿಯಲ್ಲ ಎಂದು ಆಕ್ಷೇಪಿಸಿರುವ ಮಾಜಿ ಸಚಿವ ಎಸ್.ಸುರೇಶ್ ಕುಮಾರ್, ಶಂಕಿತ ಆರೋಪಿಗಳ ಬಂಧನ ಸಂಬಂಧ ಸಿಎಂ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ನೀಡಿರುವ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿನ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಹೀಗಾಗಿ ಪಕ್ಷಾತೀತವಾಗಿ ಎಲ್ಲ ಸರಕಾರಗಳು ಹಾಗೂ ಸಾರ್ವಜನಿಕರು ಭಯೋತ್ಪಾದನೆ ಕೃತ್ಯಗಳನ್ನು ತಡೆಗಟ್ಟಬೇಕು ಎಂದರು.
ದಿನೇಶ್ ಅಮೀನ್ ಮಟ್ಟು ಅವರು ಶನಿವಾರ ಕಾರ್ಯ ಕ್ರಮವೊಂದರಲ್ಲಿ ನೀಡಿರುವ ಹೇಳಿಕೆ ಖಂಡನೀಯ. ರಾಜ್ಯದಲ್ಲಿ ಶಂಕಿತ ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ಖುದ್ದು ಗೃಹ ಸಚಿವರೇ ಹೇಳಿಕೆ ನೀಡಿದ್ದು, ಮಾಧ್ಯಮ ಸಲಹೆಗಾರರ ಹೇಳಿಕೆ ಸಲ್ಲ ಎಂದು ಸುರೇಶ್ ಕುಮಾರ್ ಟೀಕಿಸಿದರು.
ಮಾಧ್ಯಮ ಸಲಹೆಗಾರರು ಸರಕಾರದ ನಿಲುವುಗಳಿಗೆ ಬದ್ಧರಾಗಿರಬೇಕು. ಆದರೆ, ಅವರ ಹೇಳಿಕೆಯನ್ನು ಗಮನಿಸಿದರೆ ರಾಜ್ಯ ಸರಕಾರದಲ್ಲಿ ವೈರುಧ್ಯಗಳಿರುವುದು ಸ್ಪಷ್ಟ ಎಂದ ಸುರೇಶ್ ಕುಮಾರ್, ದಿನೇಶ್ ಅಮೀನ್ ಮಟ್ಟು ತಮ್ಮ ಕಾರ್ಯ ಮಿತಿಯನ್ನು ಅರಿತು ಕಾರ್ಯ ನಿರ್ವಹಿಸಬೇಕೆಂದು ಹೇಳಿದರು.





